ಕಾಸರಗೋಡು : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ-2024 ಇದರ ಅಂಗವಾಗಿ ಕನ್ನಡ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ,ಸ್ಮರಣಿಕೆ ಹಾಗೂ ಪುಸ್ತಕಗಳೊಂದಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿನಾಂಕ 15 ಡಿಸೆಂಬರ್ 2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಣ್ಣ ಕಥೆ ಹೇಳುವ ಸ್ಪರ್ಧೆ, ಚಿತ್ರ ರಚನೆ, ರಸಪ್ರಶ್ನೆ, ಛದ್ಮವೇಷ, ಏಕಪಾತ್ರಾಭಿನಯ, ಕನ್ನಡ ವಾರ್ತಾ ಪತ್ರಿಕೆ ವಾಚನ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಮಾತನಾಡಿ “ದ್ವಿತೀಯ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ – 2025 ಮತ್ತು ಕೇರಳ- ಕರ್ನಾಟಕ ಮಕ್ಕಳ ಉತ್ಸವವನ್ನು 2025 ನವೆಂಬರ್ 1 ಮತ್ತು 2 ರಂದು ಎರಡು ದಿನಗಳ ಕಾಲ ಏರ್ಪಡಿಸಲಾಗುವುದು ಮತ್ತು ಈ ಕುರಿತು ವಿದ್ಯಾರ್ಥಿಗಳ, ಹೆತ್ತವರ, ಪೋಷಕರ ಹಾಗೂ ಅಧ್ಯಾಪಕರಿಂದ ಸಲಹೆ ಸೂಚನೆ ಪ್ರಸ್ತಾವನೆಗಳನ್ನು ಸ್ವೀಕರಿಸಿದರು.
ಸಮ್ಮೇಳನದ ಮೊದಲ ದಿನ ಕಾಸರಗೋಡು ಜಿಲ್ಲೆಯ ಸುಮಾರು 200 ಶಾಲಾ ಕಾಲೇಜಿನ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು, ಮಕ್ಕಳ ಕವನ, ಸಣ್ಣ ಕಥೆ, ಚುಟುಕು, ಪ್ರಬಂಧಗಳ ರಚನೆ, ಮಕ್ಕಳಿಂದ ಚಿತ್ರ ಕಲಾ ರಚನೆ, ಸಮೂಹ ಕನ್ನಡ ಗೀತಾ ಗಾಯನ, ಕುಣಿತ ಭಜನೆ, ಯಕ್ಷಗಾನ, ನಾಟಕ ಪ್ರದರ್ಶನ ಹಾಗೂ ಮಕ್ಕಳಿಗಾಗಿ ತರಬೇತಿ – ಕಮ್ಮಟಗಳನ್ನು ಸಂಘಟಿಸುವುದು, ಕೇರಳ ಕರ್ನಾಟಕ ರಾಜ್ಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುವುದು. ಎರಡನೇ ದಿನ ಗಣ್ಯರ ಜೊತೆ ಸುಮಾರು 2000 ವಿದ್ಯಾರ್ಥಿಗಳು ಕಾಸರಗೋಡು ಕೂಡ್ಲುವಿನ ರಾಮದಾಸ ನಗರದಿಂದ ಕನ್ನಡ ಗ್ರಾಮಕ್ಕೆ ಮೆರವಣಿಗೆಯಲ್ಲಿ ಸಾಗಿ, ಸಮ್ಮೇಳನದ ಉದ್ಘಾಟನೆ, ವಿವಿಧ ಮಳಿಗೆಗಳ ಉದ್ಘಾಟನೆ, ರಾಜ್ಯಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ, ರಾಜ್ಯಮಟ್ಟದ ಸಣ್ಣ ಕಥಾ ಗೋಷ್ಠಿ, ರಾಜ್ಯಮಟ್ಟದ ಚುಟುಕು ವಾಚನ ಗೋಷ್ಠಿ, ಮಕ್ಕಳ ಸಾಹಿತ್ಯ – ವಿಶೇಷೋಪಾನ್ಯಾಸ, ಮೊದಲ ದಿನದ ವಿವಿಧ ಸ್ಪರ್ಧೆಯ ವಿಜೇತರಾದ ಮಕ್ಕಳ ಫಲಿತಾಂಶ ಘೋಷಣೆ, ಸಮ್ಮೇಳನದ ವಿವಿಧ ಸ್ಪರ್ಧಾ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಮಕ್ಕಳನ್ನು ಗುರುತಿಸಿ ಅಭಿನಂದಿಸಲಾಗುವುದು.” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾಸರಗೋಡಿನ ವಿಶ್ರಾಂತ ಪ್ರಾಂಶುಪಾಲ ಡಾ. ಕೆ. ಕಮಲಾಕ್ಷ ವಿದ್ಯಾನಗರ, ಕಾಸರಗೋಡು ನಗರ ಸಭೆಯ ಕೌನ್ಸಿಲರ್ ಶಾರದಾ ಕೆ., ನಗರಸಭೆ ಮಾಜಿ ಕೌನ್ಸಿಲರ್ ಶಂಕರ್ ಕೆ. ಜೆ. ಪಿ. ನಗರ, ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕು. ಹರ್ಷಿತ ಪಿ., ಶ್ರೀ ಭಾರತಿ ವಿದ್ಯಾಪೀಠ ಬದಿಯಡ್ಕ ಇಲ್ಲಿನ ಸಹ ಅಧ್ಯಕ್ಷರಾದ ಕು. ಶಿವಾನಿ ಕೂಡ್ಲು ಹಾಗೂ ಶ್ರೀ ಗೋಪಾಲಕೃಷ್ಣ ಕೂಡ್ಲು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನಿತ್ತು ಗೌರವಿಸಿದರು.
ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಇಲ್ಲಿನ ಅಧ್ಯಾಪಕ ಕಿರಣ್ ಪ್ರಸಾದ್ ಪಿ. ಜಿ. ಕೂಡ್ಲು, ಮಂಜೇಶ್ವರ ಚಿಪ್ಪಾರು ಎಚ್. ಎ. ಯು. ಪಿ. ಶಾಲೆಯ ಅಧ್ಯಾಪಕಿ ತಾಹಿರಾ ಬಿ. ಶುಭಾಶಂಸನೆಗೈದರು. ಕು. ಕೃಪಾನಿಧಿ ಕನ್ನಡ ಗ್ರಾಮ, ಕು. ಚಿತ್ರಿತ ಕೆ. ಎಂ. ಪ್ರಾರ್ಥಿಸಿ, ಕಾರ್ಯದರ್ಶಿ ಕಾವ್ಯ ಕುಶಲ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಗುರುಪ್ರಸಾದ್ ಕೋಟೆಕಣಿ, ಕುಶಾಲ್ ಕುಮಾರ್ ಪಾರೆಕಟ್ಟೆ, ಜಗದೀಶ್ ಕೂಡ್ಲು, ರಾಧಾ ಶಿವರಾಮ, ಸವಿತಾ ಕಿಶೋರ್ ಹಾಗೂ ಅನುಷಾ ಸಹಕರಿಸಿದರು.