ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ.ಜಿಲ್ಲಾ ಸಮಿತಿಯಿಂದ ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ‘ಸ್ವರಾಜ್ಯ-ಸುರಾಜ್ಯ ಕವಿಗೋಷ್ಠಿ’ಯು ದಿನಾಂಕ 10-08-2023ರಂದು ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕುಮಾರ್ ಶೆಟ್ಟಿ ಪಿ. ಮಾತನಾಡಿ “ಕವಿಗಳು ತಮ್ಮ ಕವನಗಳ ಮೂಲಕ ಸಮಾಜಕ್ಕೆ ಸದ್ವಿಚಾರದ ಸಂದೇಶ ಪಸರಿಸಬೇಕು. ಯುವ ಮನಸ್ಸುಗಳಲ್ಲಿ ಉತ್ತಮ ಭಾವನೆ ಮೂಡಿಸಲು ಪ್ರಯತ್ನಿಸಬೇಕು” ಎಂದರು.
ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಜೊತೆ ಕಾರ್ಯದರ್ಶಿ ಡಾ.ಅರ್ಜುನ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಅ.ಭಾ.ಸಾ.ಪ. ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ಸಾ.ಪ. ಕಾರ್ಯದರ್ಶಿ ಪರಿಮಳ ರಾವ್, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಕೋಶಾಧಿಕಾರಿ ಶ್ರೀ ಭಾಸ್ಕರ ರೈ ಕಟ್ಟ, ಜೊತೆ ಕಾರ್ಯದರ್ಶಿ ಶ್ರೀಲಕ್ಷ್ಮಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಜಯಾನಂದ ಪೆರಾಜೆ ಮತ್ತು ಕೃಷ್ಣ ಡಿ.ಎಸ್. ಉಪಸ್ಥಿತರಿದ್ದರು.
ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಿರಿಯಪ್ಪ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 40ಕ್ಕೂ ಅಧಿಕ ಕವಿಗಳು ಸ್ವರಚಿತ ಕವನ ವಾಚಿಸಿದರು. ಭಾಗವಹಿಸಿದ ಕವಿಗಳಿಗೆ ಅ.ಭಾ.ಸಾ.ಪ. ವಲಯ ಸಂಚಾಲಕ ಶ್ರೀ ಸುಂದರ ಶೆಟ್ಟಿ ಅಭಿನಂದನಾ ಪತ್ರ ವಿತರಿಸಿದರು. ಉಪನ್ಯಾಸಕ ರವಿರಾಜ್ ಎಸ್. ವಂದಿಸಿ, ಗೀತಾ ಲಕ್ಷ್ಮೀಶ್ ನಿರೂಪಿಸಿದರು.