ಚಾಮರಾಜನಗರ : ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ, ಜಿಲ್ಲಾ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬೀದಿ ನಾಟಕ ಉತ್ಸವ, ಸಫ್ದರ್ ಹಶ್ಮಿ ಪ್ರಶಸ್ತಿ ಪ್ರದಾನ ಹಾಗೂ ವಿಚಾರ ಸಂಕಿರಣಗಳು ನಗರದ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ದಿನಾಂಕ 25-11-2023ರಂದು ನಡೆದವು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗ ಶೆಟ್ಟಿ “ಬೀದಿ ನಾಟಕ ಕಲಾವಿದರು ಸಮಾಜದಲ್ಲಿರುವ ಮೌಡ್ಯ ಹಾಗೂ ಕಂದಾಚಾರಗಳ ವಿರುದ್ಧ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಬೀದಿ ನಾಟಕ ಕಲಾವಿದರ ಪಾತ್ರ ಅಪಾರವಾಗಿದೆ. ಸರ್ಕಾರ ತನ್ನ ಯೋಜನೆಗಳ ಅನುಷ್ಠಾನಕ್ಕೆ ಕಲಾವಿದರನ್ನು ಬಳಸಿಕೊಂಡು ಮರೆಯದೇ ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಜಾನಪದ ಕಲೆಗಳ ತವರಾದ ಜಿಲ್ಲೆಯಲ್ಲಿ ಸಾವಿರಾರು ಕಲಾವಿದರು ಹಲವು ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಜಾನಪದ ಕಲೆಯನ್ನು ಪ್ರೋತ್ಸಾಹಿಸುವಂತೆ, ಬೀದಿನಾಟಕ ಕಲಾವಿದರನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ಹೇಳಿದರು.
ಬೀದಿನಾಟಕ ಕಲಾತಂಡಗಳ ರಾಜ್ಯಾಧ್ಯಕ್ಷ ಪಿ.ಮಹೇಶ್ ಮಾತನಾಡಿ “ಬೀದಿ ನಾಟಕಕ್ಕೆ ಸುಮಾರು 40-50 ವರ್ಷಗಳ ಇತಿಹಾಸವಿದೆ. 2019ರಲ್ಲಿ ಬೀದಿ ನಾಟಕ ಒಕ್ಕೂಟವನ್ನು ರಚನೆ ಮಾಡಲಾಗಿದ್ದು, ರಾಜ್ಯದ 500ಕ್ಕೂ ಹೆಚ್ಚು ಬೀದಿನಾಟಕ ಕಲಾತಂಡಗಳಲ್ಲಿ 12 ಸಾವಿರಕ್ಕೂ ಹೆಚ್ಚು ಕಲಾವಿದರು ಇರುವುದಾಗಿ ತಿಳಿಸಿದರು. ಸರ್ಕಾರ ಬೀದಿ ನಾಟಕ ಕಲಾವಿದರಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕು. ಉತ್ತಮ ಸ್ಥಾನಮಾನ ಕೊಟ್ಟು ಅವರ ಬದುಕಿಗೆ ಆಸರೆಯಾಗಬೇಕು. ಬೀದಿ ನಾಟಕ ಅಕಾಡೆಮಿ ಸ್ಥಾಪಿಸಬೇಕು. ಕಲಾವಿದರ ಮಾಸಾಶನ ಹೆಚ್ಚಳ ಮಾಡಬೇಕು.” ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಹಾಸನ ಜಿಲ್ಲೆಯ ಕಲಾವಿದ ಗ್ಯಾರಂಟಿ ರಾಮಣ್ಣ, ರಾಯಚೂರಿನ ಡಿಂಗ್ರಿ ನರಸಪ್ಪ, ಧಾರವಾಡದ ಸಾಂಬಯ್ಯ ಸಂಗಯ್ಯ ಹಿರೇಮಠ್, ಬಳ್ಳಾರಿಯ ಸಾಂಬಶಿವ ದಳವಾಯಿ, ಚಾಮರಾಜನಗರದ ಶಾಂತರಾಜು ಎಸ್., ತುಮಕೂರಿನ ಡಿ.ಸಿ.ಕುಮಾರ್, ಹಾವೇರಿಯ ಲತಾ ಪಾಟೀಲ ಮತ್ತು ವಿಜಯನಗರ ಜಿಲ್ಲೆಯ ಕಲಾವಿದೆ ಸರ್ವಮಂಗಳ ಕೆ. ಅವರಿಗೆ ರಾಜ್ಯ ಮಟ್ಟದ ‘ಸಫ್ದರ್ ಹಶ್ಮಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನಂತರ ನಡೆದ ವಿಚಾರ ಸಂಕಿರಣದಲ್ಲಿ ಮಸೂರು ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ‘ಬೀದಿ ನಾಟಕಗಳ ಉಗಮ, ಅಳಿವು ಉಳಿವು’ ಮತ್ತು ರಂಗನಿರ್ದೇಶಕಿ ಕೆ.ಆರ್. ಸುಮತಿ ‘ಬೀದಿ ನಾಟಕ ಕಲಾವಿದರ ಬದುಕು ಭವಿಷ್ಯ’ ಎಂಬ ವಿಷಯದ ಬಗ್ಗೆ ಮಾತನಾಡಿದರು.
ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ರಂಗಕರ್ಮಿಗಳಾದ ಕೆ.ಆರ್.ಸುಮತಿ, ಕೆ.ವೆಂಕಟರಾಜು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು), ಹಿರಿಯ ಕಲಾವಿದ ಗ್ಯಾರೆಂಟಿ ರಾಮಣ್ಣ, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಕಲಾವಿದ ಪುರುಷೋತ್ತಮ್ ಒಕ್ಕೂಟದ ಪದಾಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.