ನಿರಂತರ ಪ್ರಯೋಗಶೀಲತೆ ಮತ್ತು ಸೃಜನಾತ್ಮಕತೆಯನ್ನು ತಮ್ಮ ಪರಿಕಲ್ಪನೆಗಳಲ್ಲಿ ಕಾಪಾಡಿಕೊಂಡು ಬಂದ`ಅಭಿವ್ಯಕ್ತಿ ಡಾನ್ಸ್ ಸೆಂಟರ್’ ಇದರ ಪ್ರತಿಭಾವಂತ ನಾಟ್ಯಗುರು – ನೃತ್ಯ ಕಲಾವಿದ ರಘುನಂದನ್, ಇತ್ತೀಚಿಗೆ ಸೇವಾಸದನದಲ್ಲಿ ಪ್ರದರ್ಶಿಸಿದ ‘ಹರಪನಹಳ್ಳಿ ಭೀಮವ್ವ- ವಾಗ್ಗೇಯ ನೃತ್ಯವೈಭವ-5’ ಸಂಶೋಧನಾತ್ಮಕ ಮತ್ತು ನಾಟಕೀಯ ಆಯಾಮಗಳಿಂದ ಗಮನಾರ್ಹವಾಗಿತ್ತು.
ಸದಾ ಹೊಸತನಕ್ಕೆ ತುಡಿಯುವ ರಘುನಂದನ್ ಪ್ರತಿಬಾರಿಯೂ ಏನಾದರೊಂದು ವಿಶಿಷ್ಟವಾದುದನ್ನು ಸಾಕಾರಗೊಳಿಸುವ ಬದ್ಧತೆಯುಳ್ಳವರು. ಹೊಸ ವಿಷಯಗಳ ಆಯ್ಕೆ, ಯಾಂತ್ರಿಕವಲ್ಲದ ರೂಪು-ರೇಷೆಗಳಿಗೆ ಜೀವ ಕೊಡುವ ಪರಿಕಲ್ಪನೆ ಇವರ ವೈಶಿಷ್ಟ್ಯ. ಇದುವರೆಗೂ ಇಂಥ ಅನ್ವೇಷಕ ಬಗೆಯ ‘ವಾಗ್ಗೇಯ ನೃತ್ಯ ವೈಭವ’ಗಳ ಸರಣಿಯನ್ನೇ ಅನಾವರಣಗೊಳಿಸುತ್ತ ಬಂದಿದ್ದು, ಇದೀಗ ದಾಸ ಸಾಹಿತ್ಯದಲ್ಲಿ ಪ್ರಮುಖ ಕೊಡುಗೆಯನ್ನಿತ್ತ ಅಪರೂಪದ ಹರಿದಾಸ ಮಹಿಳೆ ಎನಿಸಿರುವ ‘ಹರಪನಹಳ್ಳಿ ಭೀಮವ್ವ’ ಅವರು ರಚಿಸಿದ ಮೂರು ಕೃತಿಗಳನ್ನು ರಂಗದ ಮೇಲೆ ತಂದ ಖ್ಯಾತಿ ಇವರದು. ಅಂದು ‘ಅಭಿವ್ಯಕ್ತಿ’ ಡ್ಯಾನ್ಸ್ ಸೆಂಟರ್, ಭೀಮವ್ವ ಅವರು ರಚಿಸಿದ ‘ಸಂಕ್ಷೇಪ ರಾಮಾಯಣ’, ಶಿವ-ಪಾರ್ವತಿ ಸಲ್ಲಾಪ’ ಮತ್ತು ‘ಸುಧಾಮ ಚರಿತೆ’- ಎಂಬ ಮೂರು ಕೃತಿಗಳನ್ನು ಪ್ರದರ್ಶಿಸಿತು.
‘ಸಂಕ್ಷಿಪ್ತ ರಾಮಾಯಣ’ವನ್ನು ರಘುನಂದನ್ ತಮ್ಮ ನುರಿತ ಭರತನಾಟ್ಯದ ಅನುಭವದ ಮೂಸೆಯಲ್ಲಿ ಪ್ರದರ್ಶಿಸಿದರು. ‘ರಾಮ ಎನಬಾರದೇ’ ಎಂಬ ರಾಮಸ್ತುತಿಯೊಂದಿಗೆ ಆರಂಭವಾದ ಪ್ರಸ್ತುತಿ, ರಾಮ ಜನನ, ಅಹಲ್ಯಾ ಶಾಪ ವಿಮೋಚನೆ, ತಾಟಕಿ ಸಂಹಾರ, ವಿಶ್ವಾಮಿತ್ರರ ಯಾಗರಕ್ಷಣೆ, ಸೀತಾ ಪರಿಣಯ ಮುಂತಾದ ಹಲವಾರು ಮುಖ್ಯ ಘಟನೆಗಳ ಜೊತೆ ರಾವಣಾಸುರ ವಧೆ, ಶ್ರೀರಾಮ ಪಟ್ಟಾಭಿಷೇಕದವರೆಗೂ ಕಣ್ಣಿಗೆ ಹಬ್ಬ, ಮನಸ್ಸಿಗೆ ಸುಖಾನುಭವ ನೀಡಿದ ರಘುನಂದನ್ ಚಿತ್ರಿಸಿದ ರಾಮಾಯಣದ ಕಥೆ ಸುಂದರವಾಗಿ ಮೂಡಿಬಂದಿತು.
