“ವಿ.ಸೀ. ವೃಷಭೇಂದ್ರ ಸ್ವಾಮಿ ಮುಂತಾಗಿ ಕನ್ನಡದ ಅನೇಕ ಪ್ರಥಮ ವಂದಿತರ ಒಡನಾಟವಿದ್ದು, ದುರ್ಗಾ ಹೈಸ್ಕೂಲು ಅಡೂರು ಮುಳ್ಳೇರಿಯ ದೇಲಂಪಾಡಿ ಬೆಳ್ಳೂರುಗಳಲ್ಲಿ ಮುಖ್ಯೋಪಾಧ್ಯಾಯರಾಗಿದ್ದು ಒಂದುವರೆ ವರ್ಷ ಎ.ಇ.ಓ. ಹುದ್ದೆಯನ್ನು ನಿರ್ವಹಿಸಿದವರು. ಹಳೆ ಕಡತಗಳಿಗೆ ಉತ್ತರ ಕೊಟ್ಟು ಶಾಲಾ ಕಾಂಪೌಂಡ್ ಸರಿಪಡಿಸಿ, ಕಸಕಡ್ಡಿ ಎತ್ತಲಿಕ್ಕೆ ಶ್ರಮದಾನ ಆಯೋಜಿಸಿ ಶಿಕ್ಷಕ ರಕ್ಷಕ ಸಂಘಗಳನ್ನು ಜನಪ್ರಿಯಗೊಳಿಸಿ, ಶಾಲೆಗಳಲ್ಲಿ ನಿಂತೇ ಹೋದಂತಿದ್ದ ವಾರ್ಷಿಕೋತ್ಸವಗಳಿಗೆ ಚಾಲನೆ ಕೊಡಿಸಿದವರು. ಯಕ್ಷಗಾನಾಸಕ್ತಿ ಬಹಳ ಇದ್ದು ತಾಳಮದ್ದಳೆಗಳಿಗೆ ಹಾಜರಾಗುತ್ತಿದ್ದರು. ಪೆರ್ಲ ಕೃಷ್ಣ ಭಟ್ಟ, ಶೇಣಿ ಗೋಪಾಲಕೃಷ್ಣ ಭಟ್ಟ ಮುಂತಾದವರಿಗೆ ಮಾರು ಹೋದವರು. ನಿವೃತ್ತನಾದ ಮೇಲೆ ನಾಲ್ಕನೇ ಬಾರಿಗೆ ಕ.ಸಾ.ಪ. ಕೃಳ ಘಟಕದ ಅಧ್ಯಕ್ಷರಾಗಿ ಒಂಬತ್ತು ಬಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ಹೆಗಲು ಕೊಟ್ಟವರು. ‘ಯಕ್ಷಗಾನದ ಶಕ ಪುರುಷ ಶೇಣಿ’ ಎಂಬ ಅವರೇ ಬರೆದ ಕೃತಿ ಪ್ರಕಟ ಆಗಲಿದೆ. ಎರಡು ಮೂರು ಕವನ ಸಂಕಲನಗಳನ್ನೂ ಕೊಟ್ಟ ಈ ಸಾಹಿತ್ಯ ಪ್ರಿಯ, ತನ್ನ ಮಕ್ಕಳನ್ನು ಓದಿಸಿ ಉತ್ತಮ ಸ್ಥಿತಿಗೆ ತಂದು ಉದ್ಯೋಗಕ್ಕೆ ಹಚ್ಚಿದ್ದಾರೆ. ಎಸ್.ವಿ. ಎಂದಿಗೂ ಎಲ್ಲ ಕನ್ನಡ ಸಂಸ್ಕೃತಿ ಪ್ರಿಯರಿಗೂ ಆದರ್ಶ” ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಸಂಸ್ಮರಣಾ ಮಾತುಗಳ ಮೂಲಕ ಹೇಳಿದರು.
