Subscribe to Updates

    Get the latest creative news from FooBar about art, design and business.

    What's Hot

    ಕಾಸರಗೋಡಿನ ಗಾಯಕರ ಧ್ವನಿ ಅಂತರ್ ಧ್ವನಿ – ಬಾ. ನಾ. ಸುಬ್ರಹ್ಮಣ್ಯ

    May 29, 2025

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುಮನಸಾ ಕೊಡವೂರು “ರಂಗ ಹಬ್ಬ” ಫೆಬ್ರವರಿ 26ರಿಂದ ಮಾರ್ಚ್ 4 – ಉಡುಪಿಯಲ್ಲಿ
    Drama

    ಸುಮನಸಾ ಕೊಡವೂರು “ರಂಗ ಹಬ್ಬ” ಫೆಬ್ರವರಿ 26ರಿಂದ ಮಾರ್ಚ್ 4 – ಉಡುಪಿಯಲ್ಲಿ

    February 23, 2023Updated:August 19, 2023No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    23 ಫೆಬ್ರವರಿ 2023, ಉಡುಪಿ: ಇಪ್ಪತ್ತೊಂದು ವರ್ಷಗಳಿಂದ ನಿರಂತರ ರಂಗಪ್ರಕ್ರಿಯೆಯಲ್ಲಿ ತೊಡಗಿರುವ ಸುಮನಸಾ ಕೊಡವೂರು ಉಡುಪಿ ಸಂಸ್ಥೆಗೆ ಹತ್ತನೇ ವರ್ಷದಲ್ಲಿ ಮೂಡಿದ ಕಲ್ಪನೆ ರಂಗಹಬ್ಬ. ಈ ಬಾರೀ ಹನ್ನೊಂದನೇ ರಂಗಹಬ್ಬ. ಒಂದೊಂದು ಬಾರೀ ಬಿನ್ನ ಬಿನ್ನ ಕಲ್ಪನೆಯೊಂದಿಗೆ ಮೂಡಿ ಬರುತ್ತಿರುವ ಈ ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಯಿಂದ ಬಂದು ಬೇರೆ ಬೇರೆ ಬಾಷೆಯ ನಾಟಕ ಪ್ರದರ್ಶನ ನೀಡಿರುತ್ತಾರೆ. ಈ ಬಾರೀ ರಾಜ್ಯದೊಳಗಿನ ನಾಟಕ ತಂಡಗಳು ಭಾಗವಹಿಸುವುದರೊಂದಿಗೆ ಕನ್ನಡ-ತುಳು ಹಾಗೂ ಮಹಿಳಾ ಯಕ್ಷಗಾನ ಕೂಡಾ ಈ ಹಬ್ಬದ ಭಾಗವಾಗಲಿದೆ.

    ಸುಮನಸಾ ಕೊಡವೂರು-ಉಡುಪಿ (ರಿ.) ಆಯೋಜಿಸಿರುವ ರಂಗ ಹಬ್ಬ 11, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನಗರ ಸಭೆ ಉಡುಪಿಯ ಸಹಯೋಗದೊಂದಿಗೆ ಫೆಬ್ರವರಿ 26ರಿಂದ ಮಾರ್ಚ್ 4ರವರೆಗೆ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ನಡೆಯಲಿದೆ. ಕಲಾಸಕ್ತರಿಗೆ ಉಚಿತ ಪ್ರವೇಶ ಒದಗಿಸಿದ್ದು, ಸಾರ್ವಜನಿಕರು ಈ ಹಬ್ಬದ ರಸದೌತಣವನ್ನು ಸವಿಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ.


     

