ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದಿನಾಂಕ 28 ನವೆಂಬರ್ 2024ರಂದು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ಏರ್ಪಡಿಸಿದ ‘ಕನ್ನಡ ನಾಡು ನುಡಿ ಸಾಹಿತ್ಯ ಹಾಗೂ ಸಾಂಸ್ಕೃತಿಕ’ ರಸಪ್ರಶ್ನೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಸಾಂಸ್ಕೃತಿಕ ವೇದಿಕೆಯ ಗೌರವ ಅಧ್ಯಕ್ಷರಾದ ಶ್ರೀಮತಿ ಸುಧೀಷ್ಣಾ ಕುಮಾರಿಯವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಉದ್ದೇಶ ಹಾಗೂ ಅಗತ್ಯತೆಗಳ ಬಗ್ಗೆ ಸಭೆಗೆ ತಿಳಿಸಿದರು. ಕನ್ನಡ ನಾಡು, ನುಡಿ ಸಾಹಿತ್ಯವನ್ನು ಹಾಗೂ ನಮ್ಮ ಸಾಂಸ್ಕೃತಿಕ ವೈಭವವನ್ನು ಮಕ್ಕಳು ಅರಿಯುವ ಅಗತ್ಯವಿದೆ. ಮಕ್ಕಳಲ್ಲಿ ಓದುವ ಅಭ್ಯಾಸ ಕಡಿಮೆಯಾಗಿದೆ. ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಮಕ್ಕಳನ್ನು ಓದಲು ಹಚ್ಚುತ್ತವೆ ಇನ್ನಷ್ಟು ಜ್ಞಾನ ಸಂಪಾದಿಸುವ ಕುತೂಹಲ ಕೆರಳಿಸುವ ವಿಷಯ ಸಂಗ್ರಹಿಸುವ ಆಸಕ್ತಿಯನ್ನು ಮಕ್ಕಳಲ್ಲಿ ಮೂಡಿಸುತ್ತದೆ. ಆ ಕಾರಣದಿಂದ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಉದ್ಘಾಟನಾ ನುಡಿಗಳನ್ನು ಆಡಿದ ಡಾನ್ ರಾಮಣ್ಣ ಇವರು “ಇದೊಂದು ಉತ್ತಮವಾದ ಕಾರ್ಯಕ್ರಮ. ಇಂತಹ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಇನ್ನಷ್ಟು ಸ್ಪೂರ್ತಿ ನೀಡಲಿದೆ” ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ ವೈ. ಇವರು ಒಂದು ಪುಟ್ಟ ಕಥೆಯ ಮೂಲಕ ಮಕ್ಕಳಿಗೆ ಮಾತೃ ಭಾಷೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ ರಮೇಶ್, ನೌಕರರ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪುಟ್ಟಪ್ಪ ಕೆ.ವಿ., ಅಕ್ಷರ ದಾಸೋಹ ನೋಡಲ್ ಅಧಿಕಾರಿಯಾದ ಶ್ರೀ ಪ್ರವೀಣ್ ಸರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಶ್ರೀಮತಿ ಗಾಯತ್ರಿ ಶೇಷಗಿರಿ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಶ್ರೀಮತಿ ಚೈತ್ರ ಅರುಣ್ ಇವರು ಪ್ರಾರ್ಥಿಸಿದರು. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೀರ್ಥಹಳ್ಳಿಯ ಮಕ್ಕಳು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.