ಅನಂತರ- ರಘುನಂದನ್ ಮತ್ತು ಮಾನಸೀ ರಘುನಂದನ್ ಜೋಡಿ ಸಲ್ಲಾಪಿಸಿದ ಹಾಸ್ಯಲೇಪಿತ ‘ಶಿವ-ಪಾರ್ವತಿ ಸಲ್ಲಾಪ’ ಸಂಭಾಷಣಾತ್ಮಕ ಸೊಗಡಿನಿಂದ ಕೂಡಿದ್ದು ಆಸಕ್ತಿಕರವಾಗಿದ್ದು, ದೇವ-ದೇವಿಯರ ಶೃಂಗಾರ-ಕೀಟಲೆಯ ರಮ್ಯ ಚಿತ್ರಣವನ್ನು ಕಟ್ಟಿಕೊಟ್ಟಿತು. ಸಾಕ್ಷಾತ್ ಸದಾಶಿವನು ಬಾಗಿಲಲ್ಲಿ ನಿಂತು ಬಾಗಿಲು ತೆರೆಯಲು ಪಾರ್ವತಿಗೆ ಹೇಳುತ್ತಾನೆ. ಆಗ ಸತಿ, ಗಂಡನಿಗೆ ‘ನಿನ್ನ ಪರಿಚಯ ನೀಡು, ಅನಂತರ ಬಾಗಿಲು ತೆಗೆಯುವೆ’ ಎಂದಾಗ ಶಿವ, ಪರಿಪರಿಯಾಗಿ ತನ್ನ ಪರಿಚಯವನ್ನು ತಿಳಿಸುತ್ತಾನೆ. ಅದಕ್ಕೆ ಶಿವೆ, ಅವನ ಪ್ರತಿಯೊಂದು ಪರಿಚಯದ ಗುರುತು-ಘಟನೆಗೂ ಜಾಣ್ಮೆಯಿಂದ ಪ್ರಶ್ನೆಗಳ ಸವಾಲು ಹಾಕಿ ಪ್ರವೇಶ ನಿರಾಕರಿಸಿದಾಗ, ಶಿವ ತನ್ನ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಏನೇನೋ ತನ್ನ ವೈಶಿಷ್ಟ್ಯಗಳನ್ನು ಹೇಳಿಕೊಂಡರೂ ಅದು ಪ್ರಯೋಜನವಾಗುವುದಿಲ್ಲ. ಕಡೆಗೆ ಹತಾಶನಾಗಿ ಶಿವ, ಅವಳ ಪ್ರಿಯತಮನಾಗಿ ಹಾರ್ದಿಕವಾಗಿ ಕೇಳಿಕೊಂಡಾಗ ಪಾರ್ವತಿ ಹರ್ಷಿತಳಾಗಿ ಅವನನ್ನು ಆದರದಿಂದ ಬರ ಮಾಡಿಕೊಳ್ಳುತ್ತಾಳೆ. ಗಂಡ-ಹೆಂಡಿರ ಚಕಮಕಿ ಪ್ರಶ್ನೋತ್ತರದ ಪ್ರಹಸನ ನಾಟಕೀಯ ಆಯಾಮದಲ್ಲಿ ರಂಜಿಸಿತು. ಭೀಮವ್ವನವರು ತಮ್ಮ ಸರಳ ಅಷ್ಟೇ ಹರಿತ ಪದಗಳ ಚಮತ್ಕಾರಿಕ ಜೋಡಣೆಯಲ್ಲಿ ಅಪೂರ್ವ ಸನ್ನಿವೇಶವೊಂದನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದನ್ನು ರಘುನಂದನ್ ದಂಪತಿಗಳು ತಮ್ಮ ಅಭಿನಯದಲ್ಲಿ ಹೃದ್ಯವಾಗಿ ನಿರೂಪಿಸಿದರು. ಗಾಯನ-ಸಂಗೀತ ಸಂಯೋಜನೆ ವಿನಯ್ ಮಾನ್ಯ ಮತ್ತು ಗಾಯಕಿ ಸಂಹಿತಾ ಸಹಕರಿಸಿದರು.