    ಫೆಬ್ರವರಿ 26, ಭಾನುವಾರ – ಅರಣ್ಯ ಕಾಂಡ – ಕನ್ನಡ ನಾಟಕ
    ತಂಡ: ನವೋದಯ ಮೈಸೂರು

    ರಚನೆ: ಪ್ರಸನ್ನ ಹೆಗ್ಗೋಡು
    ವಿನ್ಯಾಸ-ನಿರ್ದೇಶನ: ಶ್ರೀಪಾದ್ ಭಟ್

    ಸೀತಾರಾಮರು ತಮ್ಮ ವನವಾಸದ ಮೊದಲ ಹದಿಮೂರು ವರ್ಷ ಪ್ರೇಮಿಗಳಂತೆ ಕಳೆದರು, ದಂಪತಿಗಳಂತಲ್ಲ. ಅರ್ಥಾತ್‌ ವನವಾಸದಲ್ಲಿ ಮಗು ಮಾಡುವುದು ಸಾಧುವಲ್ಲ ಎಂಬ ಅರಿವಿದ್ದ ಯುವಕರವರು. ಹಾಗಾಗಿ ಅರಣ್ಯಕಾಂಡವು ಒಂದು ಅಸಾಧಾರಣ ಪ್ರೇಮ ಕಥೆಯೂ ಹೌದು.
    ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ, ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಶೂರ್ಪನಖಿ ಸುಂದರಿ, ಸೀತೆ ಗೋಧಿಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿಬಣ್ಣದ ಸುಂದರಿ, ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದ್ದು ಮೋಹ. ಸೀತೆಯುದು ಕೊಡುವ ಪ್ರೀತಿಯಾದರೆ ಶೂರ್ಪನಖಿಯದು ಬೇಡುವ ಮೋಹ.
    ರಾಮ, ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ. ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ, ಶೂರ್ಪನಖಿ ಅಸುರಳೆಂಬುದು ಇವಳ ಕೀಳರಿಮೆಯಲ್ಲ. ಬನ್ನಿ, ರಾಮಾಯಣವನ್ನು ಹೊಸರೀತಿಯಿಂದ ನೋಡಿ ಆನಂದಿಸೋಣ.


