ಉಡುಪಿ : ಸುಮನಸಾ ಕೊಡವೂರು ಆಯೋಜಿಸುವ ‘ರಂಗಹಬ್ಬ- 13’ ಇದರ ಅಂಗವಾಗಿ ಬೆಂಗಳೂರಿನ ಪಯಣ ತಂಡ ಅಭಿನಯಿಸುವ ತಲ್ಕಿ ನಾಟಕದ ಪ್ರದರ್ಶನವು ದಿನಾಂಕ 23 ಫೆಬ್ರವರಿ 2025ರಂದು ಉಡುಪಿಯ ಅಜ್ಜರಕಾಡು ಭುಜಂಗಪಾರ್ಕ್ ಬಯಲುರಂಗ ಮಂದಿರದಲ್ಲಿ ನಡೆಯಲಿದೆ.
ಈ ನಾಟಕದ ಎಲ್ಲಾ ಪಾತ್ರಧಾರಿಗಳು ತೃತೀಯ ಲಿಂಗಿಗಳೇ ಆಗಿದ್ದು, ಅದೂ 55 ವರ್ಷ ದಾಟಿದವರು. ಇದು ಯಾವುದೇ ಕಥೆಯನ್ನು ಆಧರಿಸಿದ ನಾಟಕವಾಗಿರದೆ ಅವರ ಬದುಕಿನ ಕಥೆಯನ್ನೇ, ಅವರು ಬಾಲ್ಯದಲ್ಲಿ ಕಂಡ ಕನಸುಗಳನ್ನೇ ನಾಟಕವಾಗಿಸಿದ ಈ ನಾಟಕ. ಅವರ ವಿಶಿಷ್ಟ ಖಾದ್ಯವಾದ ‘ತಲ್ಕಿ’ ಎಂಬ ಹೆಸರಿನಿಂದ ರೂಪುಗೊಂಡ ಈ ನಾಟಕ, ಅವರ ಬದುಕಿನ ತೊಳಲಾಟಗಳು, ಅವರೊಳಗೆ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಾರೆ, ಅವರ ಬದುಕಿನಲ್ಲಿರುವ ಆಚಾರ ವಿಚಾರಗಳು, ಅವರ ಪ್ರೀತಿ, ಪ್ರೇಮ, ನೋವು, ನಲಿವು, ಬದುಕಬೇಕೆಂಬ ಆಸೆ ಮತ್ತು ಅವರ ಕುಟುಂಬ ಅವರನ್ನು ನಡೆಸಿಕೊಂಡ ರೀತಿ ಇದೆಲ್ಲವನ್ನೂ ಒಂದು ಕಥೆಯಾಗಿ ಹೇಳಿಕೊಳ್ಳುತ್ತಾ ಸಾಗುತ್ತದೆ. 55 ವರ್ಷ ದಾಟಿದ ಈ ಹಿರಿಯ ಜೀವಗಳು ತಮ್ಮ ಕಥೆ ಹೇಳುತ್ತಿದ್ದರೆ ನಮ್ಮದೇ ಮನೆಯ ಯಾರೋ ಹಿರಿಯರು ತಮ್ಮ ನೆನಪುಗಳ ಬುತ್ತಿಯನ್ನು ನಮ್ಮ ಮುಂದೆ ತೆರೆದಿಟ್ಟಂತೆ ಭಾಸವಾಗುತ್ತದೆ.
ಶ್ರೀಜಿತ್ ಸುಂದರಂ ಈ ನಾಟಕವನ್ನು ನಿರ್ದೇಶಿಸಿದ್ದು, ‘ಬದುಕು ಬಯಲು’ ಖ್ಯಾತಿಯ ರೇವತಿ ಏ. ಸಹಾಯಾಕ ನಿರ್ದೇಶಕಿ ಯಾಗಿ ಸಹಕರಿಸಿದ್ದಾರೆ. ಸಂದೀಪ್ ಕುಮಾರ್ ಸಂಗೀತ ಸಂಯೋಜಿಸಿದ್ದು, ಮದನ್ ಸಂಗೀತ ನಿರ್ವಹಿಸಲಿದ್ದಾರೆ. ಶ್ರೀಜಿತ್ ಸುಂದರಂ ಹಾಗೂ ಸಂಕೀರ್ತಿ ವಸ್ತ್ರ ವಿನ್ಯಾಸ ಮಾಡಿದ್ದು, ಕೌಶಲ್ಯ ಶಂಕರ್ ವರ್ಣಾಲಂಕಾರದಲ್ಲಿ ಸಹಕರಿಸಲಿದ್ದಾರೆ.