ಮಂಗಳೂರು : ವಳಚ್ಚಿಲ್ ಶ್ರೀನಿವಾಸ ಶಿಕ್ಷಣ ಸಮೂಹ ಸಂಕೀರ್ಣದ ವೈಕುಂಠ ಶ್ರೀನಿವಾಸ ದೇವಾಲಯದಲ್ಲಿ “ದೇವಾಲಯದಲ್ಲಿ ಸ್ವರಾಲಯ” ಎನ್ನುವ ದೈವಿಕ ಸಾರದ ಸಂಗೀತ ಕಾರ್ಯಕ್ರಮವು ದಿನಾಂಕ 04-05-2024 ರಂದು ನಡೆಯಿತು.
ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಬೇರೂರಿರುವ ‘ಸಂಗೀತ ಮತ್ತು ಆಧ್ಯಾತ್ಮಿಕತೆ’ ಪರಿಕಲ್ಪನೆಯು ದೇವಾಲಯದ ದೈವತ್ವ ಹಾಗೂ ಶಾಸ್ತ್ರೀಯ ಸಂಗೀತದ ಸಮ್ಮಿಲನದಿಂದ ಭಕ್ತಿ ಆರಾಧನೆಯನ್ನು ಇಮ್ಮಡಿಗೊಳಿಸುತ್ತದೆ. ಭಕ್ತಿ ಸ್ವರಸಂಗೀತ ಸಂಗಮದ ಮೂಲಕ ಭಕ್ತ ಸಮೂಹದಲ್ಲಿ ದೈವಿಕ ಸಾರ ಬಿತ್ತುವ ಸಲುವಾಗಿ ಕಲಾ ಆರಾಧಕ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಈ “ದೇವಾಲಯದಲ್ಲಿ ಸ್ವರಾಲಯ” ಎಂಬ ವಿನೂತನ ಕಾರ್ಯಕ್ರಮವನ್ನು ಶ್ರೀನಿವಾಸ ಫಾರ್ಮಸಿ ಕಾಲೇಜು ತಮ್ಮ ವಳಚ್ಚಿಲಿನ ವೈಕುಂಠ ಶ್ರೀನಿವಾಸ ದೇಗುಲದ ಪ್ರಾಂಗಣದಲ್ಲಿ ಸ್ವರಾಲಯ ಸಾಧನ ಫೌಂಡೇಶನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮೀ ಆರ್. ರಾವ್ ಸಂಗೀತ ವಾದಕರ ತಂಡಕ್ಕೆ ಶುಭ ಹಾರೈಸಿದರು. ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸದಸ್ಯರಾದ ಶ್ರೀಮತಿ ಮಿತ್ರಾ ಎಸ್ ರಾವ್ ಮಾತನಾಡಿ “ಸಂಗೀತ ಹಾಗೂ ಆಧ್ಯಾತ್ಮದ ಮಿಲನದಿಂದ ಭಕ್ತಿ ಜಾಗ್ರತಿಯು ಮೂಡುತ್ತದೆ, ಇದರಿಂದ ಮನಸ್ಸು ಹಾಗೂ ಶರೀರದ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ.” ಎಂದು ಹೇಳಿದರು.
ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ. ಎ. ಆರ್. ಶಬರಾಯ ಮಾತನಾಡಿ “ಸಂಗೀತ ನಮ್ಮ ಸಂಸ್ಕ್ರತಿಯ ದ್ಯೋತಕವಾಗಿ ಅಚ್ಚಳಿಯದೆ ಉಳಿದಿದೆ ಇದರ ಪೋಷಣೆ ಅತ್ಯಗತ್ಯ.” ಎಂದು ಕಲಾ ತಂಡವನ್ನು ಪರಿಚಯಿಸಿದರು.
ಏಕಕಾಲಕ್ಕೆ 30ಕ್ಕೂ ಹೆಚ್ಚು ವಯೋಲಿನ್ ವಾದಕರು ಹಾಗೂ ಸಂಗೀತ ವಿದುಷಿ ವಾಣಿ ಪ್ರಮೋದ್ ಮತ್ತು ವಿದುಷಿ ಶ್ರೇಷ್ಠ ಲಕ್ಷ್ಮೀ ಇವರು ಯುಗಳ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ವೃಂದ, ಬೋಧಕೇತರ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಯೋಲಿನ್ ವಾದಕರಾದ ವಿಶ್ವಾಸ್ ಕೃಷ್ಣ ಇವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಪದ್ಮಾ ಪಿ. ಪ್ರಭು ಹಾಗೂ ಕುಮಾರಿ ಸ್ಮಿತಾ ರೈ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಡಾ. ಶ್ರೀಪತಿ ವಂದಿಸಿದರು.

