ಮಂಗಳೂರು : ನವಭಾರತ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವಭಾರತ ಯಕ್ಷಗಾನ ಅಕಾಡೆಮಿಯ ‘ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಂಗಳೂರಿನ ಮಣ್ಣಗುಡ್ಡೆ ಸಂಘನಿಕೇತನದ ಸುಜ್ಞಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 2-00 ಗಂಟೆಗೆ ‘ಶ್ರೀದೇವಿ ಮಹಿಷಮರ್ದಿನಿ’ ಯಕ್ಷಗಾನ ನಡೆಯಲಿದ್ದು, ಸಂಜೆ 5-00 ಗಂಟೆಗೆ ಡಾ. ಪಿ. ವಾಮನ ಶೆಣೈಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಸಾಧಕರನ್ನು ಸನ್ಮಾನಿಸಲಾಗುವುದು. ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ನವಭಾರತ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಮಧುಸೂದನ ಅಯಾರ್, ಕೋಶಾಧಿಕಾರಿ ಗಣೇಶ್ ರಾವ್, ಪೊಲೀಸ್‌ಲೇನ್ ಶ್ರೀದೇವಿ ದೇವಸ್ಥಾನ ಅಧ್ಯಕ್ಷ ಮಯೂರ್ ಉಳ್ಳಾಲ್, ವಿದ್ವಾಂಸ ಡಾ. ಸತ್ಯಕೃಷ್ಣ ಭಟ್, ವಕೀಲರಾದ ಕುಶಾಲಪ್ಪ, ಸಂತೋಷ್ ಐತಾಳ್ ಭಾಗವಹಿಸುವರು. ಬಳಿಕ ನವಭಾರತ ಯಕ್ಷಗಾನ ಅಕಾಡೆಮಿಯ ಸದಸ್ಯರಿಂದ ‘ಶ್ರೀದೇವಿ ಕೌಶಿಕೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ನವಭಾರತ ರಾತ್ರಿ ಶಾಲೆಯಲ್ಲಿ ನಡೆಯುವ ನವಭಾರತ ಯಕ್ಷಗಾನ ಅಕಾಡೆಮಿ ಕಳೆದ 10 ವರ್ಷಗಳಲ್ಲಿ ಬಯಲಾಟ ಹಾಗೂ ತಾಳಮದ್ದಳೆ ಕೂಟಗಳನ್ನು ನಿಭಾಯಿಸುವ ಸಮರ್ಥ ತಂಡವಾಗಿ ಮೂಡಿಬಂದಿದೆ. ವಿವಿಧ ಹೊಸ ಪ್ರಸಂಗಗಳನ್ನು ಪ್ರದರ್ಶಿಸಿ ಪ್ರೌಢಿಮೆ ಮೆರೆದಿದ್ದು, ಜಾತ್ರೆ, ನವರಾತ್ರಿ, ಗಣೇಶೋತ್ಸವಗಳಲ್ಲಿ ಪ್ರದರ್ಶನ ನೀಡಿದೆ.