ಮೂಡುಬಿದಿರೆ : ಪ್ಲಾಸ್ಟಿಕ್ ಅತಿ ಬಳಕೆ ಹಾಗೂ ಅವೈಜ್ಞಾನಿಕ ವಿಲೇವಾರಿಯಿಂದ ಕ್ಯಾನ್ಸರ್‌ಕಾರಕ ರೋಗಕ್ಕೆ ತುತ್ತಾಗಬಹುದು. ಕ್ಯಾನ್ಸರ್ ಮಾತ್ರವಲ್ಲ, ಹಲವಾರು ರೋಗರುಜಿನಗಳಿಗೆ ಆಗರವಾಗಬಹುದು. ನಿಮಗಿದು ಗೊತ್ತಾ…? ಹಾಗಿದ್ದರೆ ತಡ ಯಾಕೆ ಕಸವನ್ನು ಹಸಿ- ಒಣ ಎಂದು ವಿಂಗಡಣೆ ಮಾಡಿ, ವಿಲೇವಾರಿ ಮಾಡಿ…
ದಿನಾಂಕ 09-02-2024ರಂದು ಮೂಡುಬಿದಿರೆಯ ವಾರದ ಸಂತೆಯ ಶುಕ್ರವಾರ ಸಂಜೆ ಜನನಿಬಿಡದ ಸ್ವರಾಜ್ಯ ಮೈದಾನ ಹಾಗೂ ಬಸ್ ನಿಲ್ದಾಣದ ಬಳಿ ಪರಿಸರ ಕಾಳಜಿಯನ್ನು ಮೂಡಿಸಿದ್ದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಕ್ತ ಆಯ್ಕೆ ವಿಷಯದ ವಿದ್ಯಾರ್ಥಿಗಳು.
ಮೂಡುಬಿದಿರೆ ಪುರಸಭೆ ಸಹಯೋಗದಲ್ಲಿ ಕಸ ವಿಲೇವಾರಿ ಮಹತ್ವ, ಪ್ಲಾಸ್ಟಿಕ್ ಅಪಾಯದ ಕುರಿತು ಬೀದಿ ನಾಟಕ ಮಾಡಿದ ವಿದ್ಯಾರ್ಥಿಗಳು ಸೇರಿದ್ದ ಜನರ ಮನ ಸೆಳೆದರು. ಪರಿಸರ ಕಾಳಜಿಯ ಸಂದೇಶ ಸಾರಿದರು. ಅಷ್ಟು ಮಾತ್ರವಲ್ಲ, ಕಸವನ್ನು ಯಾವ ರೀತಿ ವಿಂಗಡಣೆ ಮಾಡಬೇಕು? ಎಲ್ಲಿ ಎಸೆಯಬೇಕು? ನಿರ್ಲಕ್ಷ್ಯದ ಪರಿಣಾಮ ಏನು? ಎಂಬಿತ್ಯಾದಿ ವಿವರಗಳನ್ನು ಸಂಭಾಷಣೆ, ಅಭಿನಯ, ಪ್ರಾತ್ಯಕ್ಷಿಕೆಗಳ ರಂಗ ರೂಪದ ಮೂಲಕ ಪ್ರೇಕ್ಷಕರಿಗೆ ಮನದಟ್ಟು ಮಾಡಿದರು. ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಧೀಂದ್ರ ಶಾಂತಿ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆಯ ಮುಖ್ಯಾಧಿಕಾರಿಯಾದ ಇಂದು ಎಂ. ಮಾತನಾಡಿ “ಕಸವನ್ನು ಕಂಡ ಕಂಡ ಕಡೆ ಎಸೆಯಬಾರದು. ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಮಾತ್ರ ತ್ಯಾಜ್ಯ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಜನರ ಸಹಕಾರ ಮುಖ್ಯ. ಎಲ್ಲರೂ ಕೈ ಜೋಡಿಸಿದಾಗ ಸಮಾಜ ಸ್ವಚ್ಛಗೊಳಿಸಲು ಸಾಧ್ಯ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ.” ಎಂದರು.
ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ “ತ್ಯಾಜ್ಯ ವಿಲೇವಾರಿ ಅಥವಾ ಸ್ವಚ್ಛತೆಗೆ ಪುರಸಭೆ ಖರ್ಚು ಮಾಡುವ ಹಣವು ಜನರ ತೆರಿಗೆಯದ್ದು. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ನಿಮ್ಮ ಹಣವನ್ನು ನೀವೇ ಎಸೆದಂತೆ. ಕಸವನ್ನು ಸಮರ್ಪಕ ವಿಲೇವಾರಿ ಮಾಡಿದಲ್ಲಿ, ಪುರಸಭೆಯು ಅನುದಾನವನ್ನು ರಸ್ತೆ, ನೀರು ಹಾಗೂ ಇತರ ಅಭಿವೃದ್ಧಿಗೆ ಬಳಸಬಹುದು. ಆ ಮೂಲಕ ನಿಮ್ಮ ಪಟ್ಟಣದ ಅಭಿವೃದ್ಧಿಯನ್ನು ನೀವೇ ಮಾಡಬಹುದು. ಪೌರಕಾರ್ಮಿಕರೂ ಮನುಷ್ಯರು. ನೀವು ಕಸ ವಿಂಗಡಣೆ ಮಾಡದಿದ್ದರೆ, ಅವರು ಹೇಗೆ ಕೆಲಸ ಮಾಡಲು ಸಾಧ್ಯ. ಏಕರೂಪದ ಪ್ಲಾಸ್ಟಿಕ್ ಬಳಕೆ ಮಾಡಬೇಡಿ. ಆಳ್ವಾಸ್ ವಿದ್ಯಾರ್ಥಿಗಳು ನಾಟಕದ ಮೂಲಕ ಪರಿಣಾಮಕಾರಿಯಾಗಿ ಈ ವಿಚಾರಗಳನ್ನು ಬಿಂಬಿಸಿದ್ದಾರೆ.” ಎಂದು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ “ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಹಿಂದೆ ಬೀದಿ ನಾಟಕಗಳ ಮೂಲಕ ಜನರಿಗೆ ಪರಿಣಾಮಕಾರಿಯಾಗಿ ಮಾಹಿತಿ ತಲುಪಿಸಲಾಗುತ್ತಿತ್ತು. ಸಮುದ್ರ ತೀರ, ಅಳಿವೆ, ನದಿಗಳಲ್ಲಿ ಏಕೆ ಸ್ವಚ್ಛತಾ ಆಂದೋಲನ ಎಂದು ಜನರು ಪ್ರಶ್ನಿಸುತ್ತಾರೆ. ಇಲ್ಲಿ ಹಾಕಿದ ಕಸಗಳೇ ರಾಶಿಯಾಗಿ ಅಲ್ಲಿಗೆ ಬಂದಿರುತ್ತವೆ. ನಾವು ಎಸೆಯುವ ಒಂದು ಕಸ ಎಷ್ಟು ಹಾನಿ ಮಾಡುತ್ತದೆ ಎಂದು ತಿಳಿದುಕೊಳ್ಳಿ.” ಎಂದರು.
ಪುರಸಭೆ ಸದಸ್ಯರಾದ ರಾಜೇಶ್ ನಾಯ್ಕ, ಶಕುಂತಳಾ ಹರೀಶ್ ದೇವಾಡಿಗ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಯತಿರಾಜ್ ಶೆಟ್ಟಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಧೀಕ್ಷಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ವಂದಿಸಿದರು.