05 ಏಪ್ರಿಲ್ 2023, ಬೆಂಗಳೂರು: ಟಿ. ಸುನಂದಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಎಂ. ನರಸಿಂಹಮೂರ್ತಿ ಅವರು “50/60ರ ದಶಕದಲ್ಲಿ ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೆ ಮುನ್ನುಡಿ ಬರೆದವರು ಟಿ. ಸುನಂದಮ್ಮನವರು. ಅವರ ಕುರಿತಾದ ಈ ಎರಡು ಪುಸ್ತಕಗಳನ್ನು ಯುವ ಪೀಳಿಗೆಯವರು ಓದಿ ಅವರ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗಲಿ ಎಂಬ ಆಶಯ ಈ ಕೃತಿಗಳ ಪ್ರಕಟಣೆಗೆ ಮುಖ್ಯ ಉದ್ದೇಶವಾಗಿದೆ. ಟಿ. ಸುನಂದಮ್ಮ ಅವರ ಮನೆ ಇರುವ ಪ್ರದೇಶಕ್ಕೆ “ಟಿ. ಸುನಂದಮ್ಮ ಹಾಸ್ಯ ಸಾಹಿತಿ ರಸ್ತೆ” ಎಂದು ನಾಮಕರಣ ಮಾಡಬೇಕು ಹಾಗೂ ಇದಕ್ಕೆ ಎಲ್ಲರೂ ಒಟ್ಟಾಗಿ ಆಗ್ರಹಿಸಬೇಕು. ಇದಕ್ಕೆ ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಬ್ರಾಹ್ಮಣರ ಮಹಾ ಸಂಘ ಹಾಗೂ ಟಿ. ಸುನಂದಮ್ಮ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಸರ್ಕಾರದ ಮುಂದೆ ಈ ಪ್ರಸ್ತಾವನೆಯನ್ನು ಇಡಲಾಗುವುದು ಹಾಗೂ ಪಂಪ ಮಹಾಕವಿ ರಸ್ತೆಯ ಮುಂಭಾಗದಲ್ಲಿ ಪಂಪನ ಪುತ್ಥಳಿ ನಿರ್ಮಿಸುವ ಜವಾಬ್ದಾರಿಯನ್ನು ಸ್ಮಾರಕ ಪ್ರತಿಷ್ಠಾನ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.
ನಂತರ ಡಾಕ್ಟರ್ ವಸುಂಧರ ಭೂಪತಿ ಅವರು ಮಾತನಾಡುತ್ತಾ “ಇಂದು ಪ್ರಶಸ್ತಿ ಸ್ವೀಕರಿಸಲಿರುವ ಭುವನೇಶ್ವರಿ ಹೆಗಡೆಯವರನ್ನು ಟಿ. ಸುನಂದಮ್ಮನವರ ಉತ್ತರಾಧಿಕಾರಿ ಎಂದೇ ಕರೆಯಲಾಗುತ್ತದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಭುವನೇಶ್ವರಿ ಹೆಗಡೆಯವರು ಸ್ತ್ರೀ ಸಂವೇದನೆಯ ಮೂಲಕ ಬರವಣಿಗೆಯನ್ನು ಆರಂಭಿಸಿದ್ದು ಅವರ ಒಂದು ವಿಶೇಷತೆ” ಎಂದು ಅಭಿಮಾನದಿಂದ ಹೇಳಿ ನಂತರ ಭುವನೇಶ್ವರಿ ಹೆಗಡೆಯವರಿಗೆ “ಟಿ. ಸುನಂದಮ್ಮ ಪ್ರಶಸ್ತಿ”ಯನ್ನು ನೀಡಿ ಸನ್ಮಾನಿಸಲಾಯಿತು.
