ಮಂಗಳೂರು: ಸ್ವರಾಲಯ ಸಾಧನಾ ಫೌಂಡೇಶನ್ ಹಾಗೂ ಕಲಾ ಶಾಲೆಯ 83ನೇ ಸ್ವರಾಲಯ ಸಾಧನಾ ಮಾಸಿಕ ಶಿಬಿರವು 28 ಜುಲೈ 2024ರಂದು ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾತನಾಡಿ “ಸಂಗೀತಕ್ಕೆ ಯಾವುದೇ ಭಾಷೆ ಇಲ್ಲ. ಆದರೆ ಪ್ರತಿಯೊಬ್ಬರ ಮನಸ್ಸಿಗೂ ರಿಲ್ಯಾಕ್ಸ್ ನೀಡುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಂಗೀತ ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ. ಸಣ್ಣ ವಯಸ್ಸಿನಲ್ಲಿ ನನಗೆ ಸಂಗೀತ ಕಲಿಯುವ ಉತ್ಸಾಹ ಇದ್ದರೂ ಮುಂದೆ ಅದಕ್ಕೆ ಪೂರಕ ವಾತಾವರಣ ಇರಲಿಲ್ಲ. ಈಗ ಸಂಗೀತ ಕಲಿಯುವ ಅವಕಾಶ ಇದ್ದರೂ ಅದಕ್ಕೆ ಪೂರಕವಾಗಿ ನಮ್ಮ ವಯಸ್ಸು ಇಲ್ಲ. ಹಾಗಾಗಿ ಎಲ್ಲ ಪಾಲಕರು ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಸಂಗೀತ, ನೃತ್ಯ ಮುಂತಾದ ಕಲೆಗಳ ಅಧ್ಯಯನಕ್ಕೆ ಕಳುಹಿಸಬೇಕು. ಮಕ್ಕಳಿಗೆ ಸ್ವಲ್ಪ ಕಷ್ಟ ಎನಿಸಿದರೂ ಮುಂದಕ್ಕೆ ಇದು ನಿಮ್ಮ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಡಲಿದೆ”. ಎಂದು ಹೇಳಿದರು. “ಮಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮಗಳ ಉತ್ತೇಜನಕ್ಕೆ ನಿಮ್ಮ ಪ್ರಯತ್ನ ಏನು?” ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು “ಸಂಗೀತ ಕಾರ್ಯಕ್ರಮ ಸಂಘಟಿಸಲು ಒಂದು ಸೂಕ್ತ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸಲಾಗುವುದು.” ಎಂದು ತಿಳಿಸಿದರು.
ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಹಾಗೂ ವಯಲಿನ್ ಶಿಬಿರ ನಡೆಯಿತು. ಗುರು ವಿ ವಿಶ್ವಾಸ್ ಕೃಷ್ಣ ವಯಲಿನ್ ಶಿಬಿರ ನಡೆಸಿಕೊಟ್ಟರು. ಶ್ರೇಷ್ಠ ಲಕ್ಷ್ಮೀ ಹಾಗೂ ರಶ್ಮೀ ಹಾಡುಗಾರಿಕೆಯಲ್ಲಿ ಸಹಕರಿಸಿದರು.
ಸ್ವರಾಲಯ ಸಾಧನಾ ಫೌಂಡೇಶನ್ ಇದರ ವಯಲಿನ್ ವಿದ್ವಾನ್ ವಿಶ್ವಾಸ್ ಕೃಷ್ಣ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.