ಕೊನೆಯಲ್ಲಿ ರಘುನಂದನ್ ಮತ್ತು ಶಿಷ್ಯರು ಚೆಂದವಾಗಿ ಕಟ್ಟಿಕೊಟ್ಟ ನೃತ್ಯನಾಟಕ- ‘ಶ್ರೀ ಸುಧಾಮ ಚರಿತೆ’ -ವಿವಿಧ ಸನ್ನಿವೇಶಗಳಿಂದ ಕೂಡಿದ ಶ್ರೀಕೃಷ್ಣ-ಕುಚೇಲರ ಪ್ರಸಿದ್ಧ ಕಥೆಯನ್ನು, ಭೀಮವ್ವರ ವಿಶಿಷ್ಟ ಸಾಹಿತ್ಯದ ಕಥಾಹಂದರದ ಮೇಲೆ, ರಘುನಂದನ್ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆಯಲ್ಲಿ, ಆಕರ್ಷಕವಾಗಿ ಪ್ರಸ್ತುತವಾಯಿತು.
ಶ್ರೀಕೃಷ್ಣನ ಬಾಲ್ಯಸ್ನೇಹಿತ ಕುಚೇಲನದು ಬಡತನದ ಸಂಸಾರ. ಮನೆಯಲ್ಲಿ ಕಷ್ಟ- ಕಾರ್ಪಣ್ಯಗಳು. ಪುಟ್ಟಮಗ-ಮಗಳು- ಹೆಂಡತಿಯಿಂದ ಕೂಡಿದ ಕುಟುಂಬ. ತೀರದ ಬವಣೆಯಿಂದ, ಸಿರಿವಂತ ಗೆಳೆಯ ಕೃಷ್ಣನಿಂದ ಏನಾದರೂ ಸಹಾಯ ದೊರೆಯಬಹುದೆಂಬ ದೂರದಾಸೆಯಿಂದ ಕುಚೇಲ, ಕೃಷ್ಣನನ್ನು ಹುಡುಕಿಕೊಂಡು ಹೋಗುವ ಸಂದರ್ಭ. ದ್ವಾರಕೆಯ ದ್ವಾರದಲ್ಲೇ ಅವನನ್ನು ಕಾವಲುಗಾರರು ತಡೆಯುವರು. ವಿಷಯ ತಿಳಿದು ಖುದ್ದು ಕೃಷ್ಣನೇ ರುಕ್ಮಿಣಿ-ಭಾಮೆಯರೊಡಗೂಡಿ ಧಾವಿಸಿ ಬಂದು ಕುಚೇಲನಿಗೆ ನೀಡುವ ರಾಜೋಪಚಾರ, ಅವನು ತಂದ ಅವಲಕ್ಕಿಯನ್ನು ಸವಿದು ತೃಪ್ತನಾಗಿ, ಅವನಿಗೆ ಶಲ್ಯ-ಪೇಟ, ಕಡಗ ನೀಡಿ ಗೌರವಿಸಿ ಬೀಳ್ಕೊಟ್ಟ ನಂತರ ಅವುಗಳನ್ನು ಅಡವಿಯಲ್ಲಿ ಕಳ್ಳರು ಅಪಹರಿಸಿ ಮತ್ತೆ ಅವನು ಬರಿಗೈ ಕುಚೇಲನಾಗುವ ದುರವಸ್ಥೆಯ ವಿಪರ್ಯಾಸ – ಕಡೆಯಲ್ಲಿ ಅವನು ತನ್ನ ಕಣ್ಣನ್ನೇ ನಂಬಲಾರದಂಥ ತನ್ನ ಮನೆ- ಅರಮನೆಯಾಗಿ, ಐಸಿರಿಯ ಹೊಳೆಯಾದರೂ, ಸುಧಾಮ ಅದರಲ್ಲೇ ಮುಳುಗಿ ಮೆರೆಯದೆ, ತನ್ನ ಸಂಪತ್ತೆನ್ನೆಲ್ಲ ಬಡ ಬಗ್ಗರಿಗೆ ದಾನ ಮಾಡುವ ಔದಾರ್ಯದ ದೃಶ್ಯದೊಂದಿಗೆ ಸಂಪನ್ನಗೊಳ್ಳುವ ಅನೇಕ ರಸಮಯ ಘಟನೆಗಳನ್ನು ಸೃಜಿಸಿ, ಅದಕ್ಕೆ ಜೀವ ತುಂಬಿ ಅಭಿನಯಿಸಿದ, ಹೆಜ್ಜೆಗಳನ್ನು ಹಾಕಿದ ತಮ್ಮ ನೃತ್ಯ ಮನೋಹರತೆಯಿಂದ ನೋಡುಗರ ಹೃದಯಲ್ಲೊಂದು ಅನುಭೂತಿ ಹುಟ್ಟು ಹಾಕಿದ ಈ ನೃತ್ಯರೂಪಕ ಸಾರ್ಥಕತೆಯನ್ನು ಪಡೆಯಿತು.
