ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಸುರ್ ಓ ಸಾಜ್’ ಸಂಗೀತ ಕಾರ್ಯಕ್ರಮವು ಜೂನ್ 11ರಂದು ಸಂಜೆ 6 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ. ದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಹಿರಿಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದು, ಸಂಗೀತಾಸಕ್ತರಿಗೆ ಮುಕ್ತ ಪ್ರವೇಶಾವಕಾಶವಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಹೊಸದಿಲ್ಲಿಯ ಡಾ. ಬಿಪುಲ್ ಕುಮಾರ್ ರಾಯ್ ಅವರಿಂದ ಸಂತೂರ್ ವಾದನ ನಡೆಯಲಿದ್ದು, ತಬ್ಲಾ ವಾದಕ ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮದ ಉತ್ತರಾರ್ಧದಲ್ಲಿ ಧಾರವಾಡದ ಡಾ. ವಿಜಯ್ ಕುಮಾರ್ ಪಾಟೀಲ್ ಮತ್ತು ಬೆಂಗಳೂರಿನ ಕೌಶಿಕ್ ಐತಾಳ್ ಅವರ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಬೆಂಗಳೂರಿನ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂನಲ್ಲಿ ಹಾಗೂ ಕೇಶವ ಜೋಶಿ ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ.
ಡಾ. ಬಿಪುಲ್ ಕುಮಾರ್ ರಾಯ್
ಡಾ. ಬಿಪುಲ್ ಕುಮಾರ್ ಭಾರತದ ಅತ್ಯುತ್ತಮ ಸಂತೂರ್ ವಾದಕರಲ್ಲೊಬ್ಬರು. ಹೊಸದಿಲ್ಲಿ ವಿಶ್ವವಿದ್ಯಾನಿಲಯದಿಂದ ಶಾಸ್ತ್ರೀಯ ಸಂಗೀತದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಇವರು ಹೊಸದಿಲ್ಲಿಯ ಭಾರತಿ ಕಾಲೇಜ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾರತೀಯ ಸಂಗೀತ ಮತ್ತು ನೃತ್ಯವನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವ ರಾಷ್ಟ್ರೀಯ ಮಟ್ಟದ ಟ್ರಸ್ಟ್ ರಾಗಾಂಜಲಿ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ಥಾಪಕರೂ ಇವರೇ. ಅವರು ರಷ್ಯಾ, ಈಜಿಪ್ಟ್, ವೆನೆಜುವೆಲಾ ಮತ್ತು ಪೆರು ದೇಶಗಳಲ್ಲಿ ಸಂಸ್ಕೃತಿ ರಾಯಭಾರಿಯಾಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಚೀನಾ, ಥಾಯ್ಲೆಂಡ್, ಕತಾರ್, ಆಸ್ಟ್ರಿಯಾ, ಜರ್ಮನಿ, ಸ್ವಿಜರ್ಲೆಂಡ್ ಮತ್ತು ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಿಂದ ‘ಎ’ ಗ್ರೇಡ್ ಕಲಾವಿದರ ಮಾನ್ಯತೆ ಪಡೆದಿದ್ದಾರೆ. ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಎಂಪೆನೆಲ್ಡ್ ಕಲಾವಿದರಾಗಿದ್ದು, ಬಿಹಾರ ಕಲಾ ಪುರಸ್ಕಾರ ಪಡೆದಿದ್ದಾರೆ.
ಡಾ. ವಿಜಯಕುಮಾರ್ ಪಾಟೀಲ್
ಡಾ. ವಿಜಯಕುಮಾರ್ ಕಿರಾಣಾ ಘರಾಣಾದ ಪ್ರತಿಭಾವಂತ ಗಾಯಕ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸಂಶೋಧನಾ ವಿದ್ವಾಂಸರಾಗಿದ್ದಾರೆ. ಪ್ರಸ್ತುತ ಧಾರವಾಡದ ಐಐಟಿಯಲ್ಲಿ ಸಂಗೀತ ಬೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೂಸ್ತಾನಿ ಗಾಯನವಲ್ಲದೆ ಕನ್ನಡ ರಂಗ ಗೀತೆ, ದಾಸರ ಪದ, ವಚನ, ಮರಾಠಿ ನಾಟ್ಯ ಸಂಗೀತ ಮತ್ತು ಅಭಂಗ್‌ಗಳನ್ನು ಸಮಾನ ಪರಿಣತಿಯೊಂದಿಗೆ ಹಾಡುತ್ತಾರೆ. ದಿ. ಪಂ. ಸಂಗಮೇಶ್ವರ್ ಗುರವ್ ಮತ್ತು ಪಂ. ಕೈವಲ್ಯ ಕುಮಾರ್ ಅವರ ಶಿಷ್ಯರಾಗಿರುವ ವಿಜಯ್ ಕುಮಾರ್, ಹಲವು ಪ್ರತಿಷ್ಠಿತ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟು ನಾಡಿನಾದ್ಯಂತ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೌಶಿಕ್ ಐತಾಳ್
ಪರಮೇಶ್ವರ ಹೆಗಡೆಯವರ ಶಿಷ್ಯರಾದ ಕೌಶಿಕ್ ಐತಾಳ್ ಯುವ ಪೀಳಿಗೆಯ ಗಾಯಕ. ಆಲ್ ಇಂಡಿಯಾ ರೇಡಿಯೊದಲ್ಲಿ ಬಿ-ಉನ್ನತ ಶ್ರೇಣಿಯ ಕಲಾವಿದ. ಭಾರತ ಸರಕಾರ, ಐಟಿಸಿ ಸಂಗೀತ್ ರಿಸರ್ಚ್ ಅಕಾಡೆಮಿ ಮತ್ತು ಆಲ್ ಇಂಡಿಯಾ ರೇಡಿಯೊದಿಂದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಗುರುಗಳಾದ ಪರಮೇಶ್ವರ ಹೆಗಡೆ ಅವರು ಖಯಾಲ್ ಗಾಯಕಿಯಲ್ಲಿ ಕೌಶಿಕ್ ಅವರ ಸಾಮರ್ಥ್ಯವನ್ನು ಪೋಷಿಸಿದರು ಮತ್ತು ಅಭಿವೃದ್ಧಿಪಡಿಸಿದರು ಮತ್ತು ಭರವಸೆಯ ಕಲಾವಿದರಾಗುವ ಹಾದಿಯಲ್ಲಿ ಅವರನ್ನು ಮುನ್ನಡೆಸಿದರು. ಕರ್ನಾಟಕ ಸರಕಾರದಿಂದ ಪ್ರತಿಷ್ಠಿತ ಪಂಡಿತ್ ಬಸವರಾಜ ರಾಜಗುರು ಯುವ ಪುರಸ್ಕಾರ ಪಡೆದಿದ್ದಾರೆ.
ವ್ಯಾಸಮೂರ್ತಿ ಕಟ್ಟಿ
ರಾಜೇಂದ್ರ ನಾಕೋಡ್
ಕೇಶವ ಜೋಶಿ