ಕೇರಳಾದ್ಯಂತ ಜಿಲ್ಲಾಧಿಕಾರಿಯಾಗಿ, ಕ್ಯಾಬಿನೆಟ್ ಕಾರ್ಯದರ್ಶಿ ಮುಂತಾಗಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಎಡನೀರು ಗೋಪಾಲಕೃಷ್ಣ ಭಟ್ ಅವರು ಮಾತನಾಡುತ್ತ, “ಮಾನವನಿಗೆ ಕರ್ಮ ಕರ್ತವ್ಯ. ಎಸ್.ವಿ.ಗೆ ಪ್ರಿಯವಾದದ್ದು ಕರ್ಮಯೋಗ. ಅದರಲ್ಲೂ ನಿಷ್ಕಾಮ ಕರ್ಮಯೋಗ. ವಿವೇಕವೆನ್ನುವುದು ವಿದ್ಯಾಭ್ಯಾಸಕ್ಕಿಂತ ಒಂದು ಹೆಜ್ಜೆ ಮೇಲೆ ಬೇಕೆಂಬ ನೀತಿ ಅವರದ್ದು. ಶಿಕ್ಷಣದ ಮೂಲಕ ಟೊಮೆಟೊ ಒಂದು ತರಕಾರಿ ಆಗಿದ್ದರೂ ಅದನ್ನು ಹಣ್ಣೆಂದು ಗುರುತಿಸುವುದು ಸಾಮಾನ್ಯ ರೀತಿ. ಕಲಿಕೆ ಹೀಗೆ ಹೊರಗಿನಿಂದ ವಿಷಯಗಳನ್ನು ಗ್ರಹಿಸುತ್ತದೆ. ಅದು ಸಾಲದು. ಒಮ್ಮೆ ಲೈಬ್ರೆರಿಗೆ ಬೆಂಕಿ ಬಿದ್ದಾಗ ಏನನ್ನು ಉಳಿಸುತ್ತೀರಿ ಎಂಬ ಪ್ರಶ್ನೆಗೆ ಹಲವರು ಒಂದೊಂದು ಪುಸ್ತಕದ ಹೆಸರು ಹೇಳಿದರೆ ಕುಞ್ಞಿರಾಮ ಎಂಬಾತ ಹೇಳಿದ್ದು ಹೀಗೆ: ಬಾಗಿಲ ಹತ್ತಿರ ಕೈಹಾಕಿದರೆ ಏನು ಸಿಗುವುದೊ ಅದನ್ನು ಎತ್ತಿ ತರುತ್ತೇನೆ ಎಂದು. ಇದು ವಿದ್ಯಾಭ್ಯಾಸದ ಹೊರತಾಗಿ ಬೇಕಾದ ವಿವೇಕ ಅಥವಾ ಪ್ರಸಂಗಾವಧಾನತೆ” ಎಂದರು.
ಕನ್ನಡ ಅಧ್ಯಾಪಕರ ಸಂಘದ ಪರವಾಗಿ ಶ್ರೀಶ ಪಂಜಿತ್ತಡ್ಕ, ತಾನು ಬದಿಯಡ್ಕದಲ್ಲಿ ಗುಮಾಸ್ತನಾಗಿದ್ದಾಗ ಹೆಚ್ಚು ಪರಿಚಯವಾಗಿ ಬೀರಂತಬೈಲು ಅಧ್ಯಾಪಕ ಭವನ ನಿರ್ಮಾಣದಲ್ಲಿ ಮುಖ್ಯಪಾತ್ರ ವಹಿಸಿದ ಎಸ್.ವಿ. ಅವರ “ಆಳಾಗಬಲ್ಲ” ನಡೆಯನ್ನು ಸ್ಮರಿಸಿದರೆ, ನೀರ್ಚಾಲು ವಿದ್ಯಾ ಸಂಸ್ಥೆಯ ಸಂಸ್ಥಾಪಕ ಜಯ ದೇವ ಖಂಡಿಗೆ ಉದ್ಯೋಗದಿಂದ ನಿವೃತ್ತನಾದ ಮೇಲೂ ಹೆಚ್ಚು ಆಸಕ್ತಿಯಿಂದ ಕನ್ನಡ ಸೇವೆ ಮಾಡಿದ ಎಸ್.ವಿ. ಅವರ ಕಾರ್ಯ ವೈಖರಿಯನ್ನು ಸ್ಮರಿಸಿಕೊಂಡರು.
