ಉಡುಪಿ : ಉಡುಪಿ – ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸಂಕೀರ್ತನಾ ಮಂದಿರದ 2ನೇ ವಾರ್ಷಿಕೋತ್ಸವವು ದಿನಾಂಕ 07 ಡಿಸೆಂಬರ್ 2025ರಂದು ಅಭಿರಾಮ ಭರತವಂಶಿ ಸುಜ್ಞಾನ ಮಂದಿರದಲ್ಲಿ ನಡೆಯಿತು. ಆ ಪ್ರಯುಕ್ತ ಸ್ವರ ಸಾಮ್ರಾಟ್ ವಿದ್ವಾನ್ ಅಭಿರಾಮ್ ಭರತವಂಶಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅಂತಾರಾಷ್ಟ್ರೀಯ ವೀಣಾವಾದಕ ಮೈಸೂರಿನ ವಿದ್ವಾನ್ ಆರ್.ಕೆ. ಪದ್ಮನಾಭರವರು “ಸಂಗೀತ ಕಲಿಯಲು ಅದೆಷ್ಟೋ ಮಕ್ಕಳು ನಮ್ಮಂಥಾ ಸಾವಿರಾರು ಗುರುಗಳ ಬಳಿಸಾರಿದರೂ ನಾದಸರಸ್ವತಿಯು ಕೇವಲ ಬೆರಳೆಣಿಕೆಯಷ್ಟೇ ಮಂದಿಗೆ ಒಲಿಯುತ್ತಾಳೆ. ಅಂಥಾ ಅಪರೂಪದ ಹುಡುಗರಲ್ಲಿ ನಮ್ಮ ಶಿಷ್ಯ ಅಭಿರಾಮನೊಬ್ಬನಾಗಿದ್ದ. ಮಹಾಮಾರಿ ಕೋವಿಡ್ ಬಡಿದು ಆ ಬಹುಮುಖ ಪ್ರತಿಭೆಯನ್ನು ಹಠಾತ್ತನೆ ಕಣ್ಮರೆ ಮಾಡಿ ನಾಲ್ಕು ವರ್ಷಗಳಾದರೂ ಇಂದಿಗೂ ಆ ನೋವು ಕಾಡಿದೆ” ಎಂದು ಮನದಾಳದ ಮಾತಿಗೆ ದನಿಯಾದರು.

ಸಮಾರಂಭದ ಉದ್ಘಾಟನೆ ಮಾಡಿದ ಉಡುಪಿಯ ಶ್ರೀಮನ್ಮಧ್ವ ಸಿದ್ದಾಂತ ಪ್ರಭೋದಿನಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ವೆಂಕಟರಾವ್ ಆಚಾರ್ಯರು, “ಯಾವುದೇ ಸಂಗೀತ ಕಲಿಯಲು ತೀವ್ರ ಆಸಕ್ತಿ ಅತ್ಯಗತ್ಯ. ಕಲಾರಹಿತ ಬದುಕೂ ಒಂದು ಬದುಕೇ” ಎಂದು ನೆರೆದ ನೂರಾರು ಮಕ್ಕಳಲ್ಲಿ ಹೊಸ ಸ್ಫೂರ್ತಿ ತುಂಬಿದರು. ಸಮಾರಂಭದ ಮುಖ್ಯ ಅತಿಥಿಯಾಗಿದ್ದ ‘ಸರಿಗಮ’ ಭಾರತಿಯ ನಿರ್ದೇಶಕಿ ವಿದುಷಿ ಉಮಾಶಂಕರಿ ಇವರು “ಅಭಿರಾಮ ಧಾಮದ ಹಲವು ಹತ್ತು ಲಲಿತಕಲೆಗಳ ತರಗತಿಗಳು ಉಚಿತವಾಗಿ ಲಭಿಸಿ ಉಡುಪಿಯ ಮಕ್ಕಳಿಗೆ ಸುಜ್ಞಾನದ ಸಿಹಿಯೂಟವನ್ನು ಉಣಬಡಿಸುತ್ತಿದೆ” ಎಂದು ಅವಲೋಕಿಸಿದರು.
