ಧಾರವಾಡ : ಸುಮಾರು ಐದು ದಶಕಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಸಂಗೀತ ರಿಸರ್ಚ್ ಅಕಾಡೆಮಿಯ ಮೂಲಕ ಪೋಷಿಸಿ ಪ್ರಚಾರ ಮಾಡುತ್ತಿರುವಂಥ ಪ್ರತಿಷ್ಠಿತ ಸಂಸ್ಥೆಯೆಂದರೆ ಅದು ಐ.ಟಿ.ಸಿ. ಐ.ಟಿ.ಸಿ.-ಎಸ್.ಆರ್.ಎ. ಎಂದೇ ಪ್ರಸಿದ್ಧಿ ಪಡೆದಿರುವ ಕೋಲ್ಕತ್ತಾದ ಈ ಸಂಸ್ಥೆ ದೇಶದ ಶ್ರೀಮಂತ ಪರಂಪರೆಯನ್ನು ಸಾಕಾರಗೊಳಿಸುವ ಅನನ್ಯ ಗುರು-ಶಿಷ್ಯ ಪರಂಪರೆಯ ಮೂಲಕ ಅಮೂಲ್ಯ ಜ್ಞಾನ ಹಾಗೂ ತರಬೇತಿಯನ್ನು ನೀಡುತ್ತಲಿದೆ. ಶ್ರೇಷ್ಠ ಹಿರಿಯ ಕಲಾವಿದರು, ಶ್ಲಾಘನೀಯ ಗುರುಗಳ ಮಾರ್ಗದರ್ಶನ ನೀಡುತ್ತ ವೃತ್ತಿಪರ ಕಲಾವಿದರನ್ನು ಸಿದ್ಧಗೊಳಿಸುವಂಥ ವಿಶೇಷ ಕಾರ್ಯವನ್ನು ಮಾಡುತ್ತಲಿದೆ. ದೇಶದ ವಿವಿಧೆಡೆಗಳಲ್ಲಿ ಸಂಗೀತ ಸಮ್ಮೇಳನಗಳನ್ನು ಹಮ್ಮಿಕೊಂಡು ಭಾರತೀಯ ಸಂಗೀತದ ಪ್ರಚಾರ ಹಾಗೂ ಪ್ರಸಾರವನ್ನು ಐ.ಟಿ.ಸಿ.-ಎಸ್.ಆರ್.ಎ. ಮಾಡುತ್ತಿದೆ.
ಈ ನಿಟ್ಟಿನಲ್ಲಿ ವಿದ್ಯಾನಗರಿ ಧಾರವಾಡದಲ್ಲಿಯೂ ಕೂಡ ಎರಡು ದಿನಗಳ ಐ.ಟಿ.ಸಿ. ಮಿನಿ ಸಂಗೀತ ಸಮ್ಮೇಳನವನ್ನು ಹಮ್ಮಿಕೊಳ್ಳುವ ಕಾರ್ಯಕ್ಕೆ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಸಜ್ಜಾಗಿವೆ. ಇದಕ್ಕೆ ಕೋಲ್ಕತ್ತಾದ ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿಯೂ ಕೈಜೋಡಿಸಿದೆ. ದಿನಾಂಕ 21 ಸೆಪ್ಟೆಂಬರ್ ಮತ್ತು 22 ಸೆಪ್ಟೆಂಬರ್ 2024ರಂದು ಎರಡು ದಿನಗಳ ಐ.ಟಿ.ಸಿ. ಮಿನಿ ಸಂಗೀತ ಸಮ್ಮೇಳನವು ಆಯೋಜಿತಗೊಂಡಿದ್ದು, ಧಾರವಾಡದ ಕರ್ನಾಟಕ ಕಾಲೇಜ್ ಕ್ಯಾಂಪಸ್, ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ, ‘ಸೃಜನಾ’ದಲ್ಲಿ ಜರುಗಲಿದೆ. ಇದಕ್ಕೆ ಧಾರವಾಡದ ದಾಸಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡುತ್ತಿವೆ.
