ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತಪಡಿಸಿದ ಉತ್ಕೃಷ್ಟ ಮಟ್ಟದ ‘ಸುರ್ ಓ ಸಾಜ್’ ಸಂಗೀತ ಕಾರ್ಯಕ್ರಮ ನಗರದ ಪುರಭವನದಲ್ಲಿ ದಿನಾಂಕ 11-06-2023 ಭಾನುವಾರ ಸಂಗೀತ ಪ್ರಿಯರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಯಿತು.
ಡಾ. ನವೀನ್ ಚಂದ್ರ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಜಿ.ಜಿ. ಲಕ್ಷ್ಮಣ್ ಪ್ರಭು, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್, ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್. ನಾಯಕ್, ಪಂಡಿತ್ ಮೌನೇಶ್ ಕುಮಾರ್ ಛಾವಣಿ, ಯುವ ಸಿತಾರ್ ವಾದಕ ಅಂಕುಶ್ ಎನ್. ನಾಯಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಹೊಸದಿಲ್ಲಿಯ ಡಾ. ಬಿಪುಲ್ ಕುಮಾರ್ ರಾಯ್ ಅವರಿಂದ ಸಂತೂರ್ ವಾದನ ನಡೆಯಿತು. ಅವರಿಗೆ ಖ್ಯಾತ ತಬ್ಲಾ ವಾದಕ ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್ ಸಾಥ್ ನೀಡಿದರು. ಬಳಿಕ ಧಾರವಾಡದ ಡಾ.ವಿಜಯ್ ಕುಮಾರ್ ಪಾಟೀಲ್ ಮತ್ತು ಬೆಂಗಳೂರಿನ ಕೌಶಿಕ್ ಐತಾಳ್ ಅವರ ಜುಗಲ್‌ಬಂದಿ ಕಾರ್ಯಕ್ರಮ ಎಲ್ಲರ ಮನಸೂರೆಗೊಳಿಸಿತು. ಅವರಿಗೆ ಬೆಂಗಳೂರಿನ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಅವರು ಹಾರ್ಮೋನಿಯಂ ಹಾಗೂ ಕೇಶವ ಜೋಶಿ ತಬ್ಲಾದಲ್ಲಿ ಸಾಥ್ ನೀಡಿದರು.