ಅಂದಿನ ಕಾಲದ ಪ್ರಹಸನ, ಕಾವ್ಯಗಳಲ್ಲಿರುವಂತೆ ಸಾಂಪ್ರದಾಯಿಕ ಆರಂಭ ಸೂತ್ರಧಾರನ ಮುನ್ನುಡಿಯೊಂದಿಗೆ ಸೊಗಸೆನಿಸಿತು. ಭಾವಪ್ರಧಾನ ಕಥಾಲಹರಿಯಲ್ಲಿ ತೋರಿದ ಪ್ರತಿಯೊಂದು ದೃಶ್ಯ ಚೌಕಟ್ಟು ಸೂಕ್ತವಾಗಿತ್ತಲ್ಲದೆ, ಆಕರ್ಷಕ ವೇಷಭೂಷಣ, ಪೂರಕ ಪರಿಕರಗಳ ಬಳಕೆ ಪೋಷಕವಾಗಿತ್ತು. ಮೂಲತಃ ಇಲ್ಲಿ ಅಭಿನಯಿಸಿದ ಕಲಾವಿದರುಗಳೆಲ್ಲ ನೃತ್ಯ ತರಬೇತಿಯನ್ನು ಹೊಂದಿದ ನರ್ತಕರಾದ್ದರಿಂದ, ಇವರಿಂದ ಪ್ರೌಢ ಅಭಿನಯ ನಿರೀಕ್ಷಿಸುವುದು ಉಚಿತವಲ್ಲ. ಆದರೂ, ನೃತ್ಯರೂಪಕಗಳಲ್ಲಿ ಅಭಿನಯ ಅಗತ್ಯವಿರುವ ಸಂದರ್ಭಗಳಿರುವುದರಿಂದ, ನರ್ತಕರಿಗೆ ಅಭಿನಯದ ಸೂಕ್ತ ತರಬೇತಿಯನ್ನೂ ನೀಡುವುದು ಸಹಾಯಕವಾಗುತ್ತದೆ ಎನಿಸಿತು.
ಸುಧಾಮನಾಗಿ ರಘುನಂದನ್ ಆಯಾ ಸಂದರ್ಭಗಳಿಗೆ ತಕ್ಕಂತೆ ಸಹಜಾಭಿನಯ ತೋರಿದರು. ನವರಸಗಳ ಅಭಿವ್ಯಕ್ತಿಯಲ್ಲಿ ಯಶಸ್ವಿಯಾದ ಅವರ ಉಡುಪು- ಪ್ರಸಾಧನ ಎಲ್ಲವೂ ಪಾತ್ರಕ್ಕೆ ತಕ್ಕಂತೆ ಸೂಕ್ತವಾಗಿದ್ದವು. ಪ್ರತಿಯೊಂದು ಸನ್ನಿವೇಶಗಳಲ್ಲಿ ಹೆಣೆದ ನೃತ್ಯಾಭಿನಯ, ಅವುಗಳನ್ನು ಪಾತ್ರಧಾರಿಗಳು ನಿರ್ವಹಿಸಿದ ರೀತಿ ಮನಮುಟ್ಟಿದರೂ, ರಂಗದ ಮೇಲಿರುವಷ್ಟು ಹೊತ್ತೂ ಅವರು ಪಾತ್ರಗಳಲ್ಲೇ ತಲ್ಲೀನರಾಗಿದ್ದರೆ ಸನ್ನಿವೇಶದ ಸಾಂದ್ರತೆ ಗಾಢವಾಗಿ ಪರಿಣಾಮ ಬೀರುತ್ತದೆ. ಭೀಮವ್ವನ ಕಾವ್ಯಾಶಯವನ್ನು ಸಾಕ್ಷಾತ್ಕಾರಗೊಳಿಸಿದ ರಘುನಂದನರ ಈ ಪ್ರಥಮ ಪ್ರಯತ್ನಕ್ಕೆ ಅಭಿನಂದನೆಗಳು. ಈ ನೃತ್ಯರೂಪಕ ಮುಂದಿನ ಪ್ರಯೋಗಗಳಲ್ಲಿ ಪರಿಪೂರ್ಣತೆಯತ್ತ ಸಾಗಲಿ ಎಂಬ ಶುಭ ಹಾರೈಕೆಗಳು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.