    ಫೆಬ್ರವರಿ 27, ಸೋಮವಾರ – ಅರುಂಧತೀ ಆಲಾಪ – ಕನ್ನಡ ನಾಟಕ
    ತಂಡ: ಸುಮನಸಾ ಕೊಡವೂರು

    ರಚನೆ: ರಾಮನಾಥ್ ಮೈಸೂರು
    ನಿರ್ದೇಶನ: ನಿತೀಶ್ ಬಂಟ್ವಾಳ

    ಅರುಂಧತಿ ಆಲಾಪ ಹೆಣ್ಣೊಬ್ಬಳ ಒಳಗನ್ನು ಕಥಿಸುವ ನಾಟಕ. ಗಂಡ ಮತ್ತು ಮಗನ ನಡುವೆ ಇಬ್ಬರಿಗೂ ಸಲ್ಲದವಳಾಗಿ ತನ್ನತನದ ಹುಡುಕಾಟದಲ್ಲಿರುವ ಸ್ತ್ರೀಯೊಬ್ಬಳ ತೊಳಲಾಟಗಳೇ ಈ ಆಲಾಪ. ಗಂಡನಿಂದ ಅಗೌರವಕ್ಕೊಳಗಾದ ಹೆಣ್ಣಿಗೆ ಮಗನಿಂದಲೂ ಗೌರವ ಸಲ್ಲದಾಗ ಮಾತೃತ್ವ ಮತ್ತು ಪತ್ನಿತ್ವಗಳಾಚೆಗೆ ಯೋಚಿಸುವ ಆಕೆ ಹೆಣ್ಣಾಗುವ ಮೊದಲ ಹಂತದಲ್ಲಿ ನಿಂತು ತನ್ನನ್ನು ಕಂಡುಕೊಳ್ಳುವ ಆಲೋಚನೆಯಲ್ಲಿದ್ದಾಳೆ. ತಾನು ಕಳಕೊಂಡ ಹರೆಯದ ಕ್ಷಣಗಳನ್ನು ಮತ್ತೊಮ್ಮೆ ಕಟ್ಟಿಕೊಳ್ಳುವ ಸನ್ನಾಹದಲ್ಲಿದ್ದಾಳೆ. ಪ್ರೀತಿಯಿಂದ ವಂಚಿತಳಾದ ಆಕೆಗೆ ಹರೆಯದ ಹೆಣ್ಣುಗಳೊಳಗೆ ಉದ್ಭವಿಸುವ ಆ ಚಂಚಲತೆ,ಆಕರ್ಷಣೆ ಪ್ರೀತಿಯ ಬಗೆಗೆ ತೀವ್ರ ಕೌತುಕವಿದೆ. ಕುಣಿಯುವ ವಯಸ್ಸಲ್ಲಿ, ಹಾಡಬೇಕಾದ ಸಂದರ್ಭಗಳಲ್ಲಿ ಅವಕಾಶ ಹೀನಳಾಗಿ ಅನಿವಾರ್ಯತೆಗೆ ಒಗ್ಗಿಕೊಂಡು ಬದುಕಿದ ಆಕೆ, ತಾನು ಕಳಕೊಂಡವುಗಳ ಹುಡುಕಾಟದಲ್ಲಿ ತನ್ನಿರವು ಮರೆಯುವ ಮೂಲಕ ಸ್ವಾತಂತ್ರ್ಯ ಹೀನಳಾಗಿ ತಮ್ಮತನ ಮರೆತ, ಪ್ರೀತಿಯಿಂದ ವಂಚಿತರಾದ ಹೆಣ್ಣುಮಕ್ಕಳ ಪ್ರತಿನಿಧಿಯಂತೆ ಭಾಸವಾಗುತ್ತಾಳೆ.
    ಮಗನೊಂದಿಗೆ ಓಡಿ ಹೋದ ಕನಕ, ಅರುಂಧತಿಯೊಳಗಿನ ಹರೆಯದ ಉತ್ಸಾಹವಾಗಿ ಕಂಡರೆ, ಕ್ಷಣದ ಆಕರ್ಷಣೆಗೆ ಬಲಿಯಾಗಿ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳ ನಡುವಿನ ಗೆರೆ ಮರೆತ ಹೆಣ್ಣಾಗಿ ಕಾಣಿಸಿಕೊಳ್ಳುವ ಕನಕ ಆಧುನಿಕ ಕಾಲಘಟ್ಟದ ಹೆಣ್ಣು ಮಕ್ಕಳೊಳಗೂ ಇರುವ ಅಸಹಾಯಕತೆಗೆ ಹಿಡಿದ ಕನ್ನಡಿ.
    ಹೆತ್ತವರ ಅತಿ ಸಲಿಗೆ, ಅತಿ ಮೋಹ, ತಾಯಿಯ ಅಸಹಾಯಕತೆ, ಸುಖದ ಹುಡುಕಾಟ, ದುಶ್ಚಟಗಳು ಮನುಷ್ಯನನ್ನು ಎಷ್ಟು ಅಧೋಪತನಕ್ಕೆಳೆಯುತ್ತದೆ ಎಂಬುದು ಇಲ್ಲಿ ಸೊಗಸಾಗಿ ವ್ಯಕ್ತವಾಗಿದ್ದು, ಗಂಡಿನ ಸುಖ-ಲೋಲುಪತೆ ಅಸಮರ್ಥತೆ ಹೆಣ್ಣನ್ನು ಎಷ್ಟರಮಟ್ಟಿಗೆ ಬಳಲಿಸುತ್ತದೆ ಎಂಬುದರ ಚಿತ್ರಣವಿದೆ.
    ಪ್ರಕೃತಿ ಸಹಜವಾದ ಸ್ತ್ರೀ ಸಂವೇದನೆಯ ಪದರಗಳನ್ನು ಎಳೆ ಎಳೆಯಾಗಿ ಸಮಾಜಕ್ಕೆ ದಾಟಿಸುವ ಪ್ರಯತ್ನ ಈ ನಾಟಕದಲ್ಲಿದ್ದು ವಯಸ್ಸಿನ ಹಂಗಿರದ ಹೆಣ್ತನ, ಸಣ್ಣ-ಸಣ್ಣ ಆಸೆಗಳು ಗಂಡು ಹೃದಯಕ್ಕೆ ಅರ್ಥವಾಗಬೇಕೆಂಬ ಆಶಯವಿದೆ. ಎಲ್ಲಾ ಸಂಬಂಧ, ಜವಾಬ್ದಾರಿಗಳ ಆಚೆಗೂ ಇರುವ ಸ್ತ್ರೀ ಹೃದಯದ ಸಹಜ ಕನಸುಗಳೇ ಈ ಅರುಂದತಿ ಆಲಾಪ.


