ಧಾರವಾಡ : ಹಿರಿಯರಂಗ ಸಂಸ್ಥೆ ಅಭಿನಯ ಭಾರತಿ (ರಿ.) ಧಾರವಾಡ ಇವರು ದಿನಾಂಕ 06 ಮತ್ತು 07 ಜುಲೈ 2025ರಂದು ಧಾರವಾಡದ ಕರ್ಣಾಟಕ ಕಾಲೇಜ್ ಆವರಣದಲ್ಲಿರುವ ಸೃಜನ ಡಾ. ಅಣ್ಣಾಜಿ ರಾವ್ ಶಿರೂರ್ ರಂಗ ಮಂದಿರದಲ್ಲಿ ಸ್ತ್ರೀ ಸಂವೇದನೆಯ ವಿವಿಧ ಆಯಾಮಗಳನ್ನು ತೋರುವ ಮೂರು ಏಕವ್ಯಕ್ತಿ ಮಹಿಳಾ ರಂಗ ಪ್ರಯೋಗಗಳನ್ನು ಏರ್ಪಡಿಸಿದೆ.
ದಿನಾಂಕ 06 ಜುಲೈ 2025ರಂದು ಸಂಜೆ 6-00 ಗಂಟೆಗೆ ಸುಪ್ರಸಿದ್ಧ ಹಿರಿಯ ರಂಗ ನಟಿ ಶ್ರೀಮತಿ ಉಮಾಶ್ರೀ ಅವರ ಮನೋಜ್ಞ ಅಭಿನಯದ ‘ಶರ್ಮಿಷ್ಠೆ’ ಎಂಬ ರಂಗ ಪ್ರಯೋಗವು ಸ್ತ್ರೀವಾದದ ನೆಲೆಯಲ್ಲಿ ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯನ್ನು ಎತ್ತಿ ತೋರುತ್ತದೆ. ಇಂದಿನ ಸಾಮಾಜಿಕ ಚೌಕಟ್ಟಿನೊಳಗೆ ಬೇರೂರಿರುವ ಅಸಮಾನತೆಯು ಅಸುರ ಗುರು ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ರಾಣಿ ಪದವಿವೆಗೇರಿಸಿದರೆ, ಶರ್ಮಿಷ್ಠೆಯನ್ನು ಆಳಿನಂತೆ ನಡೆಸಿಕೊಳ್ಳಲಾಗುತ್ತದೆ. ಶರ್ಮಿಷ್ಠೆಯ ಮಗ ಪುರು ತಂದೆ ಯಯಾತಿಗಾಗಿ ತನ್ನ ತಾರುಣ್ಯವನ್ನು ತ್ಯಾಗ ಮಾಡಿ ಉದಾತ್ತತೆಯನ್ನು ಮೆರೆಯುತ್ತಾನೆ. ಭವಿಷ್ಯದಲ್ಲಿ ರಾಜತ್ವವನ್ನು ಪುನ: ಪಡೆದು, ಶರ್ಮಿಷ್ಠೆಯ ಮೌನಕ್ರಾಂತಿಯು ತನ್ನ ಅಸ್ಮಿತೆಯನ್ನು ಸಾರುವ ಭಾವನಾತ್ಮಕ ಹೋರಾಟದ ಪ್ರತಿಪಾದನೆಯನ್ನು ಮನೋಜ್ಞವಾಗಿ ಸಾರುತ್ತದೆ. ಬೇಲೂರು ರಘುನಂದನ ಅವರ ಲೇಖನಿಯಿಂದ ಮೂಡಿ ಬಂದ ಈ ಏಕವ್ಯಕ್ತಿ ರಂಗ ಪ್ರಯೋಗವು ಶ್ರೀ ಚಿದಂಬರರಾವ್ ಜಂಬೆ ಅವರ ಸಮರ್ಥ ನಿರ್ದೇಶನದಲ್ಲಿ ರಂಗಸಂಪದ ಬೆಂಗಳೂರು ತಂಡದಿಂದ ಪ್ರಸ್ತುತವಾಗಲಿದೆ.