ಶಿವಕುಮಾರ್ ಅವರು ತನ್ನ ಬಂಧುವಿನ ನಿಷ್ಕಲ್ಮಶ ಮನಸ್ಸು, ಇನ್ನೊಬ್ಬರ ಒಳ್ಳೆಯದನ್ನು ಮಾತ್ರ ಸ್ವೀಕರಿಸುವ, ನೆನಪಿಡುವ ಆ ಮೂಲಕ ವಿದ್ವಾಂಸರನ್ನೂ ಕಲಾವಿದರನ್ನೂ ಗೌರವಿಸುತ್ತ ಬಂದ ರೀತಿಯನ್ನು ನೆನಪಿಸಿದರೆ, ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಇವರು ಸಂಕೋಚ ಇಲ್ಲದೆ ಖಡಕ್ ಮಾತಾಡುತ್ತಿದ್ದ ಎಸ್.ವಿ. ಕುಂಬ್ಳೆಯವರು ಉಪಜಿಲ್ಲೆಯ ಎಲ್ಲ ಶಾಲೆಗಳ ಭೇಟಿಮಾಡಿದ ವಿಚಾರವನ್ನೂ, ಅನ್ಯೋನ್ಯ ಸಹೋದರ ಪ್ರೀತಿಯಿಂದ ನಡಕೊಂಡ ರೀತಿಯನ್ನೂ, ವಯನಾಡಲ್ಲಿ ಸಾಹಿತ್ಯ ಸಮ್ಮೇಳನ ಸಸೂತ್ರವಾಗಿ ಸಂಘಟಿಸಿ ಯಶಸ್ಸವಿಗೊಳಿಸಿದ್ದನ್ನೂ ನೆನಪಿಸಿಕೊಂಡರು.
ಮುರಳೀಧರ ಬಳ್ಳಕ್ಕುರಾಯರು ಭಟ್ ಅವರೊಂದಿಗಿನ ಮರೆಯಲಾಗದ ಒಡನಾಟವನ್ನು ಸ್ಮರಿಸಿ, ಮಗುವಿನ ಮನಸ್ಸು. ಹೋರಾಟ ಗುಣಗಳನ್ನು ಸ್ವೀಕರಿಸುವ ಮನಸ್ಸನ್ನು ಉಲ್ಲೇಖಿಸಿ, ಅವರ ದುಡಿಮೆ ಸಾರ್ಥಕ, ಅನುಸರಣೀಯ ಎಂದರು. ಕುಳಮರ್ವ ವಿ.ಬಿ. ನಿವೃತ್ತಿ ಹೊಂದಿದ ಮೇಲೂ ಅವರು ನಡೆಸಿದ ಸಾಹಿತ್ಯ ಸೇವೆಗಳ ಮಾಹಿತಿ ನೀಡಿ, ಕವನ ಸಂಕಲನಗಳನ್ನು ಪ್ರಕಟಿಸಿದ್ದರ ಬಗ್ಗೆ ವಿವರ ಕೊಟ್ಟರು. ಕೇವಲ ಮೂರು ವರ್ಷಗಳಿಂದ ಪರಿಚಯವಿದ್ದು ಬಹಳಷ್ಟು ಪರಿಣಾಮ ಬೀರಿದ ಎಸ್.ವಿ. ಬಗ್ಗೆ ಮಾತನಾಡಿದವರು ಡಾ. ಪ್ರಮೀಳಾ ಮಾಧವ್ ರಾವ್, ಹವ್ಯಕ ಸಮಾಜವನ್ನು ರೂಪಿಸುವಲ್ಲಿ ಪ್ರೇರಕ ಶಕ್ತಿಯಾದರೆಂದು ಜಯ ನಾರಾಯಣ ತಾಯನ್ನೂರು ತಮ್ಮ ತಮ್ಮ ಅನುಭವಗಳನ್ನು ಹೇಳಿಕೊಂಡಾಗ ರಾಧಾಕೃಷ್ಣ ಕೆ ಉಳಿಯತ್ತಡ್ಕ ತನ್ನ ಮಕ್ಕಳನ್ನು ಕನ್ನಡ ಮಾಧ್ಮಮದಲ್ಲೆ ಓದಿಸಿದವರು. ಪರ ಊರಿಂದ ಬಂದವರಾದರೂ ನಿವೃತ್ತಿಯ ನಂತರವೂ ಇಲ್ಲೇ ದುಡಿಯುತ್ತ ನಿಂತವರು. ನಾನು ಸ್ಪರ್ಧಿಸಿದ್ದರಿಂದ ಅವರನ್ನು ಹೆಚ್ಚು ತಿಳಿಯಲು ಸಾಧ್ಯವಾಯಿತು ಎಂದರೆ ಕಮಲಾಕ್ಷ ಮತ್ತಿತರರೂ ದನಿಗೂಡಿಸಿದರು.
