ಕರ್ನಾಟಕ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ನಗರವೆಂದರೆ ಮುಂಬಯಿ. ಮುಂಬಯಿಯಲ್ಲಿರುವಷ್ಟು ಸಂಘ-ಸಂಸ್ಥೆಗಳು ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವತ್ತಿಗೂ ಈ ಮಾಯಾನಗರಿಯಲ್ಲಿ ಹದಿನೆಂಟು, ಇಪ್ಪತ್ತು ಲಕ್ಷ ತುಳು ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿರುವುದು ಉಲ್ಲೇಖನೀಯ ಅಂಶ. ವಲಸೆ ಬಂದ ಮುಂಬಯಿ ಕನ್ನಡಿಗರು ಅನ್ಯಾನ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಹಸ ಸಾಧನೆ ಬಹು ರೋಚಕವಾಗಿದೆ. ಮುಂಬಯಿಯಲ್ಲಿ ಸಂಘಟನಾ ಕ್ಷೇತ್ರದಲ್ಲಿ ಮಿನುಗುತಾರೆಯಾಗಿ ಮಿಂಚಿದವರು ಜಯ ಸುವರ್ಣ. ಜಯಣ್ಣ ಎಂದೇ ಅವರು ಇಲ್ಲಿನ ತುಳು ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾದ ಅಪೂರ್ವ ಚೇತನ.
ಮುಂಬಯಿ ಮಹಾನಗರದಲ್ಲಿ ಸಮಾಜ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ಸಂಘಟಕ ಜಯ ಸುವರ್ಣ ಅವರ ಹೆಸರು ಚಿರಸ್ಥಾಯಿಯಾಗಿದೆ. ಅವರು ಉದ್ಯಮಿಯಾಗಿ, ಖ್ಯಾತ ಸಂಘಟಕರಾಗಿ, ಬಿಲ್ಲವರ ಎಸೋಸಿಯೇಶನ್‌ನ ಅಧ್ಯಕ್ಷರಾಗಿ, ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷರಾಗಿ, ತುಳು ಕನ್ನಡಿಗರ ಸ್ಪೂರ್ತಿಯಾಗಿ ಉತ್ತುಂಗಕ್ಕೇರಿದ ಅತಿ ಸರಳ ಹಾಗೂ ಅತ್ಯಂತ ವಿರಳ ಸಾಂಸ್ಕೃತಿಕ ನಾಯಕ ಎಂದರೆ ಅತ್ಯುಕ್ತಿಯಾಗದು. ಜಯ ಸುವರ್ಣ ಅವರದು ವರ್ಣ ರಂಜಿತ ವ್ಯಕ್ತಿತ್ವ. ಅವರು ಅಪರೂಪದ ಸಮಾಜಸೇವಕ. ಪ್ರಾಮಾಣಿಕವಾಗಿ ಜನಸೇವೆಗೆ ಸಮರ್ಪಿಸಿಕೊಂಡರೆ ವ್ಯಕ್ತಿ ಎಲ್ಲ ಅಡೆತಡೆಗಳನ್ನು ಎದುರುಸಿ ಹೇಗೆ ಗೆಲ್ಲಬಹುದು ಎಂಬುದಕ್ಕೆ ಜಯ ಸುವರ್ಣ ಅವರು ಉತ್ತಮ ಉದಾಹರಣೆಯಾಗಿದ್ದರು.
