ಬೆಂಗಳೂರು : ಕರ್ನಾಟಕ ಯಕ್ಷಧಾಮ ಮಂಗಳೂರು, ಪದ್ಮ ಕಮಲ ಟ್ರಸ್ಟ್ ಬೆಂಗಳೂರು, ಕಲ್ಕೂರ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ’ ಸರಣಿ ಕಾರ್ಯಕ್ರಮದ ಅಂಗವಾಗಿ ಸುವರ್ಣ ಸಂಮಾನ – ಯಕ್ಷಗಾನ ಪ್ರದರ್ಶನ ದಿನಾಂಕ 09 ಜೂನ್ 2025ರಂದು ಬೆಂಗಳೂರಿನ ಪರಂಪರಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ಸಂಶೋಧಕ ಹಾಗೂ ವಿದ್ವಾಂಸರಾದ ಆನಂದರಾಮ ಉಪಾಧ್ಯ ಮಾತನಾಡಿ “ಸಂಘಟನೆ ಮತ್ತು ನಿರಂತರತೆ ಎರಡೂ ಸುಲಭದ್ದಲ್ಲ. ಎಪ್ಪತ್ತರ ದಶಕದಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಸುಮಾರು ಐವತ್ತು ವರ್ಷಗಳ ಸಾರ್ಥಕ ದಿಗ್ವಿಜಯವನ್ನು ಸಾಧಿಸಿದ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರು ಯಕ್ಷ ಯುಗ ಪ್ರವರ್ತಕರು. ಅನೇಕ ಮಕ್ಕಳ ಮೇಳಗಳು ಇವತ್ತು ಹುಟ್ಟಿ, ಪ್ರದರ್ಶನಗೊಳ್ಳುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಶಸ್ಸಿನ ಗಾಥೆಯೇ ಮೂಲ ಪ್ರೇರಣೆ. ಮುಗ್ಧ ಮನಸ್ಸಿನ ಮಕ್ಕಳಲ್ಲಿ ಪರಂಪರೆಯ ಯಕ್ಷಗಾನದ ಅಭಿರುಚಿಯನ್ನು ಮೂಡಿಸಿ, ಯಕ್ಷಗಾನ ಪ್ರೇಕ್ಷಕರ ಸಹೃದಯತೆಯನ್ನು ತಿದ್ದಿದ ಮಕ್ಕಳ ಮೇಳ ಐತಿಹಾಸಿಕ ದಾಖಲೆಯನ್ನು ಮೆರೆದಿದೆ” ಎಂದು ಹೇಳಿದರು.
ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷರಾದ ಎಚ್. ಜನಾರ್ದನ ಹಂದೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪ್ರಾಕ್ತನ ಕಲಾವಿದರಾದ ಗಣೇಶ್ ಶಾನುಭಾಗ್, ರಾಮದೇವ ಉರಾಳ, ವೆಂಕಟೇಶ ಹಂದೆ, ಕೃಷ್ಣಾನಂದ ಆಚಾರ್, ಮುರಳಿಧರ ನಾವುಡ, ವಿಶ್ವನಾಥ ಉರಾಳ, ಕಲಾ ಪೋಷಕರಾದ ಎಂ. ಸುಧೀಂದ್ರ ಹೊಳ್ಳ, ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿದ್ದು ಮಕ್ಕಳ ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕರು, ಸಂಘಟಕರು, ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೆ. ಮೋಹನ್, ಶ್ರೀನಿವಾಸ ಸಾಸ್ತಾನ್, ಕೃಷ್ಣಮೂರ್ತಿ ತುಂಗ, ಡಾ. ಬೇಗಾರು ಶಿವ ಕುಮಾರ್, ಡಾ. ರಾಧಾಕೃಷ್ಣ ಉರಾಳ, ಶಂಕರ ಬಾಳ್ಕುದ್ರು ಅವರನ್ನು ಸುವರ್ಣ ಸಂಮಾನದೊಂದಿಗೆ ಗೌರವಿಸಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಮಾಧುರಿ ಶ್ರೀರಾಮ ನಿರೂಪಿಸಿ, ಪ್ರದೀಪ ಮಧ್ಯಸ್ಥ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಕಾರ್ಕಳ ಶ್ರೀದೇವಿ ಲಲಿತ ಕಲಾ ಬಳಗದವರಿಂದ ಶಶಿಕಾಂತ ಶೆಟ್ಟಿ ನಿರ್ದೇಶನದಲ್ಲಿ ಶಾಂಭವಿ ವಿಜಯ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಸಂಪನ್ನಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಬೆಂಗಳೂರಿನಲ್ಲಿ ಸಾಹಿತಿ ಹೆಚ್. ಎಸ್. ವೆಂಕಟೇಶಮೂರ್ತಿ ಇವರಿಗೆ ನುಡಿ ನಮನ