“ಟಿ. ಸುನಂದಮ್ಮ ಸಾಹಿತ್ಯ ಸಂಪುಟ-3” ಈ ಕೃತಿಯನ್ನು ಡುಂಡಿರಾಜ್ ಹಾಗೂ ‘ಟಿ. ಸುನಂದಮ್ಮ ನಾ ಕಂಡಂತೆ’ ಪುಸ್ತಕವನ್ನು ಶಾಂತಕುಮಾರಿ ಲೋಕಾರ್ಪಣೆ ಮಾಡಿದರು. ಎಂ.ಎಸ್. ನರಸಿಂಹಮೂರ್ತಿ ಅವರು “ಟಿ.ಸುನಂದಮ್ಮ ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಾ ಇರುವುದು ಖುಷಿಯ ಸಂಗತಿ ಹಾಗೂ ಭುವನೇಶ್ವರಿ ಹೆಗಡೆಯವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ” ಎಂದು ಹೇಳಿದರು.
ಭುವನೇಶ್ವರಿ ಹೆಗಡೆಯವರು ಪ್ರಶಸ್ತಿಯನ್ನು ಸ್ವೀಕರಿಸಿ “ನಾನು ಯಾರನ್ನು ಮಾದರಿಯಾಗಿಸಿಕೊಂಡಿದ್ದೇನೊ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಪಾಲಿಗೆ ತುಂಬಾ ಖುಷಿಯ ವಿಚಾರ. ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದನ್ನು ಎಲ್ಲೋ ಸುನಂದಮ್ಮ ಅವರು ನೋಡುತ್ತಿದ್ದಾರೆ ಎಂದು ನನಗನ್ನಿಸುತ್ತದೆ. ಯಾಕೆಂದರೆ ಹಾರ, ತುರಾಯಿ, ಪ್ರಶಸ್ತಿ ಮತ್ತು ಪುರಸ್ಕಾರಗಳ ಬಗ್ಗೆ ಅವರು ತುಂಬಾ ಕಠೋರವಾಗಿ ಮಾತನಾಡುತ್ತಿದ್ದವರು. ಆದರೆ ನಾನು ಅವರ ಅನುಯಾಯಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಕೂಡ ಎಲ್ಲೋ ಅವರು ಏನೆಂದುಕೊಳ್ಳುತ್ತಾರೋ ಎನ್ನುವ ಭಾವನೆ ಉಂಟಾಗುತ್ತಿದೆ. ಡುಂಡಿರಾಜ್ ಮತ್ತು ಎಂ. ನರಸಿಂಹಮೂರ್ತಿ ಇವರು 35 ವರ್ಷಗಳಿಂದ ನನ್ನ ಜೊತೆಗಿದ್ದಾರೆ. ಹಾಸ್ಯವೇನೋ ಸರಿ ಆದರೆ ಬಡವರನ್ನು ಅಥವಾ ಅಂಗವಿಕಲರನ್ನು ನೋಡಿ ಅವರ ಮೇಲೆ ಹಾಸ್ಯ ಮಾಡಬಾರದು. ಅದು ಅಮಾನವೀಯ ಹಾಸ್ಯವಾಗುತ್ತದೆ. ನಾನು ಎಂ.ಎ. ಓದುತ್ತಿರುವಾಗ ಒಂದು ಸಲ ಟೆಲಿಗ್ರಾಮ್ ಬರುತ್ತೆ. ಆ ಟೆಲಿಗ್ರಾಂ ಕೊಟ್ಟವರು ಅನುಪಮ ನಿರಂಜನ್ ಮತ್ತು ಕಮಲ ರಾಮಸ್ವಾಮಿ. ಅವರು ನನ್ನನ್ನು ಕರೆಸಿಕೊಂಡು ‘ನಿನ್ನ ಪುಸ್ತಕ ಓದಿದ್ದೇವೆ, ನೀನು ಸಾಹಿತ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ಆ ಕ್ಷೇತ್ರದಲ್ಲೇ ನಿನ್ನನ್ನು ತೊಡಗಿಸಿಕೊ’ ಎಂದು ಕಿವಿಮಾತು ಹೇಳಿದರು. ಮುದ್ರಣ ಮಾಧ್ಯಮದಲ್ಲಿ ಹಾಸ್ಯ ಬರಹ ಪ್ರಕಟವಾದುದು ನನ್ನ ಪಾಲಿನ ದೊಡ್ಡ ಖುಷಿ” ಎಂದರು.