    ಫೆಬ್ರವರಿ 28, ಮಂಗಳವಾರ – ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ
    ತಂಡ: ರಂಗ ಸಂಗಾತಿ, ಮಂಗಳೂರು

    ರಚನೆ-ನಿರ್ದೇಶನ: ಶಶಿರಾಜ್ ರಾವ್ ಕಾವೂರು

    ಬರಿ ಕುರುಹು ಹಾಗು ತಥ್ಯಗಳಾಧಾರಿಸಿದ ನಮ್ಮ ನ್ಯಾಯ ವ್ಯವಸ್ಥೆ ಮತ್ತು ನ್ಯಾಯ ತೀರ್ಮಾನಗಳನ್ನು ಪ್ರಶ್ನಿಸುವ ನಾಟಕ “ದ್ಯಾಟ್ಸ್ ಆಲ್ ಯುವರ್ ಆನರ್”. ಕುರುಹು, ಸತ್ಯಾಸತ್ಯತೆಗಳಷ್ಟೇ ಅಲ್ಲದೆ ಒಂದು ಸನ್ನಿವೇಶಕ್ಕೆ ಇನ್ನೂ ಒಂದು ಮಜಲು ಇರಬಹುದು ಮತ್ತು ಆ ಮಜಲನ್ನು ಮಾನವೀಯತೆಯ ದೃಷ್ಟಿಯಿಂದ ನೋಡಿದಾಗ ನಾವು ಈಗಾಗಲೇ ಕಂಡ ಸತ್ಯಕ್ಕೆ ಒಂದು ಹೊಸ ದೃಷ್ಟಿಕೋನ ಬರಬಹುದು ಎಂದು ವಾದಕ್ಕಿಳಿಯುವ ನಾಟಕವೇ “ದ್ಯಾಟ್ಸ್ ಆಲ್ ಯುವರ್ ಆನರ್”. ಹಾಗೆಯೇ ಒಂದು ನ್ಯಾಯ ತೀರ್ಮಾನದಲ್ಲಿ ಸತ್ಯಗಳಷ್ಟೇ ಮುಖ್ಯವಾಗಿ ನಮ್ಮದೇ ಪಕ್ಷಪಾತಗಳು, ಅಭಿಪ್ರಾಯಗಳು, ಧೋರಣೆಗಳು ಹೇಗೆ ಪರಿಣಾಮವನ್ನುಂಟು ಮಾಡುತ್ತವೆ ಎಂದು ಈ ನಾಟಕ ಎತ್ತಿ ತೋರಿಸುತ್ತದೆ. ತುಂಬಾ ಬಾಲಿಶವೆನ್ನಬಹುದಾದ ಪ್ರಕರಣವನ್ನಿಟ್ಟುಕೊಂಡು ಗಂಭೀರವಾಗಿ ನಡೆಯುವ ಆಗು ಹೋಗುಗಳು, ವಾದ ವಿವಾದಗಳು ಎಲ್ಲಿಯೂ ನಮಗೆ ಬೇಸರ ತರಿಸುವುದಿಲ್ಲ. ಕೆಲವೊಂದು ಪೋಷಕ ಪಾತ್ರಗಳು ತಮ್ಮ ಮಾತು ಮತ್ತು ನಡವಳಿಕೆಯಿಂದ ಇಡೀ ವಾತಾವರಣವನ್ನು ತಿಳಿಗೊಳಿಸುತ್ತವೆ. ನಮ್ಮ ನ್ಯಾಯ ವ್ಯವಸ್ಥೆಯನ್ನು ಮಾನವೀಯ ದೃಷ್ಟಿಕೋನವನ್ನಿರಿಸಿಕೊಂಡು ನೋಡುವ ನಾಟಕದ ಪ್ರಯತ್ನ ಅಮೂಲ್ಯ.
    ಈ ನಾಟಕದ ಮುಖ್ಯ ತರಾಂಗಣದಲ್ಲಿ ಗೋಪಿನಾಥ್ ಭಟ್, ಲಕ್ಷ್ಮಣ ಕುಮಾರ್ ಮಲ್ಲೂರು, ಮೈಮ್ ರಾಮದಾಸ್, ಸಂತೋಷ್ ಶೆಟ್ಟಿ, ಮುರಳೀಧರ್ ಕಾಮತ್, ರಂಜನ್ ಬೋಳೂರ್, ಸುಧೀರ್ ರಾಜ್ ಉರ್ವ, ಕ್ರಿಸ್ಟೋಫೆರ್ ನೀನಾಸಂ, ಇದ್ದು ಖ್ಯಾತ ನ್ಯಾಯವಾದಿ ಹಾಗೂ ಲೇಖಕ ಶಶಿರಾಜ್ ರಾವ್ ಕಾವೂರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.