ದಿನಾಂಕ 07 ಜುಲೈ 2025ರಂದು ಸಂಜೆ 6-00 ಗಂಟೆಗೆ ಮೊದಲ ಪ್ರಯೋಗ ಹುಬ್ಬಳ್ಳಿಯ ಸುನಿಧಿ ಕಲಾಸೌರಭ ತಂಡದಿಂದ ಶ್ರೀ ಸುಭಾಸ ನರೇಂದ್ರ ಅವರು ರಚಿಸಿ ನಿರ್ದೇಶಿಸಿದ, ‘ಅನಾಥರ ಮಾಯಿ’ ಎಂಬ ಏಕವ್ಯಕ್ತಿ ಪ್ರಯೋಗವು ಶ್ರೀಮತಿ ವೀಣಾ ಮೋಡಕ ಆಠವಲೆ ಇವರ ಅಭಿನಯದಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬಳ ಜೀವನ ಗಾಥೆಯು ಜೀವನದ ಕಷ್ಟ ಸುಖಗಳನ್ನು ಲೆಕ್ಕಿಸದೇ ಸಮಾಜದಲ್ಲಿ ತಲೆಯೆತ್ತಿ ನಿಲ್ಲುವ ಮಹಿಳೆಯೊಬ್ಬರ ಅಂತರಾಳವನ್ನು ಸಮರ್ಥವಾಗಿ ಬಿಂಬಿಸುತ್ತದೆ.
ಅಂದೇ ಸಂಜೆ 7-15 ಗಂಟೆಗೆ ಎರಡನೆಯ ನಾಟಕ ‘ಉರಿಯ ಉಯ್ಯಾಲೆ’ ಎಂಬ ಏಕವ್ಯಕ್ತಿ ಪ್ರಯೋಗವನ್ನು ಅಭಿನಯ ಭಾರತಿ, ಧಾರವಾಡ ಇವರು ಪ್ರಸ್ತುತಪಡಿಸಲಿದ್ದಾರೆ. ಇತ್ತೀಚಿಗೆ ನಿಧನ ಹೊಂದಿದೆ ಹಿರಿಯ ಕವಿ ಶ್ರೀ ಎಚ್.ಎಸ್. ವೆಂಕಟೇಶ ಮೂರ್ತಿ ಇವರಿಂದ ರಚಿತವಾದ ಏಕವ್ಯಕ್ತಿ ರಂಗ ಪ್ರಯೋಗವು ಧಾರವಾಡ, ಬೆಳಗಾವಿ ಹಾಗೂ ಬೆಂಗಳೂರುಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿತಗೊಂಡು ಮತ್ತೆ ಈಗ ರಂಗದ ಮೇಲೆ ಬರಲಿದೆ.
