ಧರ್ಮಸ್ಥಳ : ‘ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ’ ಇದರ ವತಿಯಿಂದ ಐವತ್ತರ ವರುಷ – ನವೋಲ್ಲಾಸದ ಹರುಷ ಪ್ರಯುಕ್ತ ದಿನಾಂಕ 10 ಅಕ್ಟೋಬರ್ 2024ರ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆಯವರ ಬೀಡಿನಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ‘ಸುವರ್ಣ ಪರ್ವ’ವನ್ನು ಉದ್ಘಾಟಿಸಲಿದ್ದಾರೆ. ಮಕ್ಕಳ ಮೇಳದ ಬಾಲ ಕಲಾವಿದರಿಂದ ‘ಹೂವಿನ ಕೋಲು’ ಪ್ರದರ್ಶನ ನಡೆಯಲಿದೆ.
ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಎಚ್. ಶ್ರೀಧರ ಹಂದೆಯವರ ಕನಸಿನ ಕೂಸು ‘ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ’. ಈ ಇಬ್ಬರೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು. 1975ರ ಅಕ್ಟೋಬರ್ 10ರಂದು ಸಾಂಕೇತಿಕ ಉದ್ಘಾಟನೆ ಕಂಡ ಮಕ್ಕಳ ಮೇಳವು ಮಂಗಳೂರಿನಲ್ಲಿ ಮೊದಲ ದಾಖಲೆಯ ಪ್ರದರ್ಶನ ನೀಡಿದ್ದು ಇದೀಗ ಇತಿಹಾಸ. 1978ರಲ್ಲಿ ಯಕ್ಷಗಾನವನ್ನು ಪ್ರಪ್ರಥಮ ಸೀಮೋಲ್ಲಂಘನಗೈದ ಜಾಗತಿಕ ದಾಖಲೆಯ ಮಕ್ಕಳ ಮೇಳವು ಮತ್ತೆ ಎರಡು ಬಾರಿ ವಿದೇಶದ ಮಣ್ಣಿನಲ್ಲಿ ಕಾಲಿಟ್ಟಿತು. ಇದುವರೆಗೂ ದೇಶದ ನಾನಾ ರಾಜ್ಯಗಳಲ್ಲಿ, ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನ ನೀಡಿದ ಸಂತೃಪ್ತಿ.
ಎಷ್ಟು ವರ್ಷ ಮಕ್ಕಳ ಮೇಳ ಮುಂದುವರಿಸಲು ಸಾಧ್ಯ ? ಗುಣ ಮಟ್ಟ ಉಳಿಸಲು ಸಾಧ್ಯವೇ ? ಕಷ್ಟದ ದಾರಿ, ಮುಂದುವರಿಯಿರಿ ಎಂದು ಕೋಟ ಶಿವರಾಮ ಕಾರಂತರು ಅಂದೇ ಹೊಣೆಗಾರಿಕೆಯ ಎಚ್ಚರಿಕೆ ನೀಡಿದ್ದರು. ಅಚ್ಚರಿಯೆಂದರೆ ಅದೇ ಗುಣಮಟ್ಟದ ನಿಮ್ಮ ಮಕ್ಕಳ ಮೇಳಕ್ಕೆ ಇದೀಗ 50ರ ಸುವರ್ಣ ಸಂಭ್ರಮ. ‘ಸುವರ್ಣ ಪರ್ವ’ ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 10 ಅಕ್ಟೋಬರ್ 2024ರಿಂದ ಮುಂದಿನ 10 ಅಕ್ಟೋಬರ್ 2025ರವರೆಗೆ ವಿವಿಧ ಕಾರ್ಯಕ್ರಮ ಮಾಡಬೇಕೆಂಬ ಕನಸು ನಮ್ಮದು.
ವಿಷಾದವೆಂದರೆ ಉಡುಪರು ಈಗ ನಮ್ಮೊಂದಿಗಿಲ್ಲ. ಹಂದೆಯವರು 88ರ ಇಳಿವಯಸ್ಸಿನ ವೃದ್ಧಾಪ್ಯದ ವಿಶ್ರಾಂತಿಯಲ್ಲಿದ್ದಾರೆ. ಮಕ್ಕಳ ಮೇಳದ ಆರಂಭದಿಂದ ಇಲ್ಲಿಯವರೆಗೆ ಉಡುಪ ಮತ್ತು ಹಂದೆಯವರಿಗೆ ಹಲವರು ನಿಮ್ಮದೇ ರೀತಿಯಲ್ಲಿ ಕೈ ಜೋಡಿಸಿದವರು. ಕೈ ಹಿಡಿದು ನಡೆಸಿದವರು ಹಲವರು. ಕಲ್ಲು ಮುಳ್ಳುಗಳ ಹಾದಿಯಲ್ಲಿ ರತ್ನ ಗಂಬಳಿ ಹಾಸಿದವರು ಕೆಲವರು. ಬಿಸಿಲಿನಾಯಾಸಕ್ಕೆ, ಮಳೆಯ ಬಿರುಸಿಗೆ ಕೊಡೆಹಿಡಿದವರು ಇನ್ನೂ ಅನೇಕರು. ಬಾಯಾರಿದಾಗ ಹಾಲುಣಿಸಿದವರು ಹಲವರು. ಸುಮಾರು 50 ವರ್ಷಗಳ ನಮ್ಮ ಏಳು ಬೀಳುಗಳ ಹಾದಿಯಲ್ಲಿ ನೈತಿಕವಾಗಿ, ಆರ್ಥಿಕವಾಗಿ, ನಮ್ಮಲ್ಲಿ ದೃಢತೆ ತುಂಬಿದ ಮಹನೀಯರು ಹತ್ತಾರು ಮಂದಿ. ಅವರೆಲ್ಲರೂ ಸದಾ ಪ್ರಾತಃ ಸ್ಮರಣೀಯರು. ಟ್ರಸ್ಟ್ ಕಟ್ಟುವ ಮೂಲಕ ವಿಶ್ವಾಸ ಮೂಡಿಸಿದವರು ಕೆ.ಎಂ. ಉಡುಪ, ಏರ್ಯ ಆಳ್ವರು, ಸುಬ್ಬಣ್ಣ ಭಟ್ಟರು, ಕಲ್ಕೂರರು, ಕುಂದರ್ ಸಹೋದರು, ಪಿ.ಪಿ. ಮಯ್ಯ, ಶ್ರೀನಿವಾಸ ಉಡುಪ ಕುಟುಂಬದವರು ಇನ್ನೂ ಅನೇಕರು. ಮಕ್ಕಳ ಮೇಳದ ಮುಖ್ಯ ಆಸ್ತಿ ಇಲ್ಲಿನ ಹಿರಿಯ ಕಿರಿಯ ಕಲಾವಿದರನೇಕರು. 60 ದಾಟಿದವರೂ ಇದ್ದಾರೆ, 6ರ ಹರೆಯದವರೂ ಇದ್ದಾರೆ. ನಿಮ್ಮೆಲ್ಲರನ್ನು ಕೃತಜ್ಞತಾ ಭಾವದಿಂದ ನೆನೆಯುತ್ತೇವೆ. ಮುಂದೆಯೂ ನಮ್ಮ ಹಾದಿಯಲ್ಲಿ ಹಸಿರಾಗಬೇಕಾದವರು ನೀವು ಎಂದು ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ 9845414622.