ಮುಂಬಯಿ : ಮುಂಬಯಿ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ಮಂದಿರದಲ್ಲಿ ದಿನಾಂಕ 09 ಆಗಸ್ಟ್ 2025ರಂದು ಅಜೆಕಾರು ಕಲಾಭಿಮಾನಿ ಬಳಗದ 24ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸರಣಿಯ ಉದ್ಘಾಟನಾ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಇವರು ಮಾತನಾಡಿ “ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟವಾದ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು – ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿರುವ ಯಕ್ಷಗಾನ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಗಮನ ಸೆಳೆದಿದೆ. ಅದು ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು. ಅದರ ಮೌಖಿಕ ವಿಭಾಗವಾದ ತಾಳಮದ್ದಳೆಯನ್ನು ಮುಂಬಯಿಯಲ್ಲಿ ಜನಪ್ರಿಯಗೊಳಿಸಿರುವ ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
ಮುಂಬಯಿಯ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿಯವರು ಶ್ರೀದೇವಿ ಸನ್ನಿಧಿಯಲ್ಲಿ ದೀಪ ಬೆಳಗಿ 2024-25ನೇ ಸಾಲಿನ ಸರಣಿ ತಾಳಮದ್ದಳೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ “ಮುಂಬಯಿಯಲ್ಲಿ ಯಕ್ಷಗಾನಕ್ಕೆ ದೀರ್ಘ ಪರಂಪರೆಯಿದೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಅಜೆಕಾರು ಕಲಾಭಿಮಾನಿ ಬಳಗದ ದೊಡ್ಡ ಸಾಧನೆ” ಎಂದು ನುಡಿದರು.
ಅಂಬಿಕಾ ಮಂದಿರದ ಧರ್ಮದರ್ಶಿ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್ಟರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ವಹಿಸಿದ್ದರು. ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ತಂಡದ ಪ್ರಮುಖ ಅರ್ಥಧಾರಿ, ವಿಮರ್ಶಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿ, ವಂದಿಸಿದರು. ದೇವಳದ ಅರ್ಚಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ಊರಿನ ಪ್ರಸಿದ್ಧ ಕಲಾವಿದರಿಂದ ‘ಕುರುಕ್ಷೇತ್ರದಲ್ಲಿ ಕೌರವ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿದ್ದರು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ ಹಾಗೂ ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಚೆಂಡೆ – ಮದ್ದಳೆ ನುಡಿಸಿದರು.