    ಮಾರ್ಚ್ 01, ಬುಧವಾರ – ಏಕಲವ್ಯ – ಕನ್ನಡ ಯಕ್ಷಗಾನ
    ತಂಡ: ಸುಮನಸಾ ಕೊಡವೂರು

    ನಿರ್ದೇಶನ: ಗುರು ಬನ್ನಂಜೆ ಸಂಜೀವ ಸುವರ್ಣ


    ಮಾರ್ಚ್ 02, ಗುರುವಾರ – ಶೂದ್ರ ಶಿವ – ಕನ್ನಡ ನಾಟಕ
    ತಂಡ: ರುದ್ರ ಥೇಟರ್, ಮಂಗಳೂರು
    ಬ್ರಹ್ಮಶ್ರೀ ನಾರಾಯಣ ಗುರು ತತ್ವ ಸಿದ್ದಾಂತದ ಪರಿಕಲ್ಪನೆ

    ಪರಿಕಲ್ಪನೆ-ನಿರ್ದೇಶನ: ವಿದ್ದು ಉಚ್ಚಿಲ್

    ಬ್ರಹ್ಮಶ್ರೀ ನಾರಾಯಣಗುರುಗಳ ಬದುಕು ಎಂದಿಗೂ ಆದರ್ಶ. ದ್ವೇಷ ರಹಿತವಾಗಿ ಮೈತ್ರಿ, ಸಮಾನತೆ ಮತ್ತು ಐಕ್ಯತೆಯಿಂದ ಸಂಘಟಿತರಾಗಿ, ಶಕ್ತಿವಂತರಾಗಿ ಒಗ್ಗೂಡಿದ ಶಕ್ತಿಯಿಂದ ಸಾಮಾಜಿಕ, ಔದ್ಯೋಗಿಕ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂಬ ಸಂದೇಶ ಮತ್ತು ತತ್ವ ಆದರ್ಶಗಳು ಪ್ರಸಕ್ತ ಕಾಲಘಟ್ಟದಲ್ಲಿ ಸಮಾಜಕ್ಕೆ ಬಹಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಗುರುಚಳವಳಿಯ ಅರಿವು, ವ್ಯಾಪ್ತಿ, ವಿಸ್ತಾರವನ್ನು ತಿಳಿಸುವ ಸಣ್ಣ ಪ್ರಯತ್ನವೇ ‘ಶೂದ್ರ ಶಿವ’ ನಾಟಕ. ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆರಂಭಿಸಿದ ದೇವಾಲಯ ಸ್ಥಾಪನೆಯ ಸಂದರ್ಭದಲ್ಲಿ ಮೇಲ್ವರ್ಗದ ಪ್ರತಿರೋಧದ ಉಪಶಮನಕ್ಕಾಗಿ ತಳೆದ ಜಾಣ ನಡೆ, “ನಾನು ಪ್ರತಿಷ್ಠಾಪಿಸಿದ್ದು ನಿಮ್ಮ ಶಿವನನ್ನಲ್ಲ… ನಮ್ಮ ಶಿವನನ್ನು… ಅವನು ಶೂದ್ರ ಶಿವ.” ಎಂಬ ಶಾಂತ ಉತ್ತರ. ಇದೇ ಪರಿಕಲ್ಪನೆಯನ್ನು ಇಟ್ಟು ಕೊಂಡು ಪ್ರಸ್ತುತ ಪಡಿಸಿದ ಹೊಸ ಪ್ರಯೋಗವೇ ‘ಶೂದ್ರ ಶಿವ’ ಕನ್ನಡ ನಾಟಕ.


    ಮಾರ್ಚ್ 03, ಶುಕ್ರವಾರ – ಕಾಪ – ತುಳು ನಾಟಕ
    ತಂಡ: ಸುಮನಸಾ ಕೊಡವೂರು
    ರಚನೆ: ಬಾಲಕೃಷ್ಣ ಶಿಬಾರ್ಲ
    ನಿರ್ದೇಶನ: ದಿವಾಕರ್ ಕಟೀಲ್

