ಮಂಗಳೂರು : ಯಕ್ಷಗಾನ ಚಿಕ್ಕಮೇಳ ತಿರುಗಾಟದಲ್ಲಿ ಶಿಸ್ತು ಮೂಡಿಸುವ ಉದ್ದೇಶದೊಂದಿಗೆ ‘ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದ .ಕ. ಜಿಲ್ಲೆ’ ಹೆಸರಿನ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.
ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ದಿನಾಂಕ 17-06-2024ರ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ “ಈ ಹಿಂದೆ ಚಿಕ್ಕಮೇಳಗಳ ತಿರುಗಾಟದ ಸಂದರ್ಭದಲ್ಲಿ ಶಿಸ್ತು ಉಲ್ಲಂಘನೆ, ಯಕ್ಷಗಾನ ಕಲಿಯದವರಿಂದ ಚಿಕ್ಕಮೇಳ ತಿರುಗಾಟ ಹೀಗೆ ಅನೇಕ ದೂರುಗಳು ಕೇಳಿಬಂದಿತ್ತು. ಇದೇ ಕಾರಣಕ್ಕೆ ಸಮಾನ ಮನಸ್ಕರು ಒಟ್ಟುಸೇರಿ ಚಿಕ್ಕಮೇಳಗಳ ಒಕ್ಕೂಟ ರಚಿಸಿದ್ದೇವೆ. ಈಗಾಗಲೇ 45 ತಂಡಗಳು ಒಕ್ಕೂಟದಲ್ಲಿ ನೋಂದಣಿ ಮಾಡಿಕೊಂಡಿವೆ. ಇನ್ನೂ ಕೆಲವು ತಂಡಗಳು ನೋಂದಣಿ ಮಾಡಿಕೊಳ್ಳಲಿವೆ.” ಎಂದರು.
ಚಿಕ್ಕಮೇಳಗಳು ನೋಂದಣಿಗೊಂಡ ನಂತರ ತಂಡಗಳು ಒಕ್ಕೂಟದ ಅಧಿಕೃತ ಪರವಾನಿಗೆ ಪಡೆದು ತಿರುಗಾಟ ನಡೆಸಲಿದ್ದಾರೆ. ಸಂಜೆ ಘಂಟೆ 6.00 ರಿಂದ ರಾತ್ರಿ 10.30ರ ವರೆಗೆ ಕನ್ನಡ ಅಥವಾ ತುಳುವಿನ ಯಾವುದಾದರೂ ಒಳ್ಳೆಯ ಸಂದೇಶ ಇರುವ ಸನ್ನಿವೇಶದ ಪ್ರದರ್ಶನವನ್ನು ಪ್ರದರ್ಶಿಸಲಿದೆ. ಈ ಪ್ರದರ್ಶನವು ಗರಿಷ್ಠ 20 ನಿಮಿಷ ಮೀರದಂತೆ ನಡೆಯಲಿದೆ.
ಹಿಂದೂ ಹಬ್ಬಗಳ ಸಂದರ್ಭದಲ್ಲಿ ಯಕ್ಷಗಾನ ವೇದಿಕೆಯ ಪ್ರದರ್ಶನ ಹೊರತುಪಡಿಸಿ, ಇತರ ಹಬ್ಬಗಳಾದ ನವರಾತ್ರಿ, ದಸರಾ, ಗಣೇಶೋತ್ಸವ, ಅಷ್ಟಮಿ ಇತ್ಯಾದಿ ಸಂದರ್ಭಗಳಲ್ಲಿ ಯಕ್ಷಗಾನದ ವೇಷಭೂಷಣ ಧಾರಣೆ ಮಾಡಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಪ್ರತಿ ಮನೆಯವರು ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಅವಕಾಶ ನೀಡಿ, ವ್ಯವಸಾಯಿ ಕಲಾವಿದರ ಬದುಕಿಗೆ ನೆರವಾಗಬೇಕು ಎಂದರು. ಒಕ್ಕೂಟ ಉಪಾಧ್ಯಕ್ಷರಾದ ರಮೇಶ ಕುಲಶೇಖರ, ಮೋಹನ ಕಲಂಬಾಡಿ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಕಾರ್ಯದರ್ಶಿ ದಿವಾಕರ ದಾಸ್ ಶ್ರುತಿ ಆರ್ಟ್ಸ್, ಜತೆ ಕಾರ್ಯದರ್ಶಿ ಕಡಬ ದಿನೇಶ ರೈ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ ಒಕ್ಕೂಟದ ಕಚೇರಿ ಬಿ. ಸಿ. ರೋಡ್‌ನ ಶ್ರುತಿ ಆರ್ಟ್ಸ್, ಅಥವಾ ಕುಮಾರ್ ಮಾಲೆಮಾರ್ -9845412049 ಇವರನ್ನು ಸಂಪರ್ಕಿಸಬಹುದು.