ಮಂಗಳೂರು: ಮಂಗಳೂರಿನ ಸ್ವರಾಲಯ ಫೌಂಡೇಶನ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸ್ವರ ಸಂಕ್ರಾಂತಿ ಉತ್ಸವ- 2025’ ಸಂಗೀತ ಕಛೇರಿ ಕಾರ್ಯಕ್ರಮವು ದಿನಾಂಕ 14 ಜನವರಿ 2024 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ಕಲಾ ಶಾಲೆ ವಿದ್ಯಾರ್ಥಿಗಳಿಂದ ವಯಲಿನ್ ಪ್ರಸ್ತುತಿ ನಡೆಯಲಿದ್ದು, ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮೂವರು ಹಿರಿಯ ಕಲಾ ಸಾಧಕರಿಗೆ ‘ಸ್ವರ ಸಾಧನಾ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಕಲಾವಿದರಾದ ರಂಜನಿ – ಗಾಯತ್ರಿ ಇವರಿಂದ ವಿಶಿಷ್ಟ ಪರಿಕಲ್ಪನೆಯ ‘ರಸ ಬೈ ರಾಗ’ ಸಂಗೀತ ಕಚೇರಿ ನಡೆಯಲಿದ್ದು ಇವರಿಗೆ ವಯಲಿನ್‌ನಲ್ಲಿ ವಿದ್ವಾನ್ ವಿಠಲ್ ರಂಗಲ್, ಮೃದಂಗದಲ್ಲಿ ವಿದ್ವಾನ್ ಸಾಯಿ ಗಿರಿಧರ್, ಘಟಂನಲ್ಲಿ ವಿದ್ವಾನ್ ಎಸ್. ಕೃಷ್ಣ ಸಹಕರಿಸಲಿದ್ದಾರೆ.
ರಂಜನಿ ಮತ್ತು ಗಾಯತ್ರಿ ಕರ್ನಾಟಿಕ್ ಸಂಗೀತ ಪ್ರಕಾರದಲ್ಲಿ ಉನ್ನತ ಸಾಧನೆ ಮಾಡಿರುವ ಕಲಾವಿದರಾಗಿದ್ದು, ‘ರಸ ಬೈ ರಾಗ’ ಪರಿಕಲ್ಪನೆಯಲ್ಲಿ ದೇಶ ವಿದೇಶದಲ್ಲಿ ಪ್ರವಾಸ ಮಾಡಿ ಸಂಗೀತ ಪ್ರಸ್ತುತಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಂಗಳೂರಿನ ಸಂಗೀತ ಪ್ರೇಮಿಗಳಿಗೆ ಈ ಪರಿಕಲ್ಪನೆಯ ಸಂಗೀತ ಕಚೇರಿಯನ್ನು ಆಸ್ವಾದಿಸುವ ಅವಕಾಶವನ್ನು ಮಂಗಳೂರಿನ ‘ಸ್ವರಾಲಯ ಸಾಧನಾ ಫೌಂಡೇಷನ್’ ಕಲ್ಪಿಸಿದೆ. ಸಂಗೀತ ಪ್ರೇಮಿಗಳು ಪ್ರವೇಶ ಪತ್ರದ ಮೂಲಕ ಉಚಿತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಪ್ರವೇಶ ಪತ್ರವನ್ನು ಪತ್ತುಮುಡಿ ಜನತಾಡಿಲಕ್ಸ್ ಹೋಟೆಲ್ ಸಮೀಪದ ” ತಕ್ಷಿಲಾ ಕಟ್ಟಡದ ಮೊದಲ ಮಹಡಿಯಲ್ಲಿರುವ ಎ-1 ಲಾಜಿಕ್ಸ್ ಸಂಸ್ಥೆ ಕಚೇರಿಯಿಂದ ಪಡೆದುಕೊಳ್ಳಬಹುದು. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರವೇಶ ನೋಂದಣಿ ಮಾಡಿಕೊಳ್ಳಬಹುದು.