ಜಗತ್ತಿನ ಶ್ರೇಷ್ಠಕಾವ್ಯ ಮಹಾಭಾರತ. ಈ ಕಾವ್ಯದ ಒಡಲಿನಲ್ಲಿ ಸಾವಿರಾರು ಕಥೆ, ಕಾದಂಬರಿ ಹಾಗೂ ನಾಟಕಗಳು ಮೂಡಿಬಂದಿವೆ. ಮಹಾಭಾರತ ಬರೀ ಇತಿಹಾಸ ಅಥವಾ ಪುರಾಣವಲ್ಲ, ಅದು ಭಾರತೀಯ ಸಂಸ್ಕೃತಿಯ ಅನಾವರಣ. ನಮ್ಮ ನಿಮ್ಮೆಲ್ಲರ ಕಥೆಯೂ ಹೌದು. ಮಹಾಭಾರತದ ಕಥಾನಾಯಕಿ ದ್ರೌಪದಿ. ಪಾಂಚಾಲ ದೇಶದ ದ್ರುಪದ ರಾಜನ ಮಗಳು, ಯಜ್ಞ ಬಲದಿಂದ ಮೂಡಿ ಬಂದ ಚಿರಯೌವ್ವನೆ. ಮಹಾಭಾರತದ ಕಥೆ ಕಾಲಾತೀತವಾದರೂ ಮಾನವ ಸಹಜ ಆಮಿಷಗಳು ನಿಸರ್ಗ ಸಹಜ. ಕಾಲ ಧರ್ಮಕ್ಕೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಜೀವನ ಸಂಧ್ಯಾಕಾಲ ಆವರಿಸುತ್ತದೆ. ಯುದ್ಧ ನಂತರದ ಸಂದರ್ಭದಲ್ಲಿ ದ್ರೌಪದಿಯು ತನ್ನ ವರ್ಣ ರಂಜಿತ ಬದುಕಿನ ಪುಟಗಳನ್ನು ತೆರೆದು ನೋಡಿದಾಗ ಅವಳ ಬದುಕು ಜೀವನ ಜೋಕಾಲಿಯಾಗದೆ ಉರಿಯ ಉಯ್ಯಾಲೆಯಾಗಿರುತ್ತದೆ. ದ್ರೌಪದಿಯ ನೆನಪಿನ ಚಿತ್ರಗಳು ಮೆರವಣಿಗೆಯಂತೆ ಸಾಗಿ ಬರುತ್ತವೆ. ಶ್ರೀಮತಿ ಜ್ಯೋತಿ ಅವರ ಮನೋಜ್ಞ ಅಭಿನಯದಿಂದ ಜೀವನದ ಹಲವು ಭಾವನೆಗಳಿಗೆ ಬಣ್ಣ ಹಚ್ಚುತ್ತ ನಮ್ಮ ಅಂತ:ಕರಣದೊಡನೆ ಅನುಸಂಧಾನ ಮಾಡುತ್ತವೆ. ಶ್ರೀ ಶ್ರೀಪತಿ ಮಂಜನ ಬೈಲು ಇವರ ಸಮರ್ಥ ನಿರ್ದೇಶನದಲ್ಲಿ ಮಹಾಭಾರತದ ಎಳೆ ಎಳೆಗಳನ್ನು ಬಿಡಿಸಿ ತೋರುತ್ತದೆ.
ಈ ಮೂರು ಅಪರೂಪದ ನಾಟಕಗಳನ್ನು ಒಟ್ಟಾರೆ ನೋಡಲು ಪ್ರವೇಶ ಧನ 1,000/-. ಆದರೆ ಅಭಿನಯ ಭಾರತಿ ಪ್ರೇಕ್ಷಕರಾದವರಿಗೆ ಹಾಗೂ ಈಗಲೂ ಆಗುವವರಿಗೆ ಬರೀ ರೂ.5೦೦/- ನೀಡಿದರೆ ವಾರ್ಷಿಕ ಸದಸ್ಯತ್ವ ಪಡೆದು ಈ ವರ್ಷದ ಇತರ ಎಲ್ಲ ನಾಟಕಗಳನ್ನು ಹಾಗೂ ಇತರ ಕಾರ್ಯಕ್ರಮಗಳನ್ನು ಉಚಿತವಾಗಿ ನೋಡಬಹುದು ಎಂದು ಸಂಚಾಲಕ ಶ್ರೀ ಸಮೀರ ಜೋಶಿ ಅವರು ತಿಳಿಸುತ್ತಾರೆ. ಧಾರವಾಡದ ರಸಿಕ ರಂಗಪ್ರಿಯರು ಈ ಅಪರೂಪದ ಪ್ರಯೋಗಗಳನ್ನು ನೋಡಿ ಆನಂದಿಸಬಹುದು. ಹೆಚ್ಚಿನ ಮಾಹಿತಿಗಾಗಿ 80734 79394 ಮತ್ತು 98454 47002 ಸಂಖ್ಯೆಗಳನ್ನು ಸಂರ್ಪಕಿಸಬಹುದು.