ಬೆಂಗಳೂರು : ಜಂಗಮ ಕಲೆಕ್ಟಿವ್ ಆಯೋಜನೆಯಲ್ಲಿ ‘ಪಯಣ’ ಪ್ರಸ್ತುತ ಪಡಿಸುವ ಶ್ರೀಜಿತ್ ಸುಂದರಂ ನಿರ್ದೇಶನದ ‘ತಲ್ಕಿ’ ನಾಟಕದ ಪ್ರದರ್ಶನವು ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ದಿನಾಂಕ 15-09-2023ರಂದು ಸಂಜೆ ಗಂಟೆ 7.30ಕ್ಕೆ ನಡೆಯಲಿದೆ.
ನಾಟಕದ ಕುರಿತು :
‘ತಲ್ಕಿ’ ನಾಟಕವು ಸಮುದಾಯದವರ ಜೀವನ ಕಥೆಗಳ ಆಧಾರದ ಸತ್ಯ ಕಥೆಗಳು. ಬರವಣಿಗೆ, ಸಮಾಜಸೇವೆ, ಸಮುದಾಯ ಮುಖ್ಯಸ್ಥರು, ಅಮ್ಮಂದಿರು, ಹೀಗೆ ಸಮಾಜದ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ, ಐವತ್ತು ವರ್ಷ ದಾಟಿರುವ ಮಂಗಳಮುಖಿಯರು ತಮ್ಮ ಈಡೇರದ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ನಟನೆ ಹಾಗೂ ರಂಗ ಪ್ರಕ್ರಿಯೆಗಳ ನೆರವಿನಿಂದ ಹೋರಾಡಲು ಅವಕಾಶ ಕಲ್ಪಿಸಿಕೊಡುವ ವಿಶಿಷ್ಟ ಯತ್ನ ಈ ನಾಟಕ. ಇವರೆಲ್ಲರಿಗೂ ಇರುವ ಒಂದು ಸಾಮ್ಯತೆ ಎಂದರೆ ಸಮಯ ಹಾಗೂ ಸಮಾಜ ನೀಡಿರುವ ಗಾಯದ ಗುರುತುಗಳು.
ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳ ಜೊತೆ ಅವಿನಾಭಾವ ಸಂಬಂಧವಿರುವ ಅವರ ದೇಹದ ಮೇಲಿನ ಗುರುತುಗಳು, ಆ ಪ್ರದೇಶಗಳ ಗುರುತುಗಳಾಗಿ ಮಾರ್ಪಟ್ಟಿವೆ ಎನ್ನಬಹುದು. ಇಂತಹ ಹಿಂಸೆ, ನೋವಿನ ನಡುವೆಯೂ, ಹೋರಾಡಿ ಬದುಕುವ ಅವರ ಛಲವನ್ನು, ಅವರ ಈಡೇರದ ನಿಜದ ಕನಸುಗಳನ್ನು, ಅವರ ಆಸೆ, ನಗು, ಅಳು, ಅಪಮಾನ, ಸ್ವಾಭಿಮಾನ, ಆತ್ಮಸ್ಥೈರ್ಯಗಳ ಜೊತೆ ಹೆಣೆಯುವ ಪ್ರಯತ್ನ ಈ ನಾಟಕ.
‘ತಲ್ಕಿ’ ನಾಟಕದ ಮಂಗಳಮುಖಿ ನಟರು, ತಮ್ಮ ಮೆಚ್ಚುಗೆಯ ಅಡುಗೆ ಮಾಡುತ್ತಾ, ಹಾಡುತ್ತಾ, ಕಥೆಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಜೀವನದ ಒಂದು ತುಣುಕನ್ನು ನಮಗೆ ಉಣಬಡಿಸಲಿದ್ದಾರೆ. ಇದರ ಮೂಲಕ ಅವರ ಸಮುದಾಯದ ವಿಶಿಷ್ಟ ಆಚರಣೆಗಳು, ಜೀವನ ಶೈಲಿ, ಸಂಸ್ಕೃತಿ, ಪರಿವಾರ ರಚನೆ ಹಾಗೂ ಇವುಗಳಲ್ಲಿ ತುಂಬಿರುವ ಪ್ರೀತಿ, ಮಮತೆ ಹಾಗೂ ಕರುಣೆಯ ಭಾವಗಳನ್ನು ರಂಗದ ಮೇಲೆ ತರುವ ಅಪರೂಪದ ಪ್ರಯೋಗವಾಗಿ ಈ ನಾಟಕ ರೂಪುಗೊಂಡಿದೆ.
ಶ್ರಿಜಿತ್ ಸುಂದರಂ ನಿರ್ದೇಶನ ಈ ನಾಟಕಕ್ಕೆ ರೇವಂತ್ ಅಸೋಸಿಯೇಟ್ ನಿರ್ದೇಶಕರಾಗಿ ಹಾಗೂ ರೇವತಿ ಎ. ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ಬೆಳಕು ಮತ್ತು ವಿನ್ಯಾಸ ವಿಠಲ್ ಇವರು ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ರಿಜಿತ್ ಮತ್ತು ಸಂಕೀರ್ತಿ ಇವರದ್ದು. ಸಂದೀಪ್ ಮತ್ತು ಮದನ್ ಸಂಗೀತ ಸಂಯೋಜಿಸಿದ್ದು, ಪ್ರಸಾಧನ ಕೌಶಲ್ಯ ಶಂಕರ್ ಅವರದ್ದು. ಚಾಂದಿನಿ ಪಯಣ ಈ ನಾಟಕದ ನಿರ್ಮಾಣ ನಿರ್ವಹಣೆ ವಹಿಸಲಿದ್ದಾರೆ. ನಾಟಕದಲ್ಲಿ ರಂಗ ಮೇಲೆ ಶಾಂತಮ್ಮ, ಲಕ್ಷ್ಮಿಯಮ್ಮ, ರೇವತಿ ಎ., ಭಾನಮ್ಮ, ಶೋಭನಾ ಕುಮಾರಿ, ಸರವನ ಮತ್ತು ಚಾಂದಿನಿ ನಟಿಸಲಿದ್ದು, ರಂಗ ಹಿಂದೆ ಜನ್ನಿ ಭಾರತಿ, ಅರುವಿ, ಶರನ್, ಸತೀಶ್ ಮತ್ತು ತ್ರಿಮೂರ್ತಿ ಸಹಕರಿಸಲಿದ್ದಾರೆ.
ಪ್ರೀತಿ ಹಾಗೂ ಅರಿವು ತುಂಬಿರುವ ಅಜ್ಜಿಕಥೆಗಳನ್ನು ಕೇಳುವ ಮುಗ್ಧ ಮಕ್ಕಳಾಗಿ, ಈ ಕಥೆಯನ್ನು ನೋಡಿ ಆನಂದಿಸಲು, ನಮ್ಮ ಬಂಧುಗಳೇ ಆದ ನಿಮ್ಮನ್ನು ಅಮಂತ್ರಿಸುತ್ತಿದ್ದೇವೆ.