ಧಾರವಾಡ : ಕರ್ನಾಟಕ ಹಿಸ್ಟಾರಿಕಲ್ ರಿಸರ್ಚ್ ಸೊಸೈಟಿ (ಕೆ.ಎಚ್.ಆರ್.ಎಸ್.) ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ದಿನಾಂಕ 03 ಜನವರಿ 2025ರಂದು ರಂಗಾಯಣದಲ್ಲಿ ‘ಸ್ವರ-ವರ್ಣ ಸಮನ್ವಯ’ ಎಂಬ ವಿನೂತನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ ಉದಗಟ್ಟಿ ಇವರ ಕೊಳಲು ವಾದನ ಹಾಗೂ ಪಂಡಿತ್ ನಂದಿಕೇಶ್ವರ ಗುರವ ಇವರ ತಬಲಾ ನಾದದೊಂದಿಗೆ, ಕಲಾವಿದೆ ಶ್ರೀಮತಿ ಸಪ್ನಾ ಕಟ್ಟಿಯವರು ನಡೆಸಿಕೊಟ್ಟ ಲೈವ್ ಪೇಂಟಿಂಗ್ (ಚಿತ್ರಕಲೆ) ಕಲಾಭಿಮಾನಿಗಳ ಮನಸೂರೆಗೊಂಡಿತು. ಸಂಗೀತ ಮತ್ತು ಚಿತ್ರಕಲೆಯ ಈ ಅಪರೂಪದ ಸಂಗಮಕ್ಕೆ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ರಂಗಕರ್ಮಿ ಡಾ. ಶಶಿಧರ್ ನರೇಂದ್ರ ಕಲೆಗಳ ನಡುವೆ ಇರುವ ಅವಿನಾಭಾವ ಸಂಬಂಧದ ಬಗ್ಗೆ ವಿವರಿಸಿ ಅವು ಕಾರ್ಯಕ್ರಮದಲ್ಲಿ ವ್ಯಕ್ತವಾದ ರೀತಿಯನ್ನು ಶ್ಲಾಘಿಸಿದರು. ನಿವೃತ್ತ ಐ.ಎಫ್.ಎಸ್. ಅಧಿಕಾರಿ ಡಾ. ಗಿರಿಧರ ಕಿನ್ನಾಳ ಅಧ್ಯಕ್ಷೀಯ ಭಾಷಣದಲ್ಲಿ ಇಂದಿನ ಕಾರ್ಯಕ್ರಮಕ್ಕೆ ದೇವರು ಸೃಷ್ಟಿಸಿದ ಕಾನನದ ಹಚ್ಚ ಹಸಿರು ಬಣ್ಣ, ಪಕ್ಷಿಗಳ ಕಲರವ ಹಾಗೂ ಕಿರಣಗಳ ನಾಟ್ಯದ ಸಮ್ಮಿಲನದ ಸೊಬಗಿನ ಉಪಮೆಯನ್ನು ನೀಡಿದರು. ಶ್ರೀ ಸಮೀರ ಜೋಶಿಯವರು ಅತಿಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು.
