ಬಂಟ್ವಾಳ : ಕರ್ನಾಟಕದ ಸುವರ್ಣ ಸಂಭ್ರಮದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ಬಂಟ್ವಾಳ ತಾಲೂಕಿಗೆ ದಿನಾಂಕ 2 ಅಕ್ಟೋಬರ್ 2024ರಂದು ಪ್ರವೇಶಿಸಿದ್ದು, ಬಿ.ಸಿ.ರೋಡ್ ನಲ್ಲಿ ಬಂಟ್ವಾಳ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಿತ ನಾನಾ ಇಲಾಖೆಗಳ ವತಿಯಿಂದ ಗೌರವಪೂರ್ಣವಾಗಿ ಸ್ವಾಗತಿಸಲಾಯಿತು.
ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿಂದಿಯಾ ನಾಯಕ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಇವರು, ಕರ್ನಾಟಕದ ಸಾಧಕರು, ಸಂಸ್ಕೃತಿಯ ದೃಶ್ಯಾವಳಿಯನ್ನು ಒಳಗೊಂಡಿರುವ ಸುವರ್ಣ ಕರ್ನಾಟಕ ರಥದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕರ್ನಾಟಕವೆಂದು ಹೆಸರಾಗಿ ರಾಜ್ಯ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಥ ಸಾಗುತ್ತಿದ್ದು, ನಮ್ಮ ನೆಲ, ಜಲ, ವಿಚಾರಗಳನ್ನು ಅರಿಯಲು ಇದು ಸಾಧ್ಯವಾಗುತ್ತದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಮಾರ್ಗದರ್ಶನ ಮಂಡಳಿ ಸದಸ್ಯ ಹರೀಶ ಮಾಂಬಾಡಿ ಮಾತನಾಡಿ, “ದೈನಂದಿನ ಕಾರ್ಯನಿರ್ವಹಣೆಯ ಸಂದರ್ಭವೂ ಕನ್ನಡ ಭಾಷೆಯಲ್ಲೇ ಮಾತನಾಡುವ ಮೂಲಕ ನೆಲದ ಸಂಸ್ಕೃತಿಯನ್ನು ಉಳಿಸಬೇಕಾಗಿದೆ” ಎಂದರು.
ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ, ಬಂಟ್ವಾಳ ನಗರ ಠಾಣೆ ಇನ್ಸ್ ಪೆಕ್ಟರ್ ಅನಂತಪದ್ಮನಾಭ, ಉಪತಹಸೀಲ್ದಾರ್ ಗಳಾದ ನವೀನ್ ಬೆಂಜನಪದವು, ದಿವಾಕರ ಮುಗುಳ್ಯ, ನರೇಂದ್ರನಾಥ ಮಿತ್ತೂರು, ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕ ಜನಾರ್ದನ, ತಾಲೂಕು ಪಂಚಾಯಿತಿ ಅಧಿಕಾರಿ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಸದಸ್ಯ ಪೂವಪ್ಪ ನೇರಳಕಟ್ಟೆ, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಪಿ. ಮುಹಮ್ಮದ್, ವಿಟ್ಲ ಹೋಬಳಿ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಕಾರ್ಯಕಾರಿ ಸಮಿತಿ ಸದಸ್ಯರಾದ ರಜನಿ ಚಿಕ್ಕಯ್ಯಮಠ, ನಾನಾ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.