ಶ್ರೀ ಮಹಾಬಲೇಶ್ವರ ಹೆಗಡೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿಯ ಅಧ್ಯಕ್ಷರು ಪ್ರಾಸ್ತಾವಿಕ ನುಡಿಗಳನ್ನಾಡಿ ಇಂದಿನ ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀಮತಿ ಲೀಲಾವತಿಯವರು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯು ಪ್ರಾರಂಭವಾಗಿ ತನ್ನ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ನಡೆಸಿದ್ದು, ಅದರ ವರದಿಯನ್ನು ಸಭೆಗೆ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಶ್ರೀಮತಿ ರೇಣುಕಾ ಹೆಗಡೆಯವರು “ರಸಪ್ರಶ್ನೆ ಕಾರ್ಯಕ್ರಮವು ಒಂದು ಮನಸ್ಸಿನ ಕ್ರೀಡೆಯಾಗಿದೆ. ಇದನ್ನು ಆಡಲು ಜ್ಞಾನ ಮತ್ತು ಕೌಶಲ್ಯ ಎರಡು ಬೇಕು, ಇದರಿಂದ ಮನರಂಜನೆ ಮಾತ್ರವಲ್ಲದೆ ಜ್ಞಾನಾರ್ಜನೆಯು ಕೂಡ ಆಗುತ್ತದೆ. ವಿದ್ಯಾರ್ಥಿಗಳು ಹೊಸ ವಿಷಯವನ್ನು ತಿಳಿಯುವ ಕುತೂಹಲ ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ರಸಪ್ರಶ್ನೆ ಉಪಯುಕ್ತವಾಗುತ್ತದೆ. ಮಕ್ಕಳನ್ನು ಕ್ರಿಯಾಶೀಲವಾಗಿಸುತ್ತದೆ. ಸ್ಪರ್ಧಾಮನೋಭಾವವನ್ನು ಮೂಡಿಸಲು ಇದು ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಯೋಚಿಸಿ ಇದನ್ನು ಆಯೋಜಿಸಿದ್ದೇವೆ” ಎಂದು ತಿಳಿಸಿದರು.
ಸಾಂಸ್ಕೃತಿಕ ವೇದಿಕೆ ಸದಸ್ಯರಾದ ಶ್ರೀಮತಿ ಮೂಕಾಂಬಿಕಾ ಸರ್ವರನ್ನು ಸ್ವಾಗತಿಸಿ, ಶ್ರೀಮತಿ ವಿಜಯಲಕ್ಷ್ಮಿ ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ಸುರೇಖಾ ಎಸ್.ಆರ್. ಸರ್ವರನ್ನು ವಂದಿಸಿದರು. ವೇದಿಕೆ ಕಾರ್ಯಕ್ರಮದ ನಂತರ ರಸಪ್ರಶ್ನೆಯ ಡಿಜಿಟಲ್ ಸುತ್ತು ಪ್ರಾಥಮಿಕ ವಿಭಾಗ ಪ್ರೌಢಶಾಲಾ ವಿಭಾಗ ಹಾಗೂ ಪದವಿಪೂರ್ವ ಕಾಲೇಜು ವಿಭಾಗಗಳಿಗೆ ಏಕಕಾಲದಲ್ಲಿ ಪ್ರಾರಂಭಿಸಲಾಯಿತು. ಆಯ್ಕೆಯಾದ ಪ್ರತಿ ವಿಭಾಗದ ನಾಲ್ಕು ತಂಡಗಳಿಗೆ ವೇದಿಕೆಯಲ್ಲಿ ನಾಲ್ಕು ಸುತ್ತುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ ವಿಜೇತರಾದವರಿಗೆ ಪಾರಿತೋಷಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಲಾಯಿತು. ವೀಕ್ಷಕರಿಗೆ ಕುತೂಹಲ ಮೂಡಿಸಲು ಮಧ್ಯ ಮಧ್ಯ ಪ್ರೇಕ್ಷಕರಿಗೂ ಪ್ರಶ್ನೆಗಳನ್ನು ಕೇಳುವ ಮೂಲಕ ರಸಪ್ರಶ್ನೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಘವೇಂದ್ರ ತೂದೂರು, ಶ್ರೀ ಸುಬ್ರಹ್ಮಣ್ಯ ಗುಡ್ಡೇಕೇರಿ, ಶ್ರೀ ನಾಗರಾಜ್ ಅಡಿಗ ಅರಳಸುರುಳಿ ಹಾಗೂ ಸಹಾಯಕರಾಗಿ ಶ್ರೀ ನಾಗರಾಜ್ ಆರ್.