ಕೋಲ್ಕತ್ತಾದ ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಸಂಗೀತ ವ್ಯಾಸಂಗ ಮಾಡಿದ ಯುವ ಕಲಾವಿದರು ಹಾಗೂ ಪ್ರಾಧ್ಯಾಪಕ-ಗುರುಗಳಾಗಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಂದ ಗಾಯನ-ವಾದನಗಳ ನಿನಾದ ಹರಿದುಬರಲಿದೆ. ದಿನಾಂಕ 21 ಸೆಪ್ಟೆಂಬರ್ 2024 ಶನಿವಾರದಂದು ಸಂಜೆ 5-30 ಗಂಟೆಗೆ ಐ.ಟಿ.ಸಿ.-ಎಸ್.ಆರ್.ಎ. ಸಂಸ್ಥೆಯ ಫೆಲೊಶಿಪ್ ವಿದ್ಯಾರ್ಥಿನಿ, ಯುವ ಗಾಯಕಿ ಮೌಪಾಲಿ ಚೌಧರಿ ಇವರು ಈ ಸಂಗೀತ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಇವರಿಗೆ ಸ್ವಪ್ನಿಲ್ ಭಿಸೆ ತಬಲಾ ಹಾಗೂ ಸಾರಂಗ ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ನಂತರ ಸಂಗೀತ ಅಕ್ಯಾಡೆಮಿಯ ವಿದ್ಯಾರ್ಥಿ ಹಾಗೂ ಯುವಗುರುವಿನ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ರಜೇಶ್ವರ ಮುಖರ್ಜಿಯವರ ಗಾನಸುಧೆ ಹರಿದುಬರಲಿದೆ. ಇವರಿಗೆ ಅಜಿಂಕ್ಯಾ ಜೋಶಿ ತಬಲಾ ಹಾಗೂ ಸಾರಂಗ ಕುಲಕರ್ಣಿ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.
ಸಮ್ಮೇಳನದ ಎರಡನೇ ದಿನ 21 ಸೆಪ್ಟೆಂಬರ್ 2024 ರವಿವಾರದಂದು ಗಾಯನ-ವಾದನಗಳ ನಿನಾದ ರಿಂಗಣಿಸಲಿದೆ. ಸಂಜೆ ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಸಿತಾರ ವಾದನದ ಗುರುವಾಗಿ ಸೇವೆ ಸಲ್ಲಿಸುತ್ತಿರುವ ಅಯಾನ್ ಸೇಂಗುಪ್ತಾ ತಮ್ಮ ಸಿತಾರ ತಂತುಗಳ ಝೇಂಕಾರವನ್ನು ಹರಿಸಲಿದ್ದಾರೆ. ಇವರಿಗೆ ಸ್ವಪ್ನಿಲ್ ಭಿಸೆ ತಬಲಾ ಸಾಥ್ ನೀಡುವರು. ನಂತರ ಸಮ್ಮೇಳನದ ಕೊನೆಯ ಕಾರ್ಯಕ್ರಮವಾಗಿ ಐ.ಟಿ.ಸಿ.-ಎಸ್.ಆರ್.ಎ.ಯಲ್ಲಿ ಪ್ರಾಂಶುಪಾಲ ಗುರುಗಳಾಗಿ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ಪಂಡಿತ್ ಉಲ್ಲಾಸ್ ಕಶಾಳಕರ್ ಇವರ ಗಾಯನ ಮೂಡಿಬರಲಿದೆ. ಇವರಿಗೆ ಹಾರ್ಮೋನಿಯಂದಲ್ಲಿ ಸಾರಂಗ ಕುಲಕರ್ಣಿ ಹಾಗೂ ತಬಲಾದಲ್ಲಿ ಅಜಿಂಕ್ಯಾ ಜೋಶಿ ಸಾಥ್ ನೀಡಲಿರುವರು.
ಈ ಕಾರ್ಯಕ್ರಮಕ್ಕೆ ಆಗಮಿಸಲು ಇಚ್ಛಿಸುವ ಕಲಾಪ್ರಿಯರು ಪಾಸ್‌ಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಮೀರ ಜೋಶಿಯವರ 9845447002 ಈ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ.