ಪುತ್ತೂರು : ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮೌನೇಶ ವಿಶ್ವಕರ್ಮ ಇವರು ರಚಿಸಿದ ‘ತಂತ್ರಜ್ಞಾನದ ಮಾಯೆ’ ವಿಜ್ಞಾನ ನಾಟಕ ಪ್ರಥಮ ಸ್ಥಾನಗಳಿಸಿದ್ದು, ಜಿಲ್ಲಾಮಟ್ಟದ ಅತ್ಯುತ್ತಮ ಕೃತಿ ಪ್ರಶಸ್ತಿಗೂ ಆಯ್ಕೆಯಾಗಿದೆ.
ಚಿತ್ರದುರ್ಗ ತಾಲೂಕು ಮಟ್ಟ ಹಾಗೂ ಚಿತ್ರದುರ್ಗ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಚವಲಿಹಟ್ಟಿಯ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ‘ತಂತ್ರಜ್ಞಾನದ ಮಾಯೆ’ ವಿಜ್ಞಾನ ನಾಟಕವನ್ನು ಅಭಿನಯಿಸಿ ಪ್ರಥಮ ಸ್ಥಾನಗಳಿಸಿ, ಬೆಂಗಳೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ನಾಟಕವನ್ನು ಶಾಲೆಯ ವಿಜ್ಞಾನ ಶಿಕ್ಷಕರಾದ ಸಿ.ಜಿ.ಹಾಲೇಶ್ ಇವರು ನಿರ್ದೇಶಿಸಿದ್ದು, ಉತ್ತಮ ನಿರ್ದೇಶನ, ಉತ್ತಮ ನಟಿ ಪ್ರಶಸ್ತಿಗೂ ಗೊಲ್ಲರಹಟ್ಟಿ ಶಾಲೆಯ ಮಕ್ಕಳ ತಂಡ ಆಯ್ಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಡೆದ ವಿಜ್ಞಾನ ನಾಟಕ ಸ್ಪರ್ಧೆಗೆ ಮೌನೇಶ ವಿಶ್ವಕರ್ಮ ಇವರು ಐದು ನಾಟಕಗಳನ್ನು ನಿರ್ದೇಶಿಸಿದ್ದರು. ಪುತ್ತೂರಿನಲ್ಲಿ ಸುದಾನ ವಸತಿ ಶಾಲೆಯಲ್ಲಿ ‘ರೋಗಗಳ ಮಾಯದಾಟ’, ಸವಣೂರು ಸರ್ಕಾರಿ ಪ್ರೌಢಶಾಲೆಯಲ್ಲಿ ‘ಸಿರಿಧಾನ್ಯ ಮಹಾತ್ಮೆ’ ಹಾಗೂ ಪೆರಿಯಡ್ಕದ ಸರ್ವೋದಯ ಅನುದಾನಿತ ಪ್ರೌಢಶಾಲೆಯಲ್ಲಿ ‘ಡಿಜಿಟಲ್ ಮಾಯೆ’, ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ‘ಆರೋಗ್ಯ ಸಿರಿ’, ಸುಳ್ಯತಾಲೂಕಿನ ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ‘ಅಜ್ಞಾನದಿಂದ ವಿಜ್ಞಾನದೆಡೆಗೆ’ ಎನ್ನುವ ನಾಟಕಗಳನ್ನು ನಿರ್ದೇಶಿಸಿದ್ದು, ರಂಗಾಯಣ ಪದವೀಧರ ರಾಕೇಶ್ ಆಚಾರ್ಯ ನಿರ್ದೇಶನದಲ್ಲಿ ಸಹಕರಿಸಿದ್ದರು.
ಮೌನೇಶ ವಿಶ್ವಕರ್ಮ ಇವರು ಪುತ್ತೂರಿನ ಸಂಪ್ಯ ನಿವಾಸಿಯಾಗಿದ್ದು, ಕಳೆದ 22 ವರ್ಷಗಳಿಂದ ಬಂಟ್ವಾಳದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದು, ನಾಟಕ ರಚನೆ, ನಿರ್ದೇಶನ, ನಟನಾ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿರುವ ಇವರು ‘ಸಂಸಾರ’ ಜೋಡುಮಾರ್ಗ ತಂಡವನ್ನು ಮುನ್ನಡೆಸುತ್ತಿದ್ದು, ರೋಟರಿ ಪುತ್ತೂರು ಎಲೈಟ್ ಇದರ ಸಕ್ರೀಯ ಸದಸ್ಯರಾಗಿದ್ದಾರೆ.