ಬಂಟ್ವಾಳ: ಕರ್ನಾಟಕ ಸರಕಾರ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’, ‘ಚಿಣ್ಣರಲೋಕ’, ‘ಮೋಕೆದ ಕಲಾವಿದೆರ್’ ಹಾಗೂ ‘ಸೇವಾಬಂಧು’ ಸಂಸ್ಥೆಗಳ ವತಿಯಿಂದ ‘ಕರಾವಳಿ ಕಲೋತ್ಸವ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರಪಾಡಿ ಯಕ್ಷಗಾನ ಅಭಿಮಾನಿ ಬಳಗದ ಸಹಕಾರದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರ ಯಕ್ಷಪಯಣದ 50ರ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ‘ಸುವರ್ಣ ಸರಪಾಡಿ’ ಕಾರ್ಯಕ್ರಮವು ದಿನಾಂಕ 11 ಜನವರಿ 2025ರ ಶನಿವಾರದಂದು ಬಿ. ಸಿ. ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ನಳಿನ್ ಕುಮಾರ್ ಕಟೀಲ್ ಮಾತನಾಡಿ “ಇಂದು ಯಕ್ಷಗಾನದಲ್ಲಿ ಪಾತ್ರೋಚಿತವಾದ ಮಾತುಗಳನ್ನು ಅದ್ಭುತ ಅಭಿನಯದ ಮೂಲಕ ನಿರ್ವಹಿಸುವ ಕಲಾವಿದರ ಪೈಕಿ ಸರಪಾಡಿ ಅಶೋಕ ಶೆಟ್ಟರು ಅಗ್ರಪಂಕ್ತಿಗೆ ಸೇರುತ್ತಾರೆ. ಅವರು ಯಕ್ಷಗಾನವಷ್ಟೇ ಅಲ್ಲ, ರಾಜಕೀಯ, ಸಮಾಜಸೇವೆಯಲ್ಲೂ ಮಿಂಚಿದವರು. ಕಲಾವಿದರಿಗಾಗಿ ಸ್ಪಂದಿಸಿದವರು” ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಅಭಿನಂದನಾ ಭಾಷಣಗೈದ ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ‘ಯಕ್ಷಾಂಗಣ’ ಮಂಗಳೂರು ಇದರ ಕಾರ್ಯಾಧ್ಯಕ್ಷರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರು “ಸರಪಾಡಿ ಅಶೋಕ ಶೆಟ್ಟರು ಕೇವಲ ಯಕ್ಷಗಾನ ಕಲಾವಿದರಷ್ಟೇ ಅಲ್ಲದೆ, ಹಲವು ಕ್ಷೇತ್ರಗಳಲ್ಲಿ ದುಡಿದು ಗುರುತಿಸಿಕೊಂಡವರು. ಇದೇ ಕಾರಣಕ್ಕೆ ಇವರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ , ‘ಆರ್ಯಭಟ’ ಸಹಿತ ಹಲವು ಸನ್ಮಾನಗಳು, ಪುರಸ್ಕಾರಗಳು ಅರ್ಹವಾಗಿಯೇ ದೊರಕಿದವು. ಇವರಂತೆ ಪಾತ್ರನಿರ್ವಹಣೆ ಮಾಡುವವರು ವಿರಳ” ಎಂದು ಹೇಳಿದರಲ್ಲದೆ ತಾವಿಬ್ಬರೂ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ಯರ ತಂಡದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮಾಡಿದ ಕಾರ್ಯಕ್ರಮಗಳನ್ನು ಸ್ಮರಿಸಿಕೊಂಡರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಘಟಕ ಬಿ.ಭುಜಬಲಿ ಧರ್ಮಸ್ಥಳ ಮಾತನಾಡಿ “ಸರಪಾಡಿ ಅಶೋಕ ಶೆಟ್ಟರು ರಂಗದಲ್ಲಿದ್ದರೆ ಅದರ ಸೊಗಸೇ ಬೇರೆ. ಅವರ ಕಲಾಬದುಕು ಇನ್ನಷ್ಟು ಔನ್ನತ್ಯಕ್ಕೇರಲಿ” ಎಂದು ಹಾರೈಸಿದರು. ಹಿರಿಯರಾದ ಮೋಹನದಾಸ ಶೆಟ್ಟಿ ಮುನ್ನಲಾಯಿಗುತ್ತು ಇವರು ಅಶೋಕ್ ಶೆಟ್ಟರ ಯಕ್ಷಯಾನದ ವರ್ಣಚಿತ್ರಗಳನ್ನೊಳಗೊಂಡ ‘ಸುವರ್ಣ ಸರಪಾಡಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ಇದೇ ವೇಳೆ ಸರಪಾಡಿ ಅಶೋಕ ಶೆಟ್ಟರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಅವರು “ತಮ್ಮ ಸುದೀರ್ಘ ಯಕ್ಷಪಯಣದಲ್ಲಿ ಜತೆಕಲಾವಿದರು, ಅಭಿಮಾನಿಗಳು ಹಾಗೂ ಕಲಾಪೋಷಕರ ಪ್ರೀತಿ ವಿಶ್ವಾಸ ತನ್ನನ್ನು ಈ ವೇದಿಕೆಗೆ ಕರೆತರುವಂತೆ ಮಾಡಿದೆ.” ಎಂದರು. ಈ ಸಂದರ್ಭ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರ ಹಾಗೂ ತಾರಾನಾಥ ಪಂಬದ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕರಾವಳಿ ಕಲೋತ್ಸವ ಸಮಿತಿಯ ಅಧ್ಯಕ್ಷರಾದ ಸುದರ್ಶನ ಜೈನ್ ಪಂಜಿಕಲ್ಲು, ಸಸಿಹಿತ್ಲು ಮೇಳದ ವ್ಯವಸ್ಥಾಪಕ ರಾಜೇಶ್ ಕೆ. ಗುಜರನ್, ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ, ಸದಾನಂದ ಶೆಟ್ಟಿ ರಂಗೋಲಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ರಂಗಭೂಮಿ ಕಲಾವಿದ ಪ್ರದೀಪ್ ಆಳ್ವ, ಉದ್ಯಮಿ ರಮೇಶ್ ಮಂಜೇಶ್ವರ, ಸಾಹಿತಿ ಲಕ್ಷ್ಮೀನಾರಾಯಣ ರೈ ಹರೇಕಳ, ಪ್ರಮುಖರಾದ ಪುರುಷೋತ್ತಮ ಪೂಜಾರಿ ಮಜಲು, ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜ, ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು.ಬುಡಾ ಗ್ರಾಮ ಪಂಚಾಯತ್ ಇದರ ಮಾಜಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಸ್ವಾಗತಿಸಿ, ‘ಚಿಣ್ಣರಲೋಕ ಸೇವಾ ಬಂಧು’ ಅಧ್ಯಕ್ಷರಾದ ಮೋಹನದಾಸ ಕೊಟ್ಟಾರಿ ಮುನ್ನೂರು ಪ್ರಾಸ್ತಾವಿಕ ಭಾಷಣ ಮಾಡಿ, ಪ್ರಜ್ವಲ್ ಶೆಟ್ಟಿ ಸಿದ್ಧಕಟ್ಟೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.