ಕಾಸರಗೋಡು: ಕಾಸರಗೋಡಿನ ಮುನ್ಸಿಪಲ್ ಕಾನ್ಫರೆನ್ಸ್ ಹಾಲ್ ನಲ್ಲಿ ಇಲ್ಲಿನ ಸಾಹಿತ್ಯಕ. ಸಾಂಸ್ಕೃತಿಕ ಸಂಘಟನೆಯಾದ ರಂಗ ಚಿನ್ನಾರಿಯ ನೇತೃತ್ವದ ಸ್ವರ ಚಿನ್ನಾರಿ ಸಂಗೀತ ಘಟಕದ ಉದ್ಘಾಟನೆ ದಿನಾಂಕ 09-09-2023ರ ಶನಿವಾರದಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಖ್ಯಾತ ಸುಗಮ ಸಂಗೀತ ಗಾಯಕರೂ ಆಗಿರುವ ವೈ.ಕೆ.ಮುದ್ದುಕೃಷ್ಣ “ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಅಸಂಖ್ಯಾತ ಕನ್ನಡ ಕವಿಗಳು, ಗಾಯಕರು, ಸಂಗೀತಗಾರರು ನೆಲೆಸಿದ್ದಾರೆ. ಅವರಲ್ಲಿರುವ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಬೇಕು. ಈ ನೆಲದ ಸ್ವರದ ನಾದ ಮಾಧುರ್ಯದ ಪ್ರತೀಕವಾಗಿರುವ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ವೇದಿಕೆಯನ್ನು ಮುಂದೆ ರಾಜ್ಯದ ರಾಜಧಾನಿಯಲ್ಲೂ ಕಲ್ಪಿಸಿಕೊಡಲಾಗುವುದು” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರರಾಷ್ಟ್ರೀಯ ಮಿಮಿಕ್ರಿ ಕಲಾವಿದ, ಚಲನಚಿತ್ರನಟರೂ ಆದ ಮಿಮಿಕ್ರಿ ದಯಾನಂದ್ ಅವರು ಸುಗಮ ಸಂಗೀತದ ತಮ್ಮ ನಂಟನ್ನು ನೆನಪಿಸಿಕೊಂಡರು. “ಕನ್ನಡದ ಸಂಗೀತವನ್ನು ಕಾಸರಗೋಡಿನಲ್ಲಿ ಉಳಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ರಂಗ ಚಿನ್ನಾರಿ, ನಾರಿ ಚಿನ್ನಾರಿ ಘಟಕಗಳ ಹಾಗೆಯೇ ಸ್ವರ ಚಿನ್ನಾರಿಯೂ ಪ್ರಸಿದ್ಧಿಯನ್ನು ಪಡೆಯಲಿ” ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳದಲ್ಲಿ ಗಡಿನಾಡ ಕನ್ನಡ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್.ವಿ.ಭಟ್, ಖ್ಯಾತ ಧಾರ್ಮಿಕ ಮುಂದಾಳು, ನೇತ್ರ ತಜ್ಞ ಡಾ.ಶ್ರೀ ಅನಂತ ಕಾಮತ್ ಅವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ, ಕವಿ, ನಾಟಕಕಾರರಾದ ಡಾ.ನಾ.ದಾಮೋದರ ಶೆಟ್ಟಿ ಅವರು “ಕಾಸರಗೋಡಿನ ಕನ್ನಡ ಮಣ್ಣಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಸಾಹಿತ್ಯಕ ಸಾಂಸ್ಕೃತಿಕ ಸಂಸ್ಥೆಯಾದ ರಂಗ ಚಿನ್ನಾರಿ, ನಾರಿ ಚಿನ್ನಾರಿ,ಸ್ವರ ಚಿನ್ನಾರಿಯಂತಹ ಸಂಘಟನೆಗಳು ಇರುವವರೆಗೆ ಕನ್ನಡ ಸಂಘಟನೆಗಳು ಜೀವಂತವಾಗಿರುತ್ತವೆ.” ಎಂದರಲ್ಲದೆ ಇದರ ರೂವಾರಿ ಕಾಸರಗೋಡು ಚಿನ್ನಾ ಅವರ ಸಂಘಟನಾ ಚಾತುರ್ಯವನ್ನು ಕೊಂಡಾಡಿದರು. ರಂಗ ಚಿನ್ನಾರಿ ನಿರ್ದೇಶಕರಾದ ಶ್ರೀ ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ, ಶ್ರೀ ಸತ್ಯನಾರಾಯಣ.ಕೆ. ಉಪಸ್ಥಿತರಿದ್ದರು.
