ಧಾರವಾಡ : ತಮ್ಮ ಕೊಳಲು ಹಾಗೂ ಕಂಠಸಿರಿಯ ನಾದದಿಂದ ಸಂಗೀತ ಸರಸ್ವತಿಗೆ ಸೇವೆ ಸಲ್ಲಿಸಿ ಹಿಂದುಸ್ಥಾನಿ ಸಂಗೀತದ ಪರಂಪರೆಯನ್ನು ಕರ್ನಾಟಕದಲ್ಲಿ ಪ್ರಚವ-ಪ್ರಸಾರ ಪಡಿಸಿದ ಸಂಗೀತ ದಿಗ್ಗಜ ದಿವಂಗತ ಪಂಡಿತ್ ವೆಂಕಟೇಶ್ ಗೋಡ್ಖಿಂಡಿಯವರ ಸ್ಮರಣಾರ್ಥವಾಗಿ, ಸಂಜೋಗ್ ಸಂಸ್ಥೆ ಗೋಡ್ಖಿಂಡಿ ಮ್ಯೂಸಿಕ್ ಮತ್ತು ಎಡ್ಯುಟೇನ್ಮೆಂಟ್ ಪ್ರೈ.ಲಿ. ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ‘ಸ್ವರಶೃದ್ಧಾಂಜಲಿ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 19 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ್ ಶಿರೂರ ರಂಗ ಮಂದಿರದಲ್ಲಿ ಹಮ್ಮಿಕೊಂಡಿದೆ.
ಈ ನಾದ ನಮನವನ್ನು ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯದ ಯುವ ಗಾಯಕ-ಗಾಯಕಿಯರು ‘ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಅವರು ಸಂಗೀತ ಸಂಯೋಜಿಸಿ ಜನಪ್ರಿಯಗೊಳಿಸಿದ ಭಕ್ತಿಗೀತೆಗಳನ್ನು ಹಾಡುವ ಮುಖೇನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆಯನ್ನು ನೀಡಲಿದ್ದಾರೆ. ಹೆಸರಾಂತ ಗಾಯಕರು ಪಂ. ಸೋಮನಾಥ ಮರಡೂರ ಹಾಗೂ ಪಂ. ವೆಂಕಟೇಶ ಕುಮಾರ ಅವರು ಪಂ. ವೆಂಕಟೇಶ ಗೋಡ್ಖಿಂಡಿಯವರ ಬಗ್ಗೆ, ನೆನಪುಗಳನ್ನು ಹಂಚಿಕೊಳ್ಳುತ್ತ ನುಡಿ ನಮನ ಸಲ್ಲಿಸಲಿದ್ದಾರೆ. ತದನಂತರ ಗೋಡ್ಖಿಂಡಿ ತ್ರಯರು-ಅಂದೆ ಪಂ. ಪ್ರವೀಣ ಗೋಡ್ಖಿಂಡಿ ಮತ್ತು ಅವರ ಪುತ್ರ ಶ್ರೀ ಷಡಜ್ ಗೋಡ್ಖಿಂಡಿ ಅವರ ಬಾನ್ಸುರಿ ಜುಗಲ್ಬಂದಿಯ ಕಾರ್ಯಕ್ರಮಕ್ಕೆ ಶ್ರೀ ಕಿರಣ ಗೋಡ್ಖಿಂಡಿರವರು ತಬಲಾ ಸಾಥ ನೀಡಲಿದ್ದಾರೆ. ಎರಡು ರಾಗಗಳನ್ನು ಎರಡು ಬೇರೆ ಬೇರೆ ಶೃತಿಯಲ್ಲಿ ಏಕಕಾಲಕ್ಕೆ ಪ್ರಸ್ತುತ ಪಡಿಸುವ ಪ್ರಕಾರವೇ “ಜಸರಂಗಿ”. ಈ ಜಸರಂಗಿಯ ರಾಗರಂಗನ್ನು ಒಂದು ವಿನೂತನ ಹಾಗೂ ಅಮೋಘವಾದ ಬಾನ್ಸುರಿ ಹಾಗೂ ಗಾಯನ ಜುಗಲ್ಬಂದಿ-ಸಿಂಫೋನಿ ಕಾರ್ಯಕ್ರಮದ ಮೂಲಕ ಸಂಜೋಗ ಬಾನ್ಸುರಿ ಮಹಾವಿದ್ಯಾಲಯದ ಸರಿಸುಮಾರು 25 ಶಿಷ್ಯವೃಂದದವರು ಪ್ರಸ್ತುತಪಡಿಸಲಿದ್ದಾರೆ. ಶಬ್ಬೀರ್ ಅಹಮದ್ ಕೀಬೋರ್ಡ್, ಶ್ರೀಧರ ಮಾಂಡ್ರೆ ತಬಲಾ ಮತ್ತು ಪ್ರಕಾಶ ಅಂಥೋನಿ ರಿದಮ್ ಪ್ಯಾಡ್ ಸಹಕಾರ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಧಾರವಾಡದ ಹೆಮ್ಮೆಯ ಕಲಾವಿದರಾದ ದಿ. ಪಂ. ವೆಂಕಟೇಶ ಗೋಡ್ಖಿಂಡಿ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರವೀಣ ಗೋಡ್ಖಿಂಡಿ ವಿನಂತಿಸಿಕೊಂಡಿದ್ದಾರೆ.