ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 278ನೇ ಕಾರ್ಯಕ್ರಮವು ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಸುರ್ ಸೊಭಾಣ್ ಶಾಸ್ತ್ರೀಯ ಗಾಯನ ತರಬೇತಿಯ 65 ವಿದ್ಯಾರ್ಥಿಗಳು ‘ಸುರಾಂಗಾಣಿಂ’ (ಸುಮಧುರ ಹಾಡುಗಳು) ಸಂಗೀತ ರಸಮಂಜರಿಯನ್ನು ನಡೆಸಿಕೊಟ್ಟರು. ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಗಂಟೆ ಬಾರಿಸಿ ಈ ಕಾರ್ಯಕ್ರಮಕ್ಕೆ ಚಲಾವಣೆ ನೀಡಿದರು.
ಹಿಂದೂಸ್ತಾನಿ ಗಾಯನದಲ್ಲಿ ಪದವಿ ಪಡೆದ ಕೊಂಕಣಿ ಗಾಯಕಿ ಶಿಲ್ಪಾ ಕುಟಿನ್ಹಾ ಇವರ ನಿರ್ದೇಶನದಲ್ಲಿ ಈ ಸಂಗೀತ ಸಂಜೆ ಪ್ರಸ್ತುತವಾಯಿತು. ಮಕ್ಕಳು ಕೊಂಕಣಿಯ 6 ಹಾಡುಗಳು ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ 4 ಹಾಡುಗಳನ್ನು ಉತ್ಸಾಹದಿಂದ ಸಾದರಪಡಿಸಿದರು. ಮಕ್ಕಳ ಪೋಷಕರೂ ಒಂದು ಹಾಡನ್ನು ಹಾಡಿದರು. ಹದಿನಾಲ್ಕು ಮಕ್ಕಳು ಹಾಡುಗಳ ಬಗ್ಗೆ, ತಮ್ಮ ಕಲಿಕೆಯ ಬಗ್ಗೆ ಮಾಹಿತಿ ನೀಡಿ ನಿರೂಪಿಸಿದರು.
ಆರಂಭದಲ್ಲಿ ಕ್ಲಾರಾ ಡಿಕುನ್ಹಾ ಇವರಿಂದ ಕೊಳಲು ವಾದನ ನಡೆಯಿತು. ಸಂಗೀತದಲ್ಲಿ ಸಹಕರಿಸಿದ ರಸೆಲ್ ರೊಡ್ರಿಗಸ್ (ಬೇಸ್ ಗಿಟಾರ್), ಆಶ್ವಿಲ್ ಕುಲಾಸೊ (ಕೀ ಬೋರ್ಡ್), ಗ್ಲೆನನ್ ಡಿಸೋಜ (ಕೀ ಬೋರ್ಡ್), ಶರ್ವಿನ್ ಪಿಂಟೊ (ಗಿಟಾರ್) ಮತ್ತು ಸೆನೊರಾ ಕುಟಿನ್ಹಾ (ಡ್ರಮ್ಸ್) ಇವರನ್ನು ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಅಧ್ಯಕ್ಷ ಲುವಿ ಪಿಂಟೊ, ಸುಮೇಳ್ ಸಂಯೋಜಕಿ ರೈನಾ ಸಿಕ್ವೇರಾ ಹಾಗೂ ಕಾರ್ಯದರ್ಶಿ ಕೇರನ್ ಮಾಡ್ತಾ ಉಪಸ್ಥಿತರಿದ್ದರು.