ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಆಶ್ರಯದಲ್ಲಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚಿತ ‘ತಂಬೂರಿ’ ಕವನ ಸಂಕಲನ ಹಾಗೂ ‘ಕಾಯ ತಂಬೂರಿ’ ನಾಟಕ ಕೃತಿಗಳು ಕುಂಜಿಬೆಟ್ಟು ಏಡನ್ ಇನ್ ಹೋಮ್ ಸ್ಟೇ ಆವರಣದಲ್ಲಿ ದಿನಾಂಕ 21 ಮಾರ್ಚ್ 2025ರಂದು ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕವಿ ಎಚ್. ಡುಂಡಿರಾಜ್ “ಪ್ರತಿಭೆ, ಸ್ಛೂರ್ತಿ ಎರಡೂ ಕವಿಗೆ ಅಗತ್ಯವಿದ್ದು ಕಾವ್ಯ ಸಂವೇದನೆ ಬೆಳೆಸಿಕೊಳ್ಳದಿದ್ದರೆ ಉತ್ತಮ ಕವಿತೆ ರಚನೆಯಾಗದು. ಸಹಜವಾಗಿ ಬರೆದರೆ ಅದು ಕಾವ್ಯಮಯ, ಯಾರದೋ ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯ. ದೊಡ್ಡ ದೊಡ್ಡ ಶಬ್ದ, ಪ್ರಾಸ, ಛಂದಸ್ಸು, ಲಯಬದ್ಧವಾಗಿ ಬರೆದದ್ದೂ ಕೆಲವೊಮ್ಮೆ ಕವಿತೆಗಳಾಗೋದಿಲ್ಲ. ಕವಿತೆ ಸರಳವಾಗಿದ್ದು ಕೇಳುಗರ, ಓದುಗರ ಗಮನ ಸೆಳೆಯುವಂತಿರಬೇಕು. ಹಾಡು, ನಾಟಕ ಬರೆಯುವವರಿಗೆ ಇಂದು ಪ್ರೋತ್ಸಾಹ ವಿರಳವಾಗಿದೆ. ನಳ್ಳಿ ತಿರುಗಿಸಿದರೆ ನೀರು ಬರೋದಿಲ್ಲ. ಆದರೆ ವಾಟ್ಸ್ಯಾಪ್ ಆನ್ ಮಾಡಿದರೆ ನೂರಾರು ಕವಿತೆಗಳು ಬರುತ್ತವೆ. ಕವಿತೆ ತಪಸ್ಸು, ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ” ಎಂದು ಹೇಳಿದರು.
ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊಫಸರ್ ಶಂಕರ್, ಉದ್ಯಮಿ ವಿಶ್ವನಾಥ ಶೆಣೈ, ಲೇಖಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು. ಲಹರಿ ಪ್ರಾರ್ಥಿಸಿ, ಶಿಲ್ಪಾ ಜೋಶಿ ಸ್ವಾಗತಿಸಿ, ಪೂರ್ಣಿಮಾ ಜನಾರ್ದನ್ ನಿರೂಪಿಸಿ, ಜನಾರ್ದನ ಕೊಡವೂರು ವಂದಿಸಿ, ಕ.ಸಾ.ಪ. ಘಟಕ ಅಧ್ಯಕ್ಷ ರವಿರಾಜ ಎಚ್.ಪಿ. ಪ್ರಾಸ್ತಾವಿಕ ಮಾತನಾಡಿದರು.