ಮಂಗಳೂರು : ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ, ಶ್ರೀ ಶಾರದಾ ದೇವಿಯವರ ಹಾಗೂ ಸ್ವಾಮಿ ವಿವೇಕಾನಂದರ ಪಾವನ ಸಂದೇಶಗಳಿಂದ ಪ್ರೇರಣೆಯನ್ನು ಪಡೆದ ರಾಮಕೃಷ್ಣ ಮಿಷನ್, ಮಂಗಳೂರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತನ್ನ 75ನೇ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ಅಮೃತ ವರ್ಷಾಚರಣೆಯ ಅಂಗವಾಗಿ ಭಕ್ತಿ, ಸಂಸ್ಕೃತಿ ಮತ್ತು ಚಿಂತನೆಯ ಸಂಗಮವಾಗಿ ಎರಡು ವಿಶೇಷ ಕಾರ್ಯಕ್ರಮಗಳನ್ನು ದಿನಾಂಕ 11 ಜನವರಿ 2026ರ ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ.
ಸ್ವಾಮಿ ವಿವೇಕಾನಂದರ ತ್ಯಾಗಮಯ ಜೀವನ ಹಾಗೂ ವೀರ ಸಂನ್ಯಾಸ ಪರಂಪರೆಯನ್ನು ಆಧರಿಸಿದ ‘ತಾಳ ಮದ್ದಳೆ –ವೀರ ಸಂನ್ಯಾಸಿ’ ಎಂಬ ಮನಮುಟ್ಟುವ ಸಾಂಸ್ಕೃತಿಕ ಕಾರ್ಯಕ್ರಮವು ಮಧ್ಯಾಹ್ನ 1-00 ಗಂಟೆಗೆ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ತಾಳಮದ್ದಳೆ ಕಾರ್ಯಕ್ರಮವನ್ನು ಹಿಮ್ಮೇಳದಲ್ಲಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಮತ್ತು ಬಳಗ ಹಾಗೂ ಮುಮ್ಮೇಳದಲ್ಲಿ ಶ್ರೀ ವಾಸುದೇವ ರಂಗ ಭಟ್, ಶ್ರೀ ಪವನ್ ಕಿರಣ್‌ಕೆರೆ, ಶ್ರೀ ಗಣೇಶ ಕನ್ನಡಿಕಟ್ಟೆ, ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಮತ್ತು ಶ್ರೀ ಸದಾಶಿವ ಆಳ್ವ ತಲಪಾಡಿ ಇವರು ನಿರ್ವಹಿಸಲಿದ್ದಾರೆ.
ಇದಾದ ಬಳಿಕ ಸಂಜೆ 5-00 ಗಂಟೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ‘ವಿವೇಕ ಚಿಂತನ’ ಎಂಬ ವಿಶೇಷ ಚಿಂತನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉದ್ಘಾಟನಾ ಮತ್ತು ಸಭಾ ಕಾರ್ಯಕ್ರಮವನ್ನು ಮಂಗಳೂರಿನ ಕ್ಯಾಂಪ್ಕೋ ಇದರ ಅಧ್ಯಕ್ಷರಾದ ಶ್ರೀ ಸತೀಶ್ಚಂದ್ರ ಎಸ್.ಆರ್. ಇವರು ಉದ್ಘಾಟಿಸಲಿದ್ದು, ಮಂಗಳೂರು ರಾಮಕೃಷ್ಣ ಮಿಷನ್ ಇದರ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ ಜಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಮತ್ತು ವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆ (ಬೆಂಗಳೂರು) ಇವರು ‘ವೀರ ಸಂನ್ಯಾಸಿ ವಿವೇಕಾನಂದ–ಯುಗಪ್ರೇರಕ ಸಂದೇಶ’ ವಿಷಯದ ಮೇಲೆ ಪ್ರೇರಣಾದಾಯಕ ಉಪನ್ಯಾಸ ಹಾಗೂ ಸಂವಾದವನ್ನು ನಡೆಸಿಕೊಡಲಿದ್ದಾರೆ. ರಾಮಕೃಷ್ಣ ಮಿಷನ್, ಮಂಗಳೂರು ತನ್ನ ಅಮೃತ ವರ್ಷಾಚರಣೆಯ ಅಂಗವಾಗಿ ಆಯೋಜಿಸಿರುವ ಈ ಸಾಂಸ್ಕೃತಿಕ–ಚಿಂತನಾ ಕಾರ್ಯಕ್ರಮಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶ ಹೊಂದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಿಷನ್ ವಿನಂತಿಸಿದೆ.


