ಕೋಟ : ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭ ದಿನಾಂಕ 19 ಅಕ್ಟೋಬರ್ 2025ರಂದು ಕೋಟದ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಚಂಡೆ ನುಡಿಸಿ ಉದ್ಘಾಟಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು “ಉಡುಪ ಮತ್ತು ಹಂದೆಯವರಿಂದ ಸ್ಥಾಪಿಸಲ್ಪಟ್ಟ ಸಾಲಿಗ್ರಾಮ ಮಕ್ಕಳ ಮೇಳವು ಚಾರಿತ್ರಿಕ ದಾಖಲೆಯೊಂದಿಗೆ ಐವತ್ತು ವರ್ಷಗಳ ದಿಗ್ವಿಜಯವನ್ನು ಸಾಧಿಸಿರುವುದರ ಜತೆಗೆ ವಿಶ್ವಕ್ಕೆ ಪರಿಚಯಿಸಿಕೊಂಡಿದೆ. ಈ ಮೇಳದ ಕೀರ್ತಿ ಇನ್ನಷ್ಟು ಹೆಚ್ಚಲಿ. ಇತ್ತೀಚೆಗೆ ಯಕ್ಷಗಾನವು ವಾಣಿಜೀಕರಣಗೊಂಡು ಅದರ ಮೂಲ ಸ್ವರೂಪಕ್ಕೆ ಧಕ್ಕೆ ಬಂದಿದೆ. ಕಲಾವಿದರ ವೈಯಕ್ತಿಕ ಮಾತುಕತೆಗಳೇ ರಂಗದ ಸಂಭಾಷಣೆಗಳಾಗಿ ಮೂಡಿಬರುತ್ತಿವೆ. ಇಂಥವುಗಳಿಗೆ ಕಡಿವಾಣ ಹಾಕಬೇಕು” ಎಂದು ಆಶೀರ್ವದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಮಾತನಾಡಿ “ಯುವಜನತೆ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮಕ್ಕಳು, ಯಕ್ಷಗಾನದಲ್ಲಿ ತೊಡಗಿಸಿ ಕೊಂಡಾಗ ಅವರಲ್ಲಿ ಉತ್ತಮ ಸಂಸ್ಕಾರ ಮೂಡುವುದಕ್ಕೆ ಸಾಧ್ಯ” ಎಂದರು.
ಮುಖ್ಯಅಭ್ಯಾಗತರಾಗಿ ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ್ ಜೋಶಿ ಗೀತಾನಂದ ಫೌಂಡೇಷನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್, ವಿವೇಕ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರಭಾಕರ ಮಯ್ಯ ಭಾಗವಹಿಸಿದ್ದರು. ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಮಕ್ಕಳ ಮೇಳದ ಅಧ್ಯಕ್ಷರಾದ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ ಉಪಸ್ಥಿತರಿದ್ದರು.
ಮೇಳದ ಕಾರ್ಯಾಧ್ಯಕ್ಷ ಕೆ. ಮಹೇಶ್ ಉಡುಪ ಸ್ವಾಗತಿಸಿ, ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾವ್ಯ ಪ್ರಾರ್ಥನೆಗೈದು, ಮಾಧುರಿ ಶ್ರೀರಾಮ್, ವಿನಿತ ಹಂದೆ ಅತಿಥಿಗಳನ್ನು ಗೌರವಿಸಿಸಿ, ಪ್ರಣತ್ ಕಾರ್ಯಕ್ರಮ ನಿರೂಪಿಸಿ, ಪ್ರಾಕ್ತನ ಕಲಾವಿದ ರಾಘವೇಂದ್ರ ನಾಯಿರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಪ್ರಾಕ್ತನ ವಿದ್ಯಾರ್ಥಿಗಳಿಂದ ತಾಮ್ರಧ್ವಜ ಕಾಳಗ ಹಾಗೂ ಅತಿಥಿ ಕಲಾವಿದರಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.