ಬೆಂಗಳೂರು : ಕರ್ನಾಟಕ ಪ್ರಹಸನ ಪಿತಾಮಹ ಹಾಗೂ ಹಿರಿಯ ಸಾಹಿತಿಗಳಾದ ತಂಜಾವೂರು ಪರಮಶಿವ ಕೈಲಾಸಂ ಇವರ 140ನೆಯ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 29 ಜುಲೈ 2024ರಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ““ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಜನಜನಿತ. ಒಮ್ಮೆ ಕೈಲಾಸಂ ಅವರ ಆತ್ಮೀಯರು ಹಾಗೂ ಅಭಿಮಾನಿಯಾಗಿದ್ದ ಅ. ನ. ಕೃ. ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು “ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ.” ಎಂದು ಹೇಳಿ, ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ದರಿಸುತ್ತಿದ್ದರು. ಕೈಲಾಸಂ ಅವರು ಹುಟ್ಟಿದ್ದು 1884ರ ಜುಲೈ 29ರಂದು. ಭೂಗರ್ಭ ಶಾಸ್ತ್ರದ ಉನ್ನತ ಪದವಿಗಾಗಿ ಲಂಡನ್ನಿನ ರಾಯಲ್ ಕಾಲೇಜಿಗೆ ಸೇರಿ ಅಲ್ಲಿ ಪ್ರಶಸ್ತಿ ಪಡೆದು ಬಂದರು. ಇಂಗ್ಲೆಂಡಿನಲ್ಲಿದ್ದ ಹಲವು ವರ್ಷಗಳ ಕಾಲದಲ್ಲಿ ಇವರು ಅಲ್ಲಿನ ಸರ್ಕಸ್ ಕೂಟಗಳು, ನೃತ್ಯಮಂದಿರಗಳು, ನಾಟಕ ರಂಗಗಳ ಅಮೂಲಾಗ್ರ ಪರಿಚಯ ಮಾಡಿಕೊಂಡು ಬಂದರು. ಇವರ ‘ತಿಪ್ಪಾರಳ್ಳಿ’, ‘ಕೊಳೀಕೆರಂಗಾ’, ‘ನೋಡಿದ್ರಾ ನಂ ನಂಜೀನಾವ’ ಕೇಳಿದರೆ ಪಾಶ್ಚಾತ್ಯರ ಸಂಗೀತದ ಮರ್ಮಗಳ ಐತಿಹ್ಯ ಇವರಿಗೆ ಎಷ್ಟುಮಟ್ಟಿಗೆ ಕರತಲಾಮಲಕವಾಗಿತ್ತೆಂದು ಊಹಿಸಬಹುದು. ಇವರ ಇಂಗ್ಲೀಷ್ ಕವನಗಳಲ್ಲಿ ಹಾಗೂ ನಾಟಕಗಳಲ್ಲಿ ಕಾಣ ಬರುವ ಶೈಲಿ ಇವರಿಗೆ ಆ ಭಾಷೆಯ ಮೇಲಿದ್ದ ಅಧಿಪತ್ಯವನ್ನು ಶೃತಪಡಿಸುತ್ತದೆ. ಕೈಲಾಸಂ ಇವರು 1945ರಲ್ಲಿ ಮದರಾಸಿನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಈ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಅವರು ಕನ್ನಡದ ಭವಿಷ್ಯದ ಕುರಿತು ವ್ಯಕ್ತ ಪಡಿಸಿರುವ ಕಾಳಜಿ ಅವರ ಮಹತ್ವವನ್ನು ಒತ್ತಿ ಹೇಳುತ್ತದೆ.” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್. ಎಸ್. ಶ್ರೀಧರ ಮೂರ್ತಿ ಮಾತನಾಡಿ “ಪೌರಾಣಿಕ ನಾಟಕಗಳ ಆವರಣದಲ್ಲಿದ್ದ ಕನ್ನಡ ಜನತೆಗೆ ಸಾಮಾಜಿಕ ಸಮಸ್ಯೆಗಳನ್ನು ರಂಗಮಂಟಪವೇರಿಸಿ ಹೊಸದೊಂದು ಯುಗವನ್ನೇ ಪ್ರಾರಂಭಿಸಿದ ಕೀರ್ತಿ ಕೈಲಾಸಂ ಅವರಿಗೆ ಸಲ್ಲತ್ತದೆ. ಕೈಲಾಸಂ ತಮ್ಮ ನಾಟಕಗಳಲ್ಲಿ ಪರಿಚಯಿಸಿದ ಸಾಮಾನ್ಯ ಮಾನವರಾದ ರಂಗಣ್ಣ, ರಾಮಣ್ಣ, ಅಹೋಬ್ಲು, ನಾಗತ್ತೆ, ಸುಬ್ಬಮ್ಮ, ಪಾತು, ಸಾತು, ಬಾಳು, ನರಸಿಂಹಯ್ಯ, ಪೋಸ್ಟ್ ಮನ್, ಗಡಫ್ ಖಾನ್, ಪೋಲಿಕಿಟ್ಟಿ, ಕುಪ್ಪಣ್ಣ ಇವರೆಲ್ಲರನ್ನು ಧೈರ್ಯವಾಗಿ ರಂಗಮಂಟಪಕ್ಕೇರಿಸಿದರು. ಹೀಗೆ ಕನ್ನಡದ ಸಾಮಾಜಿಕ ನಾಟಕಗಳ ಹೊಸ ಯುಗ ಆರಂಭವಾಯಿತು. ಕೈಲಾಸಂ ಸ್ವತಃ ವರದಾಚಾರ್ಯರ ನಾಟಕಗಳಲ್ಲಿ ಪಾತ್ರಧಾರಿಯಾಗಿದ್ದುದಲ್ಲದೆ ಆಚಾರ್ಯರು ತೀರಿಕೊಂಡಾಗ ಅವರ ಕಂಪೆನಿ ಯಜಮಾನಿಕೆ ವಹಿಸಿಕೊಂಡಿದ್ದರು. ಸ್ವತಃ ಅವರಿಗೆ ಸಂಗೀತ ಶಾಸ್ತ್ರದ ಗಾಢ ಪರಿಚಯವಿತ್ತು. ಶಬರನ ಶೃಂಗಾರದಲ್ಲಿ ಅವರು ಹಂಸಧ್ವನಿ, ಶಹನ, ಫರಜ್, ಬೇಗಡೆ, ಕಮಾಚ್ ರಾಗಗಳ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ. ಅವರು ‘ವಸಂತ ಸೇನಾ’ ಮೂಕಿ ಚಿತ್ರವನ್ನೂ ನಿರ್ಮಿಸಿ ಅದರಲ್ಲಿ ಶಕಾರನ ಪಾತ್ರದಲ್ಲಿ ಅಭಿನಯಿಸಿದ್ದರು.” ಎಂದು ವಿವರಗಳನ್ನು ನೀಡಿದರು.
ಪೋಲೆಂಡ್ ಕನ್ನಡ ಸಂಘದ ಅನಿರುದ್ಧ ಮತ್ತು ಸಂಜಯ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ. ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜ್, ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಹಾಗೂ ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.