ಸಿದ್ದಾಪುರ : ಬಡಗು ತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಮೂರೂರು ವಿಷ್ಣು ಗಜಾನನ ಭಟ್ (65) ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವ ಮಠದಲ್ಲಿ ದಿನಾಂಕ 09-10-2023ರ ಭಾನುವಾರದಂದು ನಿಧನ ಹೊಂದಿದರು. ಶ್ರೀಯುತರ ಅಂತ್ಯ ಸಂಸ್ಕಾರ ಭಾನ್ಕುಳಿ ಮಠದ ಶಂಕರಗಿರಿಯಲ್ಲಿ ನಡೆಯಿತು.
ಮೂಲತಃ ಕುಮಟಾ ತಾಲೂಕಿನ ಮೂರೂರಿನವರಾದ ಅವರು ಸದ್ಯ ಸಿದ್ಧಾಪುರದ ಭಾನ್ಕುಳಿಯಲ್ಲಿ ವಾಸವಾಗಿದ್ದರು. ಮೂರೂರು ವಿಷ್ಣುಭಟ್ ಅವರ ಸ್ತ್ರೀ ವೇಶಕ್ಕೆ ಎಲ್ಲಿಲ್ಲದ ಖ್ಯಾತಿ ಇತ್ತು. ಭಾವಪೂರ್ಣ ಅಭಿನಯ ಮತ್ತು ಮಾತುಗಾರಿಕೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ತನ್ನೆಡೆಗೆ ಸೆಳೆದು ಕೊಂಡವರು. ಭೀಷ್ಮ ವಿಜಯದ ಅಂಬೆ, ಜಮದಗ್ನಿಯ ರೇಣುಕಾ, ದುಷ್ಟಬುದ್ಧಿ ಆಖ್ಯಾನಾದ ವಿಷಯೆ, ರಾಮಾಂಜನೇಯದ ಸೀತೆ, ದಕ್ಷಯಜ್ಞದ ದಾಕ್ಷಾಯಿಣಿ, ಹರಿಶ್ಚಂದ್ರನ ಚಂದ್ರಮತಿ, ನಳ ಚರಿತ್ರೆಯ ದಮಯಂತಿ, ಸುಭದ್ರೆ, ಪ್ರಭಾವತಿ ಮೊದಲಾದ ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದರು. ಕೇವಲ ಸ್ತ್ರೀ ಪಾತ್ರವಲ್ಲದೆ ಪೋಷಕ ಪಾತ್ರಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಹೆಸರುವಾಸಿಯಾಗಿದ್ದರು.
ಗುಂಡುಬಾಳ, ಅಮೃತೇಶ್ವರೀ, ಹಿರೇಮಹಾಲಿಂಗೆಶ್ವರ, ಶಿರಸಿ, ಪೆರ್ಡೂರು, ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾ ಸೇವೆಗೈದಿದ್ದರು. ಯಕ್ಷಗಾನ ಕಲಾರಂಗ ಪ್ರಶಸ್ತಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಅವರು ಪತ್ನಿ ಶ್ರೀಮತಿ, ಪುತ್ರ ಆದರ್ಶ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.