ಉಡುಪಿ ರಥಬೀದಿಯ ಶ್ರೀಪಾದರಾಜರ ಮುಳಬಾಗಿಲು ಮಠದ ಪ್ರಪ್ರಥಮ ವ್ಯವಸ್ಥಾಪಕರಾದ ವಿ. ವಾಗೀಶ ಭಟ್ಟರ ವೇದೋದ್ಘೋಷ , ಮಂಗಳಾಚರಣ, ವಿಶೇಷ ಸಂದೇಶಗಳು ಉಲ್ಲೇಖಯೋಗ್ಯವಾದವು. ಮೊದಲಿಗೆ ಅಭಿರಾಮಧಾಮದ ಸಂಗೀತದ ಶಿಷ್ಯರಿಂದ ಹಲವಾರು ದಾಸರಪದಗಳ ಪ್ರಸ್ತುತಿ ನಡೆಯಿತು. ವೈಣಿಕಗುರುಗಳಿಗೆ ಸನ್ಮಾನದ ಬಳಿಕ ಅವರದ್ದೇ ವೀಣಾ ವಾದನ ಕಿಕ್ಕಿರಿದ ಅಭಿರಾಮ ಧಾಮದ ಕಲಾರಸಿಕರನ್ನು ಮಂತ್ರಮುಗ್ಧರನ್ನಾಗಿಸಿತು. ಪಕ್ಕವಾದ್ಯದಲ್ಲಿ ಮೃದಂಗ ವಿದ್ವಾನ್ ಸುನಾದ ಕೃಷ್ಣ ಹಾಗೂ ಘಟಂನಲ್ಲಿ ಮಂಗಳೂರು ಆಕಾಶವಾಣಿ ಕಲಾವಿದರಾಗಿ ನಿವೃತ್ತರಾದ ಘಟಂ ವಿದ್ವಾನ್ ತಿರುಚ್ಚಿ ಕೆ.ಆರ್. ಕುಮಾರ್ ಸೂಕ್ತ ಸಾಥ್ ಕೊಟ್ಟರು. ಕೊನೆಯಲ್ಲಿ ಅಭಿರಾಮಧಾಮದ ನೃತ್ಯದ ಶಿಷ್ಯರಿಂದ ಪ್ರಸ್ತುತಪಡಿಸಲಾದ ಕೆಲವಾರು ನೃತ್ಯಬಂಧಗಳು ನೂರಾರು ಪ್ರೇಕ್ಷಕರ ಮನಸೆಳೆದವು.

ಒಂದು ವರ್ಷಪೂರ್ತಿ ಸಂಗೀತ – ನೃತ್ಯದಲ್ಲಿ ಉತ್ತಮ ಕಲಿಕೆ ಪ್ರದರ್ಶಿಸಿದ ಶಿಷ್ಯಂದಿರಿಗೆ ಈ ಸಂಧರ್ಭದಲ್ಲಿ ಪಾರಿತೋಷಕಗಳನ್ನು ನೀಡಲಾಯಿತು. ಉತ್ತಮ ವರ್ತನೆ, ಉತ್ತಮ ಹಾಜರಾತಿಗೂ ಶಿಷ್ಯರಿಗೆ ಪಾರಿತೋಷಕಗಳನ್ನು ನೀಡಲಾಯಿತು. ಉಳಿದಂತೆ ವರ್ಷಪೂರ್ತಿ ಸಂಗೀತ – ನೃತ್ಯ – ಭಜನೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಶಿಷ್ಯರಿಗೂ ಯೋಗ್ಯತಾ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ದೂರದ ಹುಬ್ಬಳ್ಳಿಯ ವೇದಾಗಮ ಪಂಡಿತರಾದ ವಿ. ಕೊರಲಹಳ್ಳಿ ನರಸಿಂಹಾಚಾರ್ಯರು ನೆರೆದ ನೂರಾರು ವಿದ್ಯಾರ್ಥಿಗಳಿಗೆ ಹಿತೋಪದೇಶಗಳನ್ನು ನೀಡಿದರು. ಅಭಿರಾಮ ಪ್ರತಿಷ್ಟಾನದ ನಿರ್ದೇಶಕರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ಸ್ವಾಗತಿಸಿ, ಸಮಗ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ನಾಟ್ಯ ವಿದುಷಿ ಸುಷ್ಮಾ ಸುದರ್ಶನ ವಂದನಾರ್ಪಣೆ ಮಾಡಿದರು.