    ಜಾತಿ ಅನಿಷ್ಟ ಮಾತ್ರ ಅತ್ತ್‌, ಜಾತಿ ಈ ನೆಲತ್ತ ಸತ್ಯಲಾ ಅಂದ್‌. ಜಾತಿ ಬೇದ ಇಜ್ಜೇ ಇಜ್ಜಿ ಪಂದ್‌ ವಾದ ಮಲ್ತ್‌ದ್ ಗೆಲ್ಪೊಲಿ. ಎದುರು ವಾದ ಮಲ್ಪುನಯಗ್‌ ವಾದೊಗು ಪದೊನೇ ತಿಕ್ಕಂದಿಲೆಕ್ಕ ಚೊರೆ ಕಟ್ಟ್‌ದ್‌ ಬಾಯಿ ಮುಚ್ಚವೊಲಿ. ಆಂಡ ಜಾತಿ ಇಪ್ಪುನವು, ಆತಿ ಬೇದ ಇಪ್ಪುನವು ನೇಸರೆ, ತಿಂಗೊಲ್ದಾತೆ ಸತ್ಯ.
    ಮಾತಾ ಗಟನೆಡ್‌ಲಾ ಉಲಾಯಿಪೆಟ್ಟ್‌ದಲೆಕ್ಕ ಜಾತಿ ಇಪ್ಪುಂಡು. ’ಕಾಪ‘ ನಾಟಕ ಅಯ್ನೆ ದೆರ್ತ್‌ ತೋಜಾವುಂಡು. ಸಮ್ಸುಕ್ರಿತಿದ ಪುದರ್‌ಡ್‌, ಸಂಪ್ರದಾಯದ ಪುದರ್‌ಡ್‌, ಜಾತ್ರೆ, ನೇಮ, ಕೋಲದ ಬುದರ್‌ಡ್‌ ಎಂಚ ಜಾತಿ ಅಡರ್‌ದಿಪ್ಪುಂಡು? ಊರುಗು ಎಡ್ಡೆಂತಿನಕ್ಲು ಪನ್ಪಿನಕ್ಲು ಎಂಚ ನಾಜೂಕಾದ್‌ ಈ ಜಾತಿ ಕಟ್ಟಲೆನ್‌ ದುಂಬುಗು ಕೊನೊಪ್ಪೆರ್‌? ಅಯ್ಕ್‌ ಎದುರುಸವಾಲ್‌ ಬತ್ತ್ಂಡ ವಾಲ್‌ನ್, ಸವಾಲ್‌ ಪಾಡ್ನಕ್ಲೆನ್‌ ಎಂಚ ದೊಂಕುವೆರ್‌ ಪನ್ಪಿನಿನ್‌ ಬುಡ್ಪಬುಡ್ಪಾದ್‌ ದೀಪಿನ ನಾಟಕೊನೆ ’ಕಾಪ‘.
    ಇದ್ಯೆಬುದ್ದಿದ ಮೂಲಕ ಪೊಸ ಸಾದಿ ನಾಡೊಡು, ಈ ಸಂಪ್ರದಾಯದ ಪುದರ್‌ಡ್‌ ಮಲ್ಪುನ ಅನ್ಯಾಯೊಗು ತಾನ್‌ ತಿಕ್ಕಿಯರ ಬಲ್ಲಿಂದ್‌ ನಿರ್ದಾರ ಮಲ್ತ್‌ದ್‌ ಆಯಿಡ್‌ದ್‌ ತಪ್ಪಾಯರ ತೂಪಿನ ಪೊಸ ಯೇಚನೆದ ಜವ್ವನೆ ಒಂದು ಕಡೆಟ್‌, ಎಂಚಾಂಡಲ ಅಯನ್‌ ’ಸಾದಿಗ್‌‘ ಪತಬರೊಡು ಪಂದ್‌ ಬಾರಿ ಕನ್‌ಕಟ್‌ ಕಟ್ಟುನ ಮಹಾಮಾನ್ಯೆರ್‌ ಕುಡೊಂಜಿ ಕಡೆಟ್‌. ಈ ರಡ್ ಕಡೆತ ಒಯ್ತಪತ್ತಡ್‌ ನಲ್ಗುನಕ್‌ಲ್‌ ಏರ್‌ ಪಂದ್‌ ‘ಕಾಪ’ ನಾಟಕ ತೋಜಾವೊಂದು ಪೋಪುಂಡು.
    ಗೊತ್ತಿಪ್ಪುನ ವಿಚಾರನೇ ಆಯ್ನ ಜಾತಿ ಪನ್ಪಿ ನೇಸರಗ್‌ ಟಾರ್ಚ್‌ ಪಾಡುನ ಪ್ರಯತ್ನ ಉಂದು. ಜಾತಿ ಸೂರ್ಯನ ಸುಡ್ಪಿ ಬೊಲ್ಪುದ ದುಂಬು ನೀತಿ, ವಿಚಾರೊದ ಟಾರ್ಟ್‌ಲೈಟ್‌ ತೋಜುಂಡೇ ತುವೊಡು. ತೋಜಿಂಡ ನಾಟಕೊದ ಆಶಯ ಉಡಲ್‌ಗ್ ತಟ್ಟ್ಂಡ್ ಪಂದರ್ಥ.


