ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ನಾಟ್ಕದೂರು ಇಲ್ಲಿರುವ ನಮ ತುಳುವೆರ್ ಕಲಾ ಸಂಘಟನೆ (ರಿ.) ವತಿಯಿಂದ ಸುವರ್ಣ ಕರ್ನಾಟಕ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 01-11-2023ರಿಂದ 01-11-2024ರವರೆಗೆ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ದಿನಾಂಕ 01-12-2023ನೇ ಶುಕ್ರವಾರದಂದು ‘ಸುವರ್ಣ ಕರ್ನಾಟಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಮುದ್ರಾಡಿ ನಾಟ್ಕದೂರು ಬಿ.ವಿ. ಕಾರಂತ ಬಯಲು ರಂಗ ಸ್ಥಳದಲ್ಲಿ ನಡೆಯಲಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಇವರು ವಹಿಸಲಿದ್ದು, ಬೆಳಗಾವಿಯ ರಂಗ ನಿರ್ದೇಶಕರಾದ ಶ್ರೀ ಶ್ರೀಪತಿ ಮಂಜನಬೈಲು ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ವಾಸ್ತು ತಜ್ಞರಾದ ಶ್ರೀ ಪ್ರಮಲ್ ಕುಮಾರ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆ, ಶಂಕರಪುರ, ಏಕ ಜಾತಿ ಧರ್ಮ ಪೀಠ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ, ಮಂದಾ ರ್ತಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರು ಶ್ರೀ ಧನಂಜಯ ಶೆಟ್ಟಿ, ಮೂಡಬಿದ್ರೆಯ ಎಸ್.ಕೆ.ಎಫ್. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಜಿ.ರಾಮಕೃಷ್ಣ ಅಚಾರ್, ಅರಸಮ್ಮ ಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಶ್ರೀ ಚಂದ್ರಶೇಖರ್ ಶೆಟ್ಟಿ ಮತ್ತು ಧಾರ್ಮಿಕ ಮುಂದಾಳು ಸಮಾಜಸೇವಕರಾದ ಶ್ರೀ ಎಚ್. ಭಾಸ್ಕರ ಜೋಯಿಸ ಹೆಬ್ರಿ ಇವರುಗಳಿಗೆ ‘ಸುವರ್ಣ ಕರ್ನಾಟಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಸಭಾ ಕಾರ್ಯಕ್ರಮದ ನಂತರ ‘ನಾಟ್ಕ ಮುದ್ರಾಡಿ’ ತಂಡದವರು ಸುಕುಮಾರ್ ಮೋಹನ್ ಇವರ ನಿರ್ದೇಶನದಲ್ಲಿ ‘ಪುನರ್ನವ ಚೇತನ’ ನಾಟಕ ಮತ್ತು ಬೆಂಗಳೂರಿನ ‘ರಂಗಾಸ್ಥೆ ಸಂಸ್ಥೆ’ ತಂಡದವರು ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನ ನೀಡಲಿದ್ದಾರೆ. ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಕೋರಿದ್ದಾರೆ.