ಅನಿರೀಕ್ಷಿತವಾಗಿ ಕಳೆದ ವರ್ಷ ಉಸ್ತುವಾರಿಯಾಗಿ ಎಲ್ಲರಿಗಿಂತ ಎಲ್ಲದರಲ್ಲಿ ಕಿರಿಯನಾಗಿ ಅಧ್ಯಕ್ಷಪದವನ್ನು ನಿಭಾಯಿಸಿದ ತಾನು ಇದೀಗ ಅವರ ಮೇಲಿನ ಅಭಿಮಾನವುಳ್ಳ ಇಷ್ಟೆಲ್ಲ ಮಂದಿಯನ್ನು ಭೇಟಿಯಾದ ಸಂತೃಪ್ತಿಯನ್ನು ಹಂಚಿಕೊಳ್ಳುತ್ತ, “ಕನ್ನಡದ ತೇರನ್ನು ಎಲ್ಲರ ಸಹಕಾರದಿಂದ ಎಳೆದ ಎಸ್.ವಿ. ಸಮಯಪಾಲನೆಯಲ್ಲಿ ಹಿಂದೆ ಬೀಳದ ನಿರ್ವಾಹಕ. ಮಾತು ಮೃದು, ಇಲ್ಲಿನ ಕನ್ನಡಿಗರ ವಲಸೆಯ ರೀತಿ ಕಂಡು ಗಾಬರಿಗೊಂಡವರು. ಅವರಲ್ಲಿ ನೆಗೆಟಿವ್ ಧೋರಣೆಯೇ ಇರಲಿಲ್ಲ. ಅವರಿಂದ ಸ್ಫೂರ್ತಿ ಪಡೆದೇ ನಮ್ಮ ಹೊಸತಂಡ ಕಾರ್ಯಕ್ರಮಗಳನ್ನು ನಡೆಸುತ್ತಿದೆ. 8 ಮಂದಿ ಹಿರಿಯರ ಮನೆಗೆ ಹೋಗಿ ಗೌರವಿಸಿದ್ದೇವೆ.
ಮೇಲು ಬಾಡಿಗೆಗೆ ಕೊಡುತ್ತ ಬಂದ ಬ್ಯಾಂಕು ರಸ್ತೆಯ ಕಛೇರಿಯನ್ನು ಖಾಲಿ ಮಾಡುವ ಅಗತ್ಯ ಬಂದಿದೆ. ಅದನ್ನು ಮಾಡಿದ್ದೇವೆ. ಅಲ್ಲಿನ ಪರಿಷತ್ತಿನ ಸೊತ್ತುಗಳನ್ನು ಒಂದೆಡೆ ಭದ್ರವಾಗಿಟ್ಟಿದ್ದೇವೆ. ಇನ್ನು ನೀರ್ಚಾಲಿನಂತಹ ಕೇಂದ್ರದಲ್ಲಿ ಯಾರದಾದರು ಸ್ಥಳ ದಾನ, ಸಹಕಾರ ಮತ್ತು ಮಾರ್ಗದರ್ಶನ ಸಿಕ್ಕಿದರೆ ಕಛೇರಿ ಕಟ್ಟಡ ಆಗಬೇಕು. ಕೇಂದ್ರದಿಂದ ಕಾರ್ಯಕ್ರಮ ಮಾಡಿರೆಂದು ಆಗಾಗ ಆದೇಶ ಬರುತ್ತದೆ. ನಿರ್ವಹಿಸುತ್ತಿದ್ದೇವೆ ಕೂಡ. ಅನುದಾನಗಳು ಬಂದಾವೆಂದು ನಿರೀಕ್ಷಿಸಬೇಕು” ಎಂದಿತ್ಯಾದಿ ಸಂಗತಿಗಳನ್ನು ಡಾ. ಜಯಪ್ರಕಾಶ ನಾರಾಯಣ ಮುಂದಿಟ್ಟರು.
ಸಂಘಟನೆಯ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳರಿಂದ ಸ್ವಾಗತ, ಪ್ರದೀಪ್ ಬೇಳರಿಂದ ಧನ್ಯವಾದ, ಅಧ್ಯಾಪಕ ಸಂಘಟನೆಯ ಕಾರ್ಯದರ್ಶಿ ವಾಣಿ ಪಿ.ಎಸ್. ಇವರಿಂದ ಸೂಕ್ತ ನಿರ್ವಹಣೆ ಕಾರ್ಯಕ್ರಮ ಸಸೂತ್ರವಾಗಿ ನೀರ್ಚಾಲು ಮಹಾಜನ ಹಿರಿಯ ಪ್ರೌಢಶಾಲೆಯಲ್ಲಿ ದಿನಾಂಕ 10 ಸೆಪ್ಟೆಂಬರ್ 2024ರಂದು ನಡೆಯಿತು.
ಪಿ.ಎನ್. ಮೂಡಿತ್ತಾಯ