ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸುವ ಜಯ ಸಿ. ಸುವರ್ಣ ಸಂಸ್ಮರಣೆ, ಸಮಾರಂಭವು ಕಲೀನಾ ಕ್ಯಾಂಪಸ್‌ನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ದಿನಾಂಕ 30-09-2023 ರಂದು ಮಧ್ಯಾಹ್ನ 02.30ಕ್ಕೆ ನಡೆಯಲಿದೆ.
ಅಂದು ಅನಿತಾ ಪಿ.ತಾಕೊಡೆಯವರು ಜಯ ಸಿ.ಸುವರ್ಣರ ಜೀವನ ಸಾಧನೆಯ ಕುರಿತು ರಚಿಸಿದ ‘ಸುವರ್ಣಯುಗ’ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದರಾದ ಗೋಪಾಲ ಸಿ.ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾದ ಮಧು ಬಂಗಾರಪ್ಪನವರು ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಕೃತಿಯನ್ನು ಪರಿಚಯಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ವಿಶ್ವನಾಥ ಕಾರ್ನಾಡ್, ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ದ ಅಧ್ಯಕ್ಷರಾದ ಡಾ.ತುಕಾರಾಂ ಪೂಜಾರಿ, ‘ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ ಮುಂಬಯಿ’ ಇದರ ಆಡಳಿತ ನಿರ್ದೇಶಕರಾದ ರವಿ ಎಸ್. ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ‘ಜಾಗತಿಕ ಬಂಟರ ಸಂಘಗಳ ಒಕ್ಕೂಟ’ದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ, ‘ಜಯ ಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ’ಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ‘ವಿಶ್ವದೇವಾಡಿಗ ಮಹಾಮಂಡಲ’ದ ಅಧ್ಯಕ್ಷರಾದ ಧರ್ಮಪಾಲ ಯು.ದೇವಾಡಿಗ, ‘ರಾಷ್ಟ್ರೀಯ ಬಿಲ್ಲವ ಮಹಾಮಂಡಲ’ದ ಅಧ್ಯಕ್ಷರಾದ ಡಾ.ರಾಜಶೇಖರ ಕೋಟ್ಯಾನ್ ಇವರು ಭಾಗವಹಿಸಲಿದ್ದಾರೆ. ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್’ನ ನಿರ್ದೇಶಕರಾದ ಸೂರ್ಯಕಾಂತ್ ಜಯ ಸುವರ್ಣ ಹಾಗೂ ಭಾಸ್ಕರ್ ಸಾಲಿಯನ್ ಇವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಂಘಟಕರು, ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರೂ ಆಗಿರುವ ದಿವಾಕರ ಶೆಟ್ಟಿ ಇಂದ್ರಾಳಿ ಮತ್ತು ಹೆಸರಾಂತ ನಿರೂಪಕರು, ಸಾಹಿತಿ ಹಾಗೂ ಕಲಾವಿದರೂ ಆಗಿರುವ ಅಶೋಕ ಪಕ್ಕಳ ಇವರನ್ನು ಗೌರವಿಸಲಾಗುವುದು. ಹಾಗೂ ಜಯಲೀಲಾ ಟ್ರಸ್ಟ್ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲಾಗುವುದು.
ಅನಿತಾ ಪಿ. ತಾಕೊಡೆ:
ಇವರು ಕವಿ, ಕಥೆಗಾರ್ತಿ, ಲೇಖಕಿ ಅಂಕಣಗಾರ್ತಿಯಾಗಿ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕೆ.ಎಸ್.ಒ.ಯು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅನಿತಾ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿಯನ್ನು ಚೊಚ್ಚಲ ಎಂ.ಬಿ.ಕುಕ್ಯಾನ್ ಬಂಗಾರದ ಪದಕ ಹಾಗೂ ಮೊದಲ ರ‍್ಯಾಂಕ್‌ನೊಂದಿಗೆ ಗಳಿಸಿಕೊಂಡರು. ಇದೀಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ.ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ‘ಮುಂಬಯಿ ಬಿಲ್ಲವರು ಸಾಂಸ್ಕೃತಿಕ ಅಧ್ಯಯನ’ ಈ ವಿಷಯದ ಕುರಿತು ಪಿಎಚ್.ಡಿ. ಅಧ್ಯಯನದಲ್ಲಿ ನಿರತರಾಗಿದ್ದಾರೆ. ಇವರ ಒಟ್ಟು ಏಳು ಕೃತಿಗಳು ಬೆಳಕು ಕಂಡಿವೆ. ಇವರ ಕತೆ ಕವಿತೆಗಳಿಗೆ ಲಭಿಸಿದ ಹಲವಾರು ಬಹುಮಾನ ಪುರಸ್ಕಾರಗಳು ಇವರ ಸಾಹಿತ್ಯ ಶಕ್ತಿಗೆ ಸಾಕ್ಷಿಯಾಗಿವೆ.