    ಮಾರ್ಚ್ 04, ಶನಿವಾರ – ಚೋಮನ ದುಡಿ- ಕನ್ನಡ ನಾಟಕ
    ತಂಡ: ಸುರಭಿ (ರಿ.) ಬೈಂದೂರು
    ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ
    ರಂಗ ರೂಪ-ಸಂಗೀತ-ನಿರ್ದೇಶನ: ಗಣೇಶ್ ಮಂದಾರ್ತಿ

    ಕನ್ನಡದ ಮಹತ್ವದ ಲೇಖಕರಾದ ಡಾ| ಕೆ. ಶಿವರಾಮ ಕಾರಂತರ ಕಾದಂಬರಿ “ಚೋಮನ ದುಡಿ” ಸ್ವಾತಂತ್ರ್ಯಾ ಪೂರ್ವ ಕಾಲಘಟ್ಟದಲ್ಲಿನ ತಲ್ಲಣದ ಕಥೆ. ತುಂಡು ಭೂಮಿಗಾಗಿ ಕನಸು ಕಾಣುವ ಚೋಮ. ಕೊನೆಗೂ ಅದನ್ನು ದಕ್ಕಿಸಿಕೊಳ್ಳಲಾಗದೆ ಧಾರುಣ ಅಂತ್ಯ ಕಾಣುತ್ತಾನೆ. ಕನ್ನಡದ ಮಟ್ಟಿಗೆ ದಲಿತ ಸಂವೇದನೆಯನ್ನೊಳಗೊಂಡ ಬಹುಮುಖ್ಯದ ಕೃತಿಗಳಲ್ಗೊಂಡು ಇದು ಚೋಮನ ನೋವು, ಅಸಹಾಯಕತೆ, ಸಿಟ್ಟು, ದುಗುಡಗಳೆಲ್ಲವು ಅವನ ದುಡಿಯ ಬಡಿತದ ನಾದವಾಗುವುದು ಇಡೀ ಸಮುದಾಯದ ಸಂವೇದನೆಯ ಪ್ರತೀಕವಾಗಿ ಹೊರಹೊಮ್ಮಿದೆ. ಚೋಮ ಮತ್ತು ಆತನ ದುಡಿ ನಮ್ಮಲ್ಲಿ ಬಹುದೊಡ್ಡ ರೂಪಕವಾಗಿ ಉಳಿದುಹೋಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleದೃಶ್ಯ (ರಿ.) ಬೆಂಗಳೂರು – ಐತಿಹಾಸಿಕ ನಾಟಕ “ರಕ್ತ ಧ್ವಜ” ಪ್ರದರ್ಶನ
    Next Article ಸಂಚಾರಿ ಥಿಯೇಟರ್ “ಮಿಸ್ ಅಂಡರ್ ಸ್ಟ್ಯಾಂಡಿಂಗ್” 24, 25ರಂದು ಬೆಂಗಳೂರಿನಲ್ಲಿ
    roovari

    Add Comment Cancel Reply


    Related Posts

    ರಂಗ ಚಿನ್ನಾರಿಯಿಂದ ಸಂಸ್ಕೃತಿ ಉಳಿಸುವ ಕೆಲಸ – ಎಡನೀರು ಶ್ರೀ ಗಳು

    May 28, 2025

    ಬೆಂಗಳೂರಿನ ಮಲ್ಲತ್ತಳ್ಳಿ ಕಲಾಗ್ರಾಮದಲ್ಲಿ ನಾಟಕ ಪ್ರದರ್ಶನ | ಮೇ 30

    May 28, 2025

    ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ‘ಹುಡುಕಾಟದಲ್ಲಿ’ ನಾಟಕದ ಪ್ರಥಮ ಪ್ರದರ್ಶನ

    May 28, 2025

    ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ವಸತಿ ಸಹಿತ 45 ದಿನಗಳ ‘ರಂಗ ಶಿಕ್ಷಣ’ | ಜುಲೈ

    May 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.