ಜಯ ಸುವರ್ಣ ಅವರ ಬಾಳು ಒಂದು ಸಾಹಸಪ್ರಥೆ. ಅವರು ಶ್ರಮಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು; ತಮ್ಮನ್ನು ತಾವು ರೂಪಿಸಿಕೊಂಡ ಸ್ವಾಭಿಮಾನಿ. ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಸಮುದಾಯಕ್ಕೆ ಬೆಳಕಾದ ಸ್ಪೂರ್ತಿ ಚೇತನ. ಅವರು ದೊಡ್ಡ ಕುಟುಂಬದಲ್ಲಿ ಜನಿಸಿದವರಲ್ಲ. ತಮ್ಮ ಸಾಹಸ ಸಾಧನೆಗಳಿಂದ ದೊಡ್ಡವರಾದವರು. ಕಠಿಣ ಪರಿಶ್ರಮ, ಸಂಘಟನ ಚಾತುರ್ಯ, ಮಹತ್ವಕಾಂಕ್ಷೆ, ದಕ್ಷತೆ ಅವರನ್ನು ಉನ್ನತ ಸ್ಥಿತಿಗೆ ಮುಟ್ಟಿಸಿವೆ. ಬಡತನ ಅವರಿಗೆ ಶಾಪವಾಗಲಿಲ್ಲ ಶೂನ್ಯದಲ್ಲಿ ಅವರು ಬದುಕು ಕಟ್ಟುವ ಕೆಲಸ ಮಾಡಿ ಸೈ ಎನಿಸಿಕೊಂಡವರು. ಕಾಯಕವೇ ಕೈಲಾಸ ಎಂಬ ದೃಢ ನಂಬಿಕೆ ಸುವರ್ಣ ಅವರದಾಗಿತ್ತು. ಅವರಲ್ಲಿ ಪ್ರಚಂಡವಾದ ಆತ್ಮವಿಶ್ವಾಸವಿತ್ತು. ಆತ್ಮ ಬಲವೇ ನಿಜವಾದ ಬಲವಾಗಿದೆ. ಅವರು ಧೈರ್ಯಶಾಲಿ, ‘ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ’ ಎಂಬ ಮಾತು ಅವರಿಗೆ ಚೆನ್ನಾಗಿ ಅನ್ವಯಿಸುತ್ತದೆ. ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಅದರ ಬೆಳಕಿನಲ್ಲಿ ತಮ್ಮ ಬದುಕನ್ನು ನೇರ್ಪುಗೊಳಿಸಿಕೊಂಡ ಧೀಮಂತ ಚೇತನ ಜಯ ಸುವರ್ಣ.
ಜಯ ಸುವರ್ಣ ಅವರು ಮುಂಬಯಿ ತುಳು ಕನ್ನಡಿಗರ ಕಣ್ಮಣಿಯಾಗಿದ್ದವರು. ಬಿಲ್ಲವರ ಎಸೋಸಿಯೇಶನ್‌ನ ಅಧ್ಯಕ್ಷರಾಗಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾಗಿ ಅವರು ಅಸ್ತಿಭಾರ ಹಾಕಿದ ವಿವಿಧ ಯೋಜನೆಗಳು ಸಾಧಿಸಿದ ಸಾಧನೆಗಳು ಸಿದ್ಧಿ ಪ್ರಸಿದ್ಧಿಗಳು ಅನನ್ಯವಾದವು. ಸಾಕ್ಷೀಪ್ರಜ್ಞೆಯಿಂದ, ದೂರದೃಷ್ಟಿಯಿಂದ ಸಮುದಾಯದ ಏಳಿಗೆಗೆ ಅವರು ಆಹರ್ನಿಶಿ ದುಡಿದವರು. ಬಿಲ್ಲವರ ಎಸೋಸಿಯೇಶನ್‌ಗೆ ಭಾರತ್ ಬ್ಯಾಂಕಿಗೆ ಕಾಯಕಲ್ಪ ನೀಡಲು ಕ್ರಾಂತಿಕಾರಕವಾದ ಹೆಜ್ಜೆಗಳನ್ನು ಇಟ್ಟು ಯಶಸ್ಸು ಕಂಡ ಹಿರಿಮೆ ಸುವರ್ಣ ಅವರದು.
