ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಯಲ್ಲಾಪುರ ತಾಲೂಕು ಘಟಕದ ಸಹಕಾರದಲ್ಲಿ ದಿನಾಂಕ 23 ಫೆಬ್ರುವರಿ 2025ರ ಭಾನುವಾರ ಯಲ್ಲಾಪುರದ ಅಡಿಕೆ ಭವನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಗಣೇಶ್ ನಾಡೋರ್, ಭಾಗೀರಥಿ ಹೆಗಡೆ, ತಮ್ಮಣ್ಣ ಬೀಗಾರ, ಬಿ.ಆರ್. ಲಕ್ಷ್ಮಣರಾವ್, ಸತ್ಯಾನಂದ ಪಾತ್ರೋಟ ಸೇರಿದಂತೆ ಹಲವು ಹೆಸರುಗಳು ಕೇಳಿಬಂದವು. ಸ್ಥಳೀಯತೆ, ಸಾಹಿತ್ಯದ ಗಂಭೀರತೆ ಹಾಗೂ ಹಿರಿತನದ ಆಧಾರದ ಮೇಲೆ ಹಿರಿಯ ಸಾಹಿತಿ ತಮ್ಮಣ್ಣ ಬೀಗಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಆಯ್ಕೆ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜು, ರಾಜ್ಯ ಕಾರ್ಯದರ್ಶಿ ಡಾ. ಪಿ. ದಿವಾಕರ ನಾರಾಯಣ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ರಾಜ್ಯ ಸಹ ಕಾರ್ಯದರ್ಶಿ ದೇಸು ಆಲೂರು, ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಶಿವಲೀಲಾ ಹುಣಸಗಿ, ಗೌರವ ಸಲಹೆಗಾರ ಶಂಕರ್, ಗೌರವಾಧ್ಯಕ್ಷ ಪ್ರಮೋದ್ ಹೆಗಡೆ, ತಾಲೂಕು ಅಧ್ಯಕ್ಷೆ ಆಶಾ ಸತೀಶ ಶೆಟ್ಟಿ, ಸಾಹಿತಿಗಳಾದ ಕೃಷ್ಣ ಪದಕಿ, ಭಾರತಿ ಕೆ. ನಲವಡೆ, ದೀಪಾಲಿ ಸಾಮಂತ, ಸುಮಂಗಲಾ ದೇಸಾಯಿ, ದೇವಿದಾಸ ನಾಯ್ಕ, ಬಾಲಚಂದ್ರ ಹೆಗಡೆ, ಸುವರ್ಣ ಮಯ್ಯರ, ಡಾ. ನವೀನಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ
ತಮ್ಮಣ್ಣ ಕೋಮಾರರ ತಂದೆ ನಾರಾಯಣ ಹಾಗೂ ತಾಯಿ ಸೀತೆ. ‘ತಮ್ಮಣ್ಣ ಬೀಗಾರ’ ಎಂಬ ಕಾವ್ಯನಾಮದಿಂದ ಬರೆಯತ್ತಿರುವ ಇವರು ಮೂಲತಃ ಯಲ್ಲಾಪುರ ತಾಲೂಕಿನ ಬೀಗಾರದವರು. ಸ್ನಾತಕೋತ್ತರ ಪದವೀಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಿದ್ದಾಪುರದಲ್ಲಿ ವಾಸಿಸಿರುವ ತಮ್ಮಣ್ಣ ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರು.
ಮಕ್ಕಳ ಸಾಹಿತ್ಯಕ್ಕೆ ಮಲೆನಾಡಿನ ಸೊಗಸನ್ನೂ ಅದರ ಹಚ್ಚ ಹಸಿರಿನ ಹೊದಿಕೆಯನ್ನೂ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ. ಪ್ರಕೃತಿಯ ಪ್ರಶಾಂತ ಪಾಠಗಳು ತುಂಬಾ ಕುತೂಹಲಕರವಾಗಿ ಅವರ ಕೃತಿಗಳಲ್ಲಿ ಅಡಕವಾಗಿವೆ. ಮಕ್ಕಳ ಲೋಕವನ್ನು ಸೊಗಸು ಕಣ್ಣುಗಳಿಂದ ನೋಡುವ, ಸ್ವಚ್ಛಂದದಿಂದ ಕಂಡಿರಿಸುವ ಮುಕ್ತತೆ ಇವರ ಬರಹಗಳಲ್ಲಿ ಹಾಸಿಕೊಂಡಿದೆ. ಮಕ್ಕಳಿಗಾಗಿ ಕವನ, ಕಥೆ, ಕಾದಂಬರಿ, ಲಲಿತ ಬರಹ, ಬಾಲ್ಯದ ನೆನಪಿನ ಲಹರಿ, ಶಿಶು ಪ್ರಾಸ, ಚಿತ್ರ ಪುಸ್ತಕ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.
‘ಬಾವಲಿ ಗುಹೆ’ ಮಕ್ಕಳ ಕಾದಂಬರಿಗೆ 2022ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಬಂದಿದೆ. 2009 ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, 2012ರಲ್ಲಿ ಶಿಕ್ಷಕರ ರಾಷ್ಟ್ರಪ್ರಶಸ್ತಿ ಇವರಿಗೆ ಬಂದಿವೆ. ಇವಲ್ಲದೆ ಇವರ ‘ಹಸಿರೂರಿನ ಹುಡುಗ’ ಪುಸ್ತಕಕ್ಕೆ ‘ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ’, ‘ಮಲ್ನಾಡೆ ಮಾತಾಡು’ ಕೃತಿಗೆ ‘ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ’ ಹಾಗೂ ‘ಮರಬಿದ್ದಾಗ’ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ‘ಮಕ್ಕಳ ಚಂದ್ರ ಪ್ರಶಸ್ತಿ’, ‘ಫ್ರಾಗಿ ಮತ್ತು ಗೆಳೆಯರು’ ಕೃತಿಗೆ ಪುಸ್ತಕ ‘ಸೊಗಸು ಬಹುಮಾನ’ ಬಂದಿವೆ. ಕರ್ನಾಟಕ ಸರ್ಕಾರದ ಬಾಲವಿಕಾಸ ಅಕಾಡೆಮಿಯ ಗೌರವ ಪುರಸ್ಕಾರ, ವ್ಯಂಗ್ಯ ಚಿತ್ರಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಹುಮಾನ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ. ಇವರ ಕಲಾಕೃತಿ, ಸಂದರ್ಶನಗಳು ದೂರದರ್ಶನ ಹಾಗೂ ಆಕಾಶವಾಣಿಯಿಂದ ಪ್ರಸಾರ ಆಗಿವೆ.