ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2023-24ನೇ ಸಾಲಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 24-05-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ “ಯಕ್ಷಗಾನ ಶ್ರೀಮಂತ ಕಲೆಯಾಗಿದ್ದು, ಬದುಕಿನಲ್ಲಿ ಸಂಸ್ಕಾರ ಕಲಿಸುತ್ತದೆ. ಶಿಕ್ಷಣವು ಜೀವನ ನಡೆಸಲು ಸಂಪಾದನೆಗೆ ದಾರಿ ಮಾಡಿಕೊಟ್ಟರೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಯಕ್ಷಗಾನ ದಾರಿ ದೀಪವಾಗಿದೆ. ಶಿಕ್ಷಣ ನನ್ನ ಕೈ ಸೇರದಿದ್ದರೂ ಯಕ್ಷಗಾನ ನನ್ನ ಹೃದಯ ಸೇರಿದೆ. ಛಲ ಹಾಗೂ ಅಭಿಮಾನಿಗಳ ಪ್ರೋತ್ಸಾಹ ಈ ಕ್ಷೇತ್ರದಲ್ಲಿ ನನ್ನನ್ನು ಯಶಸ್ವಿಗೊಳಿಸಿದೆ. ಜಾತಿ, ಧರ್ಮ, ಭೇದಭಾವ ಮರೆತು ಮನುಷ್ಯತ್ವ ಮೈಗೂಡಿಸಿಕೊಳ್ಳಿ. ಒಳ್ಳೆಯತನ ಎಂದಿಗೂ ಎಲ್ಲರ ಕೈ ಹಿಡಿಯುತ್ತದೆ.” ಎಂದರು.
ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲಿನ ಪ್ರಾಂಶುಪಾಲೆ ಡಾ. ಮಾಲಿನಿ ಎನ್. ಹೆಬ್ಬಾರ್ ಮಾತನಾಡಿ “ಜೀವನದಲ್ಲಿ ಸಮಯ ಪ್ರಜ್ಞೆ ಇದ್ದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಹಾಗಾಗಿ ಸಮಯ ಪ್ರಜ್ಞೆ ಕೂಡ ಒಂದು ಪ್ರತಿಭೆ ಇದ್ದಂತೆ. ಸುತ್ತಲಿನ ಪರಿಸರದಲ್ಲಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿ ಬೆಳೆಯಲಾರಂಭಿಸಿದಾಗ ಯಶಸ್ಸು ಹತ್ತಿರವಾಗುತ್ತದೆ.” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಗಣರಾಜ್ಯೋತ್ಸವ ರಾಷ್ಟ್ರೀಯ ಪಥ ಸಂಚಲನದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ರಾಷ್ಟ್ರೀಯ ಸೇವಾ ಸ್ವಯಂ ಸೇವಕಿ ನಂದಿತಾ ಎಸ್., ಎನ್. ಸಿ. ಸಿ. ನೌಕಾದಳದ ಸೀನಿಯರ್ ಕೆಡೆಟ್ ಕ್ಯಾಪ್ಟನ್ ಮಣಿಕಂಠ ಮಾದರ್, ಓವರ್‌ಸೀಸ್ ಡೆವೆಲಂಪ್‌ಮೆಂಟ್ ಕ್ಯಾಂಪ್‌ನಲ್ಲಿ ರಾಜ್ಯ ಮತ್ತು ಗೋವಾ ಡೈರೆಕ್ಟರ್‌ಗಳನ್ನು ಪ್ರತಿನಿಧಿಸಿದ್ದಕ್ಕಾಗಿ ಹಾಗೂ ಎನ್. ಸಿ. ಸಿ. ಭೂದಳದ ಶೂಟಿಂಗ್ ಚಾಂಪಿಯನ್ ಕ್ಯಾಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಗೌತಮಿಯನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿವಿಧ ಸಂಘ ಹಾಗೂ ವಿಭಾಗಗಳ ವತಿಯಿಂದ ನಡೆದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್, ಲಲಿತಾ ಕಲಾ ಸಂಘದ ಸಹ ನಿರ್ದೇಶಕಿ ಡಾ. ಮೀನಾಕ್ಷಿ ಎಂ. ಎಂ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವಿತ್ ಗಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ರೈ, ಸಹ ಕಾರ್ಯದರ್ಶಿ ಪ್ರಗತಿ, ಲಲಿತ ಕಲಾ ಸಂಘದ ಕಾರ್ಯದರ್ಶಿ ವಿಕಾಸ್ ರಾಜ್, ಸಹ ಕಾರ್ಯದರ್ಶಿ ಕೇಸರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.