ಜಯ ಸುವರ್ಣ ಅವರು ಮುಟ್ಟಿದ್ದೆಲ್ಲ ಚಿನ್ನ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಸಮುದಾಯದ ಅಭಿವೃದ್ಧಿಯ ಹರಿಕಾರರೂ ಹೌದು. ಎಂಥದ್ದೇ ಪರಿಸ್ಥಿತಿಯಲ್ಲಿ ಧೈರ್ಯಗೆಡದಂತಹ ವ್ಯಕ್ತಿತ್ವ ಅವರದು. ಸಮಾಜದ ಎಲ್ಲ ವರ್ಗ, ಜಾತಿ, ಜನಾಂಗದವರನ್ನೂ ತಮ್ಮವರೆಂದೇ ಭಾವಿಸಿ ಅತ್ಯಂತ ಆತ್ಮೀಯವಾಗಿ ನೋಡಿಕೊಂಡ ಅವರು ಎಲ್ಲರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಿದ್ದರು. ವಯಸ್ಸಿನ ಅಂತರವಿರದೆ, ಎಲ್ಲರೊಂದಿಗೆ ಬೆರೆಯುತಿದ್ದ ಜಯಣ್ಣ ಕೇವಲ ವ್ಯಕ್ತಿಯಾಗಿರಲಿಲ್ಲ; ಮಹಾಶಕ್ತಿಯಾಗಿ ಮುಂಬಯಿಯಲ್ಲಿ ಕಂಗೊಳಿಸಿದವರು. ಕರ್ಮಭೂಮಿಯಾದ ಮುಂಬಯಿಯಲ್ಲಿ ಜಯ ಸುವರ್ಣ ಅವರ ಸಾಹಸ ಗಾಥೆಯನ್ನು ಅಗಣಿತ ಸಾಧನೆಗಳನ್ನು ಗಮನಿಸಿದ ಇಲ್ಲಿನ ಮಹಾನಗರ ಪಾಲಿಕೆ ಗೋರೆಗಾಂವ್ ಸ್ಟೇಷನ್ ಸಮೀಪದ ಮುಖ್ಯ ರಸ್ತೆಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಿರುವುದು ಸಾಮಾನ್ಯದ ಮಾತಲ್ಲ. ಜಯ ಸುವರ್ಣ ಅವರು ಇತಿಹಾಸ ನಿರ್ಮಾಪಕರು ಎಂಬುದು ಅಭಿಮಾನದ ಸಂಗತಿ.
ಜಯ ಸುವರ್ಣ ಅವರ ಸಮಗ್ರ ವ್ಯಕ್ತಿತ್ವದರ್ಶನ, ಅವರ ಬದುಕಿನ ಅನೇಕ ಬಣ್ಣಗಳನ್ನು, ವಿವಿಧ ಆಯಾಮಗಳನ್ನು ಅನಿತಾ ಅವರು ಈ ಕೃತಿಯಲ್ಲಿ ಸೊಗಸಾಗಿ ಅನಾವರಣಗೊಳಿಸಿದ್ದಾರೆ. ಜಯ ಸುವರ್ಣ ಅವರ ಜೀವನ ಯಾನ, ಅವರ ಯಶೋಗಾಥೆ, ಅವರು ಮುಂಬಯಿ ತುಳು ಕನ್ನಡಿಗರ ಅಭಿಮಾನದ ಮೂರ್ತಿಯಾಗಿ ರೂಪುಗೊಂಡ ಬಗೆಯನ್ನು ವಿಭಿನ್ನ ನೆಲೆಗಳಲ್ಲಿ ಸೊಗಸಾಗಿ ನಿರೂಪಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. ಜಯ ಸುವರ್ಣ ಅವರು ನಾಡಿನ ಜನತೆಗೆ ಮಾದರಿಯಾಗಿ, ಬೆಳಕಾಗಿ, ದಿಕ್ಕಾಗಿ, ಶಕ್ತಿಯಾಗಿ ಬಾಳಿ ಬದುಕಿದ ಜೀವಂತ ಕಥನವೂ ಇದಾಗಿದೆ. ಅನಿತಾ ತಾಕೊಡೆ ವಿರಚಿತ ‘ಸುವರ್ಣಯುಗ’ ಜಯ ಸುವರ್ಣ ಅವರನ್ನು ಕುರಿತ ಪೂರ್ಣ ಪ್ರಮಾಣದ ಕೃತಿ. ಜಯ ಸುವರ್ಣ ಅವರ ಬದುಕು ಸಾಧನೆಗಳ ಬಗೆಗೆ ಹೊಸ ಬೆಳಕು ಬೀರುವ ಕೃತಿ ಇದಾಗಿದೆ.
