ಉಡುಪಿ : ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಸುರತ್ಕಲ್ ಮತ್ತು ಮ್ಯಾಕ್ಸ್ ಮೀಡಿಯಾ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಿಂದುಸ್ತಾನಿ ಕಛೇರಿಗಳ ಸಂಗೀತ ಹಬ್ಬ ‘ಸ್ವರಸ್ವಾದ್’ ಕಾರ್ಯಕ್ರಮವು ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2024ರಂದು ಜರುಗಿತು.
ಕಾರ್ಯಕ್ರಮದಲ್ಲಿ ಉಸ್ತಾದ್ ರಫೀಕ್ ಖಾನ್, ಶ್ರೀ ಟಿ. ರಂಗ ಪೈ, ಶ್ರೀ ಎಮ್. ಗಂಗಾಧರ್, ಶ್ರೀ ಮುರಳಿ ಕಡೇಕಾರ್ ಹಾಗೂ ಶ್ರೀ ರತ್ನಕುಮಾರ್ ಜೊತೆ ಸೇರಿ ದೀಪ ಪ್ರಜ್ವಲನವನ್ನು ನಡೆಸಿಕೊಟ್ಟರು. ಚಿರಂತನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಭಾರವಿ ದೇರಾಜೆ ಹಾಗೂ ಮ್ಯಾಕ್ಸ್ ಮೀಡಿಯಾದ ಶ್ರೀ ಜಯಂತ್ ಐತಾಳ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ ಹಾಗೂ ವಿದುಷಿ ಸಂಗೀತ ಕಟ್ಟಿಯವರ ಶಿಷ್ಯೆ ಉಡುಪಿಯ ಯುವ ಕಲಾವಿದೆ ಕುಮಾರಿ ಅನುರಾಧ ಭಟ್ ಇವರು ರಾಗ ಕೇದಾರದಲ್ಲಿ ವಿಲಂಬಿತ್ ತೀನ್ ತಾಲ್ ಹಾಗೂ ದೃತ್ ತೀನ್ ತಾಲ್ ಇದರ ಬಂಧಿಶ್‌ಗಳನ್ನು ಪ್ರಸ್ತುತ ಪಡಿಸಿ ಭಜನ್‌ಗಳನ್ನು ಹಾಡಿ ತನ್ನ ಗಾಯನ ಪ್ರಸ್ತುತಿಯನ್ನು ಮುಕ್ತಾಯಗೊಳಿಸಿದರು. ಇವರಿಗೆ ತಬ್ಲಾದಲ್ಲಿ ಶ್ರೀ ದೀಪಕ್ ನಾಯಕ್ ಹರಿಖಂಡಿಗೆ, ಸಂವಾದಿನಿಯಲ್ಲಿ ಶ್ರೀ ಪ್ರಸಾದ್ ಕಾಮತ್ ಉಡುಪಿ ಹಾಗೂ ತಾನ್ಪುರದಲ್ಲಿ ಕುಮಾರಿ ಜಯಶ್ರೀ ಶೇಟ್ ಸಹಕರಿಸಿದರು.
ಎರಡನೆಯ ಕಛೇರಿಯನ್ನು ಕೆನಡಾದಲ್ಲಿ ನೆಲೆಸಿರುವ ಸರೋದ್ ಕಲಾವಿದ ಶ್ರೀ ಆರ್ನಾಬ್ ಚಕ್ರವರ್ತಿ ನಡೆಸಿಕೊಟ್ಟರು. ಇವರು ಅಪರೂಪದ ರಾಗ ಮಾಲ್ಗುಂಜಿಯನ್ನು ವಿಲಂಬಿತ್ ಹಾಗೂ ದೃತ್ ತೀನ್ ತಾಲ್ ಗಳಲ್ಲಿ ಪ್ರಸ್ತುತಪಡಿಸಿ ಅನಂತರ ತಿಲಕ್ ಕಾಮೋದ್ ರಾಗವನ್ನು ಮಧ್ಯಲಯ ರೂಪಕ್ ಹಾಗೂ ದೃತ್ ತೀನ್ ತಾಲ್‌ಗಳಲ್ಲಿ ನುಡಿಸಿದರು. ಇವರಿಗೆ ತಬ್ಲಾದಲ್ಲಿ ಕೋಟೇಶ್ವರದ ಶ್ರೀ ವಿಘ್ನೇಶ್ ಕಾಮತ್ ಸಾಥ್ ನೀಡಿದರು.
ಕೊನೆಯದಾಗಿ ಪಂಡಿತ್ ಪಾರ್ಥ ಭೋಸ್ ಕೋಲ್ಕತಾ ಇವರಿಂದ ಸಿತಾರ್ ವಾದನ ಕಾರ್ಯಕ್ರಮ ನಡೆಯಿತು. ತಮ್ಮ ಕಛೇರಿಯಲ್ಲಿ ಸುಂದರ ಆಲಾಪ್ ಹಾಗೂ ವಿಲಂಬಿತ್ ಝಪ್ ತಾಳದ ಗತ್ ನೊಂದಿಗೆ ಮಾಧುರ್ಯಪೂರ್ಣವಾಗಿ ರಾಗ ದುರ್ಗಾವನ್ನು ಪ್ರಸ್ತುತ ಪಡಿಸಿದರು ಮತ್ತು ಮಿಶ್ರ ಕಮಾಜ್ ರಾಗದ ಗತ್ ಮಾಲಾದೊಂದಿಗೆ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು. ಪಾರ್ಥ ಭೋಸ್ ಅವರಿಗೆ ಗೋವಾದ ಶ್ರೀ ಮಯಾಂಕ್ ಬೇಡೇಕರ್ ತಬ್ಲಾ ಸಾಥ್ ನೀಡಿದರು.
ಚಿರಂತನದ ಅಧ್ಯಕ್ಷರಾದ ಶ್ರೀ ತೇಜಸ್ವಿ ಶಂಕರ್ ಜೂನಿಯರ್ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.