ಹಾಸ್ಯ ಸಾಹಿತಿ ಎಚ್. ಡುಂಡಿರಾಜ್ ಮಾತನಾಡಿ, ”ಇತ್ತೀಚಿನ ದಿನಗಳಲ್ಲಿ ಹಾಸ್ಯ ಸಾಹಿತ್ಯವನ್ನು ಸಾಹಿತ್ಯದಿಂದ ದೂರ ಮಾಡುವ ಹುನ್ನಾರಗಳು ನಡೆಯುತ್ತಿವೆ. ಇದನ್ನು ಸರಕಾರ-ಸಾರ್ವಜನಿಕರು, ಸಾಹಿತಿಗಳು ಮನಗಂಡು ಹಾಸ್ಯ ಸಾಹಿತ್ಯವನ್ನು ಸಾಹಿತ್ಯದ ಒಂದು ಭಾಗವಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
ಗಣೇಶ್ ಚಾರಿಟೇಬಲ್ ಟ್ರಸ್ಟಿನಿಂದ ಬಡ ವಿದ್ಯಾರ್ಥಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಡಾಕ್ಟರ್ ಎಚ್.ಎಲ್. ಪುಷ್ಪ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ “ನನ್ನ ಪಾಲಿಗೆ ಈ ಕಾರ್ಯಕ್ರಮ ತುಂಬಾ ನೆನಪಿಡುವಂತಹ ಕಾರ್ಯಕ್ರಮವಾಗಲಿದೆ. ಯಾಕೆಂದರೆ ಸಾಹಿತ್ಯ ಲೇಖಕಿಯ ಸಂಘದ ಮೊದಲ ಅಧ್ಯಕ್ಷರಾಗಿದ್ದ ಸುನಂದಮ್ಮ ಸ್ಮಾರಕ ಪ್ರತಿಷ್ಠಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲು ಅವಕಾಶ ದೊರತುದು ನನ್ನ ಪಾಲಿಗೆ ಭಾಗ್ಯವೇ ಸರಿ” ಎಂದು ಸಂತೋಷ ವ್ಯಕ್ತ ಪಡಿಸಿದರು.
ನಂತರ ಶ್ರೀ ಸಿ.ಆರ್.ಚಂದ್ರಶೇಖರ್ ಅವರು ಈ ಕಾರ್ಯಕ್ರಮದ ಕುರಿತು ಒಂದೆರಡು ಮಾತುಗಳನ್ನು ಆಡಿದರು. “ಹಾಸ್ಯ ಸಾಹಿತ್ಯ ಅನ್ನೋದು ತುಂಬಾ ಕಷ್ಟಕರವಾದ ಕ್ಷೇತ್ರ. ಹಾಸ್ಯ ಸಾಹಿತ್ಯ ಸೃಷ್ಟಿ ಎನ್ನುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ‘ಹಾಸ್ಯ ಮತ್ತು ಸಾಹಿತ್ಯ ಸೃಷ್ಟಿ’ ಎನ್ನುವ ವಿಷಯದ ಮೇಲೆ ವಿಚಾರ ಗೋಷ್ಠಿಗಳು, ಕಮ್ಮಟಗಳು ಆಗುವುದರ ಮೂಲಕ ಯುವಜನರಲ್ಲಿ ಸದಭಿರುಚಿಯ ಹಾಸ್ಯ ಪ್ರಜ್ಞೆ ಹುಟ್ಟುವಂತೆ ಮಾಡಬೇಕು” ಎಂದರು. ನಂತರ ಕಾರ್ಯಕ್ರಮಕ್ಕೆ ಮುಖ್ಯವಾಗಿ ಕಾರಣೀಭೂತರಾದ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲಾ ಜನರಿಗೆ ವಸುಂಧರ ಭೂಪತಿಯವರು ನೆನಪಿನ ಕಾಣಿಕೆ ಮತ್ತು ಸ್ಮರಣಿಕೆಗಳನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಮುಕ್ತಾಯ ಹೇಳಲಾಯಿತು.