ಎ. ಹಾಗೂ ಶ್ರೀ ಅರುಣ್ ಇವರು ರಸಪ್ರಶ್ನೆ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಶಾಲೆಗಳಿಂದ ನೃತ್ಯ, ರೂಪಕ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು :-
ಪ್ರಾಥಮಿಕ ಶಾಲಾ ವಿಭಾಗ : ವೈಷ್ಣವಿ ಕೆ.ಪಿ. ಮತ್ತು ಸಾನಿಧ್ಯ ಕೆ.ಡಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗೋಡು
ದ್ವಿತೀಯ ಬಹುಮಾನ : ಅನುಜ್ಞ ಆರ್.ಆರ್. ಕಶ್ಯಪ್ ಮತ್ತು ಅದ್ವಿತ್ ಗೌಡ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿ
ತೃತೀಯ ಬಹುಮಾನ : ಅದ್ವಿತಿ ಮತ್ತು ಅಭಿಷೇಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೇಹಳ್ಳಿ
ಸಮಾಧಾನಕರ ಬಹುಮಾನ : ಪೂರ್ವ ಕೆ.ಸಿ. ಮತ್ತು ದ್ರವ್ಯ ಪಿ. ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ
ಪ್ರೌಢಶಾಲಾ ವಿಭಾಗ :-
ಪ್ರಥಮ ಬಹುಮಾನ : ಏಕತಾ ಡಿ.ಎನ್. ಮತ್ತು ವಿನಯ್ ಕೆ.ಆರ್. ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆಕೇರಿ
ದ್ವಿತೀಯ ಬಹುಮಾನ : ಭಾಗ್ಯಶ್ರೀ ಟಿ.ಆರ್. ಮತ್ತು ವರ್ಷ ವೈ.ಕೆ. ಸರ್ಕಾರಿ ಪ್ರೌಢಶಾಲೆ ತೂದೂರು
ತೃತೀಯ ಬಹುಮಾನ : ಅನುಪ್ ಕೆ.ಎಸ್. ಮತ್ತು ನಮಿತಾ ಹೆಚ್.ಹೆಚ್. ಸರ್ಕಾರಿ ಪ್ರೌಢಶಾಲೆ ಕನ್ನಂಗಿ
ಸಮಾಧಾನಕರ ಬಹುಮಾನ : ಅದಿತಿ ಜಿ.ಜೆ. ಮತ್ತು ಧನ್ಯ ಜಿ.ಆರ್. ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆ
ಪದವಿ ಪೂರ್ವ ಕಾಲೇಜು ವಿಭಾಗ :-
ಪ್ರಥಮ ಸ್ಥಾನ : ಪ್ರೀತಮ್ ಬಿ.ಪಿ. ಮತ್ತು ರಜತ್ ಜಿ.ಆರ್. ಸರ್ಕಾರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ
ದ್ವಿತೀಯ ಸ್ಥಾನ : ಶ್ರೀರಕ್ಷಾ ಕೆ.ವಿ. ಮತ್ತು ದೀಪಿಕಾ ಕೆ. ರಾವ್ ವಾಗ್ದೇವಿ ಪಿಯು ತೀರ್ಥಹಳ್ಳಿ
ತೃತೀಯ ಬಹುಮಾನ : ಸಂಯುಕ್ತ ಬಿ.ಆರ್. ಗೌಡ ಮತ್ತು ಮನಸ್ವಿ ಭಟ್ ತುಂಗಾ ಪಿ.ಯು. ಕಾಲೇಜು ತೀರ್ಥಹಳ್ಳಿ
ಸಮಾಧಾನಕರ ಬಹುಮಾನ : ಶಂಕರ್ ಹಾಗೂ ಸುರೇಶ್ ಎಸ್.ಎಸ್. ತುಂಗಾ ಪಿ.ಯು. ಕಾಲೇಜು ತೀರ್ಥಹಳ್ಳಿ