ಬೆಂಗಳೂರು : ಸ್ವಾಭಿಮಾನಿ ಕರ್ನಾಟಕ ವೇದಿಕೆ (ರಿ.) ಬೆಂಗಳೂರು ಕೊಡಮಾಡುವ 2023ನೇ ಸಾಲಿನ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ನಾಡಿನ ಆರು ಖ್ಯಾತ ಬರಹಗಾರರ ಪುಸ್ತಕಗಳು ಆಯ್ಕೆಯಾಗಿವೆ.
ಕನ್ನಡ ಸಾಹಿತ್ಯ ಹಾಗೂ ಚಳುವಳಿಯಲ್ಲಿ ಕ್ರಿಯಾಶೀಲವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ 2023ರ ಸಾಲಿನ ಕೃತಿಗಳಲ್ಲಿ ಐದು ವಿವಿಧ ವಿಭಾಗದ ಕೃತಿಗಳನ್ನು ಆಯ್ಕೆ ಮಾಡಿದ್ದು, ಕಥೆ, ಅನುವಾದ, ಕವನ, ಪ್ರವಾಸ, ಲೇಖನ ಹಾಗೂ ವ್ಯಕ್ತಿ ಚಿತ್ರಣದ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಲಬುರಗಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎಚ್. ಟಿ. ಪೋತೆ ಇವರ ಪ್ರವಾಸ ಕಥನ ‘ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ’, ಎಚ್. ಎಸ್. ಎಂ. ಪ್ರಕಾಶ ಇವರ ಅನುವಾದ ಕೃತಿ ‘ನಮ್ಮಂಥ ಬಲ್ಲಿದರು’, ಫಾತಿಮಾ ರಲಿಯಾ ಇವರ ಕಥಾ ಸಂಕಲನ ‘ಒಡೆಯಲಾರದ ಒಡಪು’, ಸಂತೋಷ ನಾಯಿಕ ಇವರ ಕವಿತೆಗಳ ಕೃತಿ ‘ಹೊಸ ವಿಳಾಸದ ಹೆಜ್ಜೆಗಳು’, ಇಂದಿರಾ ಕೃಷ್ಣಪ್ಪ ಇವರ ವ್ಯಕ್ತಿ ಚಿತ್ರಣ ‘ಸಾವಿತ್ರಿಬಾ ಪುಲೆ’, ಡಾ. ಎಂ. ಎಸ್. ಮಣಿ ಇವರ ‘ಗವಿಮಾರ್ಗ’ ಲೇಖನ ಸಂಕಲನಗಳನ್ನೊಳಗೊಂಡ ಪುಸ್ತಕಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಪ್ರಶಸ್ತಿಯು ತಲಾ ರೂಪಾಯಿ 5೦೦೦ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ದಿನಾಂಕ 31-05-2024ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಎಂದು ಅಧ್ಯಕ್ಷರಾದ ದ್ವಾರನಕುಂಟೆ ಪಾತಣ್ಣ ತಿಳಿಸಿದ್ದಾರೆ.