ಸುವರ್ಣ ಅವರು ಉತ್ಕಟ ಕನ್ನಡಾಭಿಮಾನಿ. ಅವರು ಮುಂಬಯಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಂದೆ ಬಂದವರು. ಯಕ್ಷಗಾನ ಕಲೆಯ ಬಗೆಗೆ ಅವರಿಗೆ ವಿಶೇಷವಾದ ಆಸಕ್ತಿ. ಆ ಕಲೆಯನ್ನು ಪ್ರೋತ್ಸಾಹಿಸಲು ಅವರು ಪ್ರಶಸ್ತಿಯೊಂದನ್ನು ಸ್ಥಾಪಿಸಿ, ಇತರರಿಗೆ ಮಾದರಿಯಾದವರು. ಸುವರ್ಣ ಅವರ ಸಾರ್ವಜನಿಕ ಜೀವನ ಅನುಕರಣೀಯವಾದುದು. ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮ ಒಂದರಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿ, ಸಣ್ಣ ಪ್ರಾಯದಲ್ಲೇ ಹೊರನಾಡಾದ ಮುಂಬಯಿಗೆ ಬಂದು, ಬದುಕು ಕಟ್ಟಿಕೊಂಡು ಮಹತ್ಸಾಧನೆಗೈದ ಪರಿ ಇಲ್ಲಿ ಆಪ್ತ ನೆಲೆಯಲ್ಲಿ ದಾಖಲಾಗಿದೆ. ಮುಂಬಯಿಗೆ ವಲಸೆ ಬಂದು ಈ ಮಹಾನಗರದ ಬೆಳವಣಿಗೆಗೆ ಮಹತ್ವದ ಯೋಗದಾನ ನೀಡಿದ ಕರ್ನಾಟಕದ ಮೂಲದ ಅದೆಷ್ಟೋ ಸಾಧಕರ ಸಾಧನೆ ಸರಿಯಾಗಿ ದಾಖಲಾಗಿಲ್ಲ. ಈ ಕೊರತೆಯನ್ನು ನೀಗಿಸುವ ದೃಷ್ಟಿಯಿಂದಲೂ ಪ್ರಸ್ತುತ ಕೃತಿ ನಮಗೆ ಮುಖ್ಯವಾಗುತ್ತದೆ. ಜಯ ಸುವರ್ಣ ಅವರು ಅಸೀಮ ಸಾಹಸಿ. ಅವರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ರಾಷ್ಟ್ರಮಟ್ಟದಲ್ಲಿ ನಾಯಕತ್ವಕ್ಕೇರಿದ ಹಾಗೆಯೇ ವಿಶಿಷ್ಟವಾದ ರೀತಿಯಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಿದ ಬಗೆಯನ್ನು ಅನಿತಾ ಪಿ. ತಾಕೊಡೆ ಅವರು ಈ ಕೃತಿಯಲ್ಲಿ ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದಾರೆ. ಜಯ ಸುವರ್ಣ ಅವರ ಯಶೋಗಾಥೆಯನ್ನು ಆಕರ್ಷಕವಾಗಿ ಅನಾವರಣಗೊಳಿಸಿದ ಅನಿತಾ ಪಿ. ತಾಕೊಡೆಯವರಿಗೆ ಹಾರ್ದಿಕ ಅಭಿನಂದನೆಗಳು.
ಸುವರ್ಣಯುಗ (ಜಯ ಸುವರ್ಣ ಅವರ ಜೀವನ ಕಥನ) ಲೇಖಕರು : ಅನಿತಾ ಪಿ.ತಾಕೊಡೆ
ಪ್ರಕಾಶಕರು : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ (2023) ಪುಟ 298, ಬೆಲೆ ರೂ.375/-
– ಡಾ. ಜಿ.ಎನ್.ಉಪಾಧ್ಯ, ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
1 Comment
Excellent recording of facts of a visionary leader Jaya Suvarnaji..BY Anita Poojary, Taccode.