ಕಾರ್ಕಳ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಘಟಕದ ಮೂಲಕ ಸಂಯೋಜಿಸಿರುವ ‘ತಾಲೂಕು ಮಟ್ಟದ ಗಮಕ ಸಮ್ಮೇಳನ’ವು ದಿನಾಂಕ 28 ಡಿಸೆಂಬರ್ 2024ರಂದು ಪೂರ್ವಾಹ್ನ 9-00 ಗಂಟೆಗೆ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ಶ್ರೀ ವರದೇಂದ್ರ ಸದನ ಸಭಾಂಗಣದಲ್ಲಿ ನಡೆಯಲಿದೆ.
ಶ್ರೀ ವ್ಯಾಸ ರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡ್ (ರಿ.) ಕಾರ್ಕಳ ಇದರ ಅಧ್ಯಕ್ಷರಾದ ಶ್ರೀ ಎ. ಯೋಗೀಶ್ ಹೆಗ್ಡೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವ್ಯಾಖ್ಯಾನಕಾರರಾದ ಶ್ರೀ ಮುನಿರಾಜ ರೆಂಜಾಳ ಇವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿರುವರು. ಕಾರ್ಕಳದ ನಿವೃತ್ತ ಉಪನ್ಯಾಸಕರಾದ ಶ್ರೀ ರಾಮ ಭಟ್ ಎಸ್. ಇವರು ಶಿಖರ ಉಪನ್ಯಾಸ ನೀಡಲಿದ್ದಾರೆ. ಪೂರ್ವಾಹ್ನ ಗಂಟೆ 10-30ಕ್ಕೆ ‘ಸಾವಿತ್ರಿಯ ಬಾಲ್ಯ’ ಗಮಕ ವಾಚನ ವ್ಯಾಖ್ಯಾನದಲ್ಲಿ ಕಾರ್ಕಳ ಹಿರಿಯಂಗಡಿ ಎಸ್.ಎನ್.ವಿ. ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆಶ್ರಿತಾ ಇವರು ವಾಚನ ಹಾಗೂ ಕಾರ್ಕಳ ಭುವನೇಂದ್ರ ಪ್ರಥಮ ದರ್ಜೆ ಕಾಲೇಜಿನ ಕುಮಾರಿ ಸ್ಮೃತಿ ರಾವ್ ಇವರು ವ್ಯಾಖ್ಯಾನಗೈಯಲಿದ್ದಾರೆ. ಪೂರ್ವಾಹ್ನ ಗಂಟೆ 11-00ಕ್ಕೆ ‘ಕರ್ಣ ಬೇಧನ’ ಗಮಕ ವಾಚನ ವ್ಯಾಖ್ಯಾನದಲ್ಲಿ ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನನ್ಯ ಪಿ. ಪಾಟಕ್ ಇವರು ವಾಚನ ಹಾಗೂ ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಧಾರಿಣಿ ಉಪಾಧ್ಯ ಬಿ. ಇವರು ವ್ಯಾಖ್ಯಾನ ನೀಡಲಿದ್ದಾರೆ.
ಪೂರ್ವಾಹ್ನ ಗಂಟೆ 11-30ಕ್ಕೆ ಗೋಷ್ಠಿ -1ರಲ್ಲಿ ‘ಕಾವ್ಯೋಲ್ಲಾಸ’, ಅಪರಾಹ್ನ 2-00 ಗಂಟೆಗೆ ಗಮಕ ದೃಶ್ಯ ರೂಪಕ ಪ್ರಸ್ತುತಗೊಳ್ಳಲಿದೆ. ಗಂಟೆ 2-35ಕ್ಕೆ ‘ಊರ್ವಶಿಯ ಪ್ರಣಯ ಪ್ರಸಂಗ’ ಗಮಕ ವಾಚನ ವ್ಯಾಖ್ಯಾನದಲ್ಲಿ ಕೋಟ ಶ್ರೀ ವಿದ್ವಾನ್ ಶಂಭು ಭಟ್ ಮತ್ತು ಶ್ರೀಮತಿ ಪಲ್ಲವಿ ತುಂಗ ಇವರು ವಾಚನ ಹಾಗೂ ಪಡುಬಿದ್ರಿ ಡಾ. ರಾಘವೇಂದ್ರ ಭಟ್ ಇವರು ವ್ಯಾಖ್ಯಾನ ನೀಡಲಿದ್ದಾರೆ. ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.