ಶ್ರೀಮತಿ ಉಷಾ ರಾಮ್ ಅವರು ಪ್ರಾರ್ಥಿಸಿ, ಸ್ವರ ಚಿನ್ನಾರಿಯ ಗೌರವಾಧ್ಯಕ್ಷ ಮತ್ತು ಕವಿಗಳೂ ಆದ ಶ್ರೀಕೃಷ್ಣಯ್ಯ ಅನಂತಪುರ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಿಜ್ಞಾ ರಂಜಿತ್ ವಂದಿಸಿದರು. ಸರಕಾರಿ ಕಾಲೇಜಿನ ಪ್ರಾಧ್ಯಾಪಕಿಯರಾದ ಡಾ.ಲಕ್ಷ್ಮಿ ಹಾಗೂ ಡಾ.ಆಶಾಲತಾ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾಸರಗೋಡಿನ ಸಮಸ್ತ ಜನರ ಪರವಾಗಿ ಗಾಯಕ ವೈ.ಕೆ.ಮುದ್ದು ಕೃಷ್ಣ ಹಾಗೂ ಮಿಮಿಕ್ರಿ ದಯಾನಂದ್ ಅವರಿಗೆ ಮೈಸೂರು ಪೇಟ ಹಾಗೂ ಮುದ್ದುಕೃಷ್ಣನ ವಿಗ್ರಹವನ್ನು ನೀಡಿ ಸನ್ಮಾನಿಸಲಾಯಿತು. ಮಿಮಿಕ್ರಿ ಕಲಾವಿದ ದಯಾನಂದ್ ಅವರು ಕನ್ನಡ ಚಲನಚಿತ್ರ ಕಲಾವಿದರ ಧ್ವನಿಯ ಅನುಕರಣೆ ಮಾಡಿ ಜನರನ್ನು ರಂಜಿಸಿದರು.
ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು, ಕಯ್ಯಾರ ಕಿಞ್ಞಣ್ಣ ರೈ, ಮಂಜೇಶ್ವರ ಗೋವಿಂದ ಪೈ, ಕೆ.ವಿ.ತಿರುಮಲೇಶ್, ಪುಂಡೂರು ಪುಣಿಂಚಿತ್ತಾಯರು, ಬಿ.ಕೃಷ್ಣ ಪೈ, ಡಾ.ರಮಾನಂದ ಬನಾರಿ, ಡಾ.ನಾ.ದಾಮೋದರ ಶೆಟ್ಟಿ, ಶ್ರೀಕೃಷ್ಣಯ್ಯ ಅನಂತಪುರ, ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ, ಡಾ.ಯು.ಮಹೇಶ್ವರಿ, ಶ್ರೀಮತಿ ವಿಜಯಲಕ್ಷ್ಮಿ ಶ್ಯಾನುಭೋಗ್, ಸ್ನೇಹಲತಾ ದಿವಾಕರ್, ಅನ್ನಪೂರ್ಣ ಬೆಜಪ್ಪೆ, ಸರ್ವಮಂಗಳ ಜಯ್ ಪುಣಿಚಿತ್ತಾಯ ಮತ್ತು ಸೌಮ್ಯ ಪ್ರವೀಣ್ ರಚಿಸಿದ ಹಾಡುಗಳಿಗೆ ಹೊಸ ರಾಗ ಸಂಯೋಜಿಸಿ ಗಾಯಕ ಗಾಯಕಿಯರು ಹಾಡಿದರು.
ಗಾಯಕರಾದ ಶ್ರೀ ಕಿಶೋರ್ ಪೆರ್ಲ, ಶ್ರೀ ಗಣೇಶ ಪ್ರಸಾದ ನಾಯಕ್, ಶ್ರೀ ರತ್ನಾಕರ್ ಓಡಂಕಲ್ಲು, ಪ್ರತಿಜ್ಞಾ ರಂಜಿತ್, ಅಕ್ಷತಾ ಪ್ರಕಾಶ್, ಬಬಿತಾ ಆಚಾರ್ಯ ಹಾಡಿದರು. ಹಿಮ್ಮೇಳದಲ್ಲಿ ಶ್ರೀ ಪುರುಷೋತ್ತಮ ಕೊಪ್ಪಲ್, ಶ್ರೀ ಸತ್ಯನಾರಾಯಣ ಐಲ, ಶ್ರೀ ಗಿರೀಶ್ ಪೆರ್ಲ, ಶ್ರೀ ಪ್ರಭಾಕರ ಮಲ್ಲ, ಶರತ್ ಪೆರ್ಲ ಸಹಕರಿಸಿದರು.
ಕೊನೆಯಲ್ಲಿ ರಂಗ ಚಿನ್ನಾರಿ ನಿರ್ದೇಶಕ, ನಟ ಶ್ರೀ ಕಾಸರಗೋಡು ಚಿನ್ನಾ ಮಾತನಾಡಿ “ಸ್ವರ ಚಿನ್ನಾರಿ ತಂಡದ ‘ಈ ನೆಲ ಈ ಸ್ವರ’ ಕಾರ್ಯಕ್ರಮವು ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿ ಕಾರ್ಯಕ್ರಮ ನೀಡುವುದಲ್ಲದೆ ಗಡಿನಾಡಾದ ಕಾಸರಗೋಡಿನಿಂದ ಮತ್ತೊಂದು ಗಡಿ ಬೆಳಗಾವಿಗೆ ಸಂಗೀತದ ರಥಯಾತ್ರೆಯನ್ನು ಕೊಂಡೊಯ್ಯುವ ತನ್ನ ಕನಸನ್ನು ತಿಳಿಸಿದರು.”
1 Comment
Good keep it up