ಮಡಿಕೇರಿ : ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ದಿನಾಂಕ 31 ಜುಲೈ 2025ರಂದು ಆಯೋಜಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಜಿಲ್ಲೆ ವತಿಯಿಂದ ವಿಶೇಷ ಘಟಕ ಯೋಜನೆಯಡಿಯಲ್ಲಿನ ವಿದ್ಯಾರ್ಥಿನಿಯರಿಗೆ ‘ಸುಗಮ ಸಂಗೀತ’ ಕಲಾ ತರಬೇತಿ ಶಿಬಿರ ನಡೆಯಿತು.
ಈ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ “ವಿದ್ಯಾರ್ಥಿ ಜೀವನದಲ್ಲಿಯೇ ಕಲಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ, ಮನಸ್ಸಿನಲ್ಲಿನ ಋಣಾತ್ಮಕ ಅಂಶಗಳೂ ಮರೆಯಾಗಲು ಸಹಕಾರಿಯಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಸುಗಮ ಸಂಗೀತ ತರಬೇತಿ ಶಿಬಿರವನ್ನು ಸರ್ಕಾರ ಹಮ್ಮಿಕೊಂಡಿರುವುದು ಶ್ಲಾಘನೀಯ. ಸುಗಮ ಸಂಗೀತ ಮಾಧ್ಯಮವು ನಮ್ಮ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತವಾಗಿದೆ. ಸಮಾಜದ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿದ್ಯಾರ್ಥಿಗಳು ಮಾದರಿಯಾಗಿ ಪರಿಗಣಿಸಿಕೊಂಡಲ್ಲಿ ಅವರು ಕೂಡ ಅಮೂಲ್ಯವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸರ್ಕಾರ ಆಯೋಜಿಸುವ ವಿವಿಧ ಕಾರ್ಯಕ್ರಮಗಳಿಗೆ ಸಮಾಜದ ವಿವಿಧ ಸಂಘಸಂಸ್ಥೆಗಳೂ ಕೈಜೋಡಿಸಿದರೆ ಅಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಸಾಧ್ಯವಿದೆ” ಎಂದು ಹೇಳಿದರು.
ಮಡಿಗೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, “ಹೆಸರೇ ಹೇಳುವಂತೆ ಸುಗಮವಾಗಿ ಕಲಿಕೆಯ ಸಂಗೀತವೇ ಸುಗಮ ಸಂಗೀತವಾಗಿದ್ದು, ಉಳಿದ ಪ್ರಾಕಾರಗಳಿಗೆ ಹೋಲಿಸಿದ್ದಲ್ಲಿ ಹೆಚ್ಚು ಜನರನ್ನು ತಲುಪುದಲ್ಲಿ ಸುಗಮ ಸಂಗೀತ ಯಶಸ್ವಿ ಸಂಗೀತ ಮಾಧ್ಯಮವಾಗಿದೆ. ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ನಿಸಾರ್ ಅಹಮ್ಮದ್, ಎಚ್.ಎಸ್. ವೆಂಕಟೇಶ ಮೂರ್ತಿ ಸೇರಿದಂತೆ ಅನೇಕ ಕವಿಗಳು ಸುಗಮ ಸಂಗೀತಕ್ಕೆ ತಮ್ಮ ಕವಿತೆಗಳ ಕೊಡುಗೆ ನೀಡಿದ್ದಾರೆ. ಹೀಗಾಗಿ ಕಾವ್ಯವೇ ಸುಗಮ ಸಂಗೀತದ ಸೌಂದರ್ಯಕ್ಕೆ ಮೂಲದಂತಿದೆ. ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾಗಲು ಇಲ್ಲಿನ ಹವಾಮಾನ ವೈಪರೀತ್ಯ ಕೂಡ ಕಾರಣವಾಗಿದೆ. ಹೀಗಿದ್ದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೀಗ 110 ವಿದ್ಯಾರ್ಥಿನಿಯರಿಗೆ ಸುಗಮ ಸಂಗೀತ ಶಿಬಿರವನ್ನು 6 ತಿಂಗಳ ಕಾಲ ವಾರಕ್ಕೆ ಮೂರು ತರಗತಿಗಳಂತೆ ಆಯೋಜಿಸಿರುವುದು ಯುವ ಹಾಡುಗಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ. ಇಲ್ಲಿ ಸುಗಮ ಸಂಗೀತ ಕಲಿತ ವಿದ್ಯಾರ್ಥಿನಿಯರಿಗೆ ವಿಧಾನಸೌಧದ ಬ್ಯಾಕ್ವೆಂಟ್ ಸಭಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಹಾಡುವ ಅವಕಾಶವಿರುವುದರಿಂದಾಗಿ ಕೊಡಗಿನ ಗಾಯನ ಪ್ರತಿಭೆಗಳಿಗೂ ಇದು ಅತ್ಯುತ್ತಮ ಅವಕಾಶವಾಗಿದೆ” ಎಂದರು.
ಕೊಡಗು ಶಿಕ್ಷಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ ಮಾತನಾಡಿ “ಮಕ್ಕಳಿಗೆ ಸೂಕ್ತ ಸಂಸ್ಕಾರವನ್ನು ಬಾಲ್ಯದಲ್ಲಿಯೇ ತಿಳಿಸಿದಾಗ ಸಂಸ್ಕಾರವಂತ ಸಮಾಜ ನಿರ್ಮಾಣ ಸಾಧ್ಯವಿದೆ. ಪಠ್ಯದಂತೆಯೇ ಸಂಗೀತ, ನಾಟ್ಯ, ಕ್ರೀಡೆಗಳೂ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ವಿದ್ಯಾರ್ಥಿನಿಯರು ಇಂತಹ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಮಡಿಕೇರಿ ತಾಲೂಕಿನ ಸಹಾಯಕ ನಿರ್ದೇಶಕರಾದ ಬಾಲಕೃಷ್ಣ ರೈ ಮಾತನಾಡಿ, ಸಂಗೀತದಲ್ಲಿನ ಅವಕಾಶಗಳನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಆಸಕ್ತರಿಗೆ ಉಚಿತವಾಗಿ ಸುಗಮ ಸಂಗೀತ ಕಲಿಕೆಗೆ ದೊರಕಿರುವ ಅತ್ಯುತ್ತಮ ಅವಕಾಶ ಇದಾಗಿದೆ” ಎಂದು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಮಾಹಿತಿ ನೀಡಿ, :ವಿಶೇಷ ಘಟಕ ಯೋಜನೆಯಡಿ ವಾರದಲ್ಲಿ 3 ದಿನಗಳ ಕಾಲ ಸಂಜೆ ಸಮಯದಲ್ಲಿ ಸಂಗೀತ ಶಿಕ್ಷಕಿ ವೀಣಾ ಹೊಳ್ಳ ಅವರು ವಿದ್ಯಾರ್ಥಿನಿಯರಿಗೆ ಸುಗಮ ಸಂಗೀತದ ಪಾರ ಹೇಳಿಕೊಡಲಿದ್ದಾರೆ. 6 ತಿಂಗಳಲ್ಲಿ 18 ತರಗತಿಗಳಿಂದ 30 ಹಾಡುಗಳನ್ನು ವಿದ್ಯಾರ್ಥಿನಿಯರು ಕಲಿಯಬೇಕಾಗಿದೆ” ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕಿ ಗೀತಾ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.