ಕುಂದಾಪುರ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ದಿನದ ಪ್ರಯುಕ್ತ ದಿನಾಂಕ 26 ಫೆಬ್ರವರಿ 2025ರಂದು ತಾಳಮದ್ದಳೆ-ಯಕ್ಷಗಾನ-ಭರತನಾಟ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ತಂಡದ ಭಾಗವತರಾದ ಗುರು ಲಂಬೋದರ ಹೆಗಡೆ ನಿಟ್ಟೂರು ಇವರನ್ನು ಗೌರವಿಸಲಾಯಿತು.
ತಂಡವನ್ನು ಗೌರವಿಸಿ ಮಾತನಾಡಿದ ಆಡಳಿತ ಮಂಡಳಿಯ ಮುಖ್ಯಸ್ಥ ವಾಸುದೇವ ಯಡಿಯಾಳ್ “ಕನ್ನಡ ಭಾಷಾಭಿವೃದ್ಧಿಯ ಏಕೈಕ ಕಲೆ ಯಕ್ಷಗಾನ. ಮಕ್ಕಳ ಮೂಲಕ ಕಲೆಯನ್ನು ಸಾಂಕ್ರಾಮಿಕವಾಗಿ ಹರಡಿಸುವ ಕಾರ್ಯ ಶ್ಲಾಘನೀಯ. ಇತಿಹಾಸ ಪ್ರಸಿದ್ಧವಾದ ಪುರಾತನ ದೇಗುಲದಲ್ಲಿ ಈಶನಿಗೆ ಪ್ರಿಯವಾದ ಕಲೆಯ ವಿವಿಧ ಆಯಾಮಗಳ ಪ್ರದರ್ಶನ ಶಿವರಾತ್ರಿಯಂದು ಅತ್ಯಂತ ಸೂಕ್ತ. ಮಕ್ಕಳಿಗೆ ಅವಕಾಶ ಕಲ್ಪಿಸುವುದರಿಂದ ದೇವರಿಗೆ ಪ್ರಿಯವಾಗುವುದು ಸತ್ಯ” ಎಂದರು.
“ಕಲೆಗೂ, ಧಾರ್ಮಿಕ ಕಾರ್ಯಕ್ರಮಕ್ಕೂ ಬಹಳ ಸಾಮ್ಯತೆ. ಪ್ರತೀ ವರ್ಷ ನೂರಾರು ಮಕ್ಕಳು ಕುಂದೇಶ್ವರದ ರಂಗದಲ್ಲಿ ಗೆಜ್ಜೆ ಕಟ್ಟುತ್ತಾರೆ. ಬಹಳ ಹಿಂದಿನಿಂದಲೂ ಪ್ರಸಿದ್ಧತೆಯನ್ನು ಪಡೆದುಕೊಂಡ ಕುಂದೇಶ್ವರ ದೇಗುಲ ಸಾಂಸ್ಕೃತಿಕವಾಗಿಯೂ ಹೆಸರಾಗಿದೆ” ಎಂದು ಆಡಳಿತ ನಿರ್ದೇಶಕ ಜಿ.ಎಸ್. ಭಟ್ ಹೇಳಿದರು. ರಾಘವೇಂದ್ರ ಹೆಗಡೆ ಯಲ್ಲಾಪುರ, ಕುಮಾರ್ ಅಮೀನ್ ಕೊಕ್ಕರ್ಣಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ಯಶಸ್ವೀ ಕಲಾವೃಂದದ ಮಕ್ಕಳ ಮೇಳದವರಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನವಾಯಿತು.