ಮಂಗಳೂರು : ಸನಾತನ ನಾಟ್ಯಾಲಯ ಆಯೋಜಿಸಿದ ಕೀರ್ತಿಶೇಷ ಸ್ವರುಣ್‌ರಾಜ್ ಸ್ಮರಣೆಯ 10ನೇ ವರ್ಷದ ಕಾರ್ಯಕ್ರಮವು ‘ಸ್ವರುಣ್ ಸ್ಮರಣಾಂಜಲಿ’ ದಿನಾಂಕ 09-06-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ, ಸ್ವರುಣ್ ರಾಜ್ ಗೆ ನುಡಿನಮನ ಸಲ್ಲಿಸಲಿರುವ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸ್ವರುಣ್ ರಾಜ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ವರುಣ್ ರಾಜ್ ರವರ ತಂದೆಯವರಾದ ಶ್ರೀ ಸುರೇಶ್ ರಾಜ್, ತಾಯಿ ಶ್ರೀಮತಿ ಮನುರಾಜ್ ಮತ್ತು ರಾಷ್ಟ್ರ ಮತ್ತು ಧರ್ಮ ಜಾಗೃತಿ ಸಂದೇಶ ನೀಡಲು ಆಗಮಿಸಿದ್ದ ಹಿರೇಮಗಳೂರು ಕಣ್ಣನ್ ಇವರೆಲ್ಲರೂ ಸ್ವರುಣ್‌ರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಕೆ. ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿನಮನ ಸಲ್ಲಿಸುತ್ತಾ “ಎಳೆಯ ವಯಸ್ಸಿನಲ್ಲಿಯೇ ಅಪರಿಮಿತ ಜೀವನೋತ್ಸಾಹ, ಸಮಾಜೋನ್ಮುಖ ಕೆಲಸಗಳ ಬಗ್ಗೆ ತುಡಿತ ಮತ್ತು ದೂರದೃಷ್ಟಿಯ ನಾಯಕತ್ವ ಇತ್ಯಾದಿ ಲಕ್ಷಣಗಳು ಸ್ವರುಣ್‌ನಲ್ಲಿದ್ದವು. ಆತನಿಗೆ ಭಾರತೀಯತೆಯ ಹಾಗೂ ಸನಾತನತೆಯ ಬಗ್ಗೆ ಅಪಾರವಾದ ಶೃದ್ಧೆಯಿತ್ತು. ಆಧುನಿಕ ಜಗತ್ತಿನ ಎಲ್ಲಾ ಒಳ್ಳೆಯ ಸಂಗತಿಗಳನ್ನು ಇಟ್ಟುಕೊಂಡು, ನಮ್ಮ ನಾಗರೀಕತೆಯ, ಪರಂಪರೆಯ, ಸಂಸ್ಕೃತಿಯ ಎಲ್ಲಾ ಅಂಶಗಳ ಬಗ್ಗೆ ಗೌರವದಿಂದ ತನ್ನನ್ನು ತೊಡಗಿಸಿಕೊಳ್ಳುತ್ತಾ, ಅದನ್ನೂ ಸುತ್ತ ಮುತ್ತ ಪಸರಿಸಲು ಪ್ರಯತ್ನ ಮಾಡುತ್ತಿದ್ದ. ಆದರೆ ಇಂಥಹ ಅದ್ವಿತೀಯ ಕಲಾಸಾಧಕ, ಸಮಾಜಸೇವಕ ಹಾಗೂ ಪ್ರತಿಭಾಶಾಲಿ ಈಗ ನಮ್ಮೊಂದಿಗಿಲ್ಲ. ಈ ಸ್ಮರಣಾಂಜಲಿ ಕಾರ್ಯಕ್ರಮ ನಮ್ಮೆಲ್ಲರಿಗೂ ಆತ್ಮಾವಲೋಕನ ಮಾಡುವ ಕಾರ್ಯಕ್ರಮ” ಎಂದರು.
ರಾಷ್ಟ್ರ ಹಾಗೂ ಧರ್ಮ ಜಾಗೃತಿಯ ಬಗ್ಗೆ ಮಾತನಾಡುತ್ತಾ ಹಿರೇಮಗಳೂರು ಕಣ್ಣನ್ ಇವರು “ಮನೆಯ ದೀಪ ಆರಲಹುದು. ಮನದ ದೀಪ ಆರಲಹುದೇ ? ಎಂಬ ಕವಿವಾಣಿಯಂತೆ ಸ್ವರುಣ್ ನಮ್ಮೊಂದಿಗೆ ಇಲ್ಲದಿದ್ದರೂ ಅವನ ನೆನಪು ಮಾತ್ರ ನಿತ್ಯ ನಿರಂತರ. ನಮ್ಮೊಳಗೆ ಹಾಸು ಹೊಕ್ಕಾಗಿರುವ ಸ್ವರುಣ್ ಇಟ್ಟುಕೊಂಡಿದ್ದ ಧ್ಯೇಯದಂತೆ ನಡೆದುಕೊಳ್ಳುವುದರೊಂದಿಗೆ ರಾಷ್ಟ್ರದ ಸಂಸ್ಕೃತಿಗೆ ನಮ್ಮದಾದ ಋಣ ತೀರಿಸುವ ಮೂಲಕ ಸ್ವರುಣ್ ಹಾಗೂ ಅವನಂತಹ ಹಲವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕು” ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಮೋಹನ್ ಆಳ್ವ, ಸ್ವರುಣ್ ರಾಜ್ ನಿಗೆ ದೇಶೀಯ ಕಲೆಗಳ ಮೇಲಿದ್ದ ಆಸಕ್ತಿಯನ್ನು ಕಂಡು ಆಶ್ಚರ್ಯವಾಗುತ್ತಿತ್ತು ಹಾಗೂ ತನ್ನ ಬಾಲ್ಯದ ದಿನಗಳ ನೆನಪಾಗುತ್ತಿತ್ತು. ನೃತ್ಯ ರೂಪಕದಲ್ಲಿ ನಟಿಸುತ್ತಿದ್ದ ರಾವಣ ಹಾಗೂ ಸತ್ಯನಾಪುರದ ಸಿರಿಯಲ್ಲಿನ ಅವನ ಅಧ್ಬುತ ಪಾತ್ರದ ಬಗ್ಗೆ ನೆನಪಿಸಿಕೊಂಡರು.
ಸಭಾ ಕಾರ್ಯಕ್ರಮದ ಬಳಿಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರ ಸುಪುತ್ರಿ ಹಾಗೂ ದೆಹಲಿಯ ಪ್ರಸಿದ್ಧ ನೃತ್ಯಗುರು ರಮಾ ವೈದ್ಯನಾಥನ್ ಇವರ ಶಿಷ್ಯೆಯಾದ ಶುಭಾಮಣಿ ಚಂದ್ರಶೇಖರ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ವಿದುಷಿ ಶ್ರೀಲತಾ ನಾಗರಾಜ್ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.