ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼ ಪ್ರಕಟವಾಗಿದ್ದು . 2022ನೆಯ ಸಾಲಿನ ಪ್ರಶಸ್ತಿಗೆ ನಾಡಿನ ಹಿರಿಯ ಲೇಖಕಿಯರಾದ, ದಾವಣಗೆರೆಯ ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಹಾಗೂ 2023ನೆಯ ಸಾಲಿನ ಪ್ರಶಸ್ತಿಗಾಗಿ ಮೈಸೂರಿನ ಶ್ರೀಮತಿ ಚಂಪಾವತಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ.
ನಾಡಿನ ಲೇಖಕಿಯರಿಗಾಗಿ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ಈ ದತ್ತಿ ಪ್ರಶಸ್ತಿಯು ಕನ್ನಡ ಸಾರಸ್ವತ ಲೋಕದಲ್ಲಿ ಗಣನೀಯ ಸಾಧನೆ ಮಾಡಿರುವ ಮಹಿಳಾ ಸಾಹಿತಿಯೊಬ್ಬರಿಗೆ ಪ್ರತೀ ವರ್ಷ ಪ್ರದಾನ ಮಾಡುವ ಆಶಯವನ್ನು ಹೊಂದಿರುತ್ತದೆ. ಪ್ರಸ್ತುತ ಪ್ರಶಸ್ತಿಯು ರೂಪಾಯಿ 13,000/- (ಹದಿಮೂರು ಸಾವಿರ) ನಗದು, ಸ್ಮರಣಿಕೆ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ.
ಇದುವರೆಗೂ ನಾಡಿನ 8 ಜನ ಮಹಿಳಾ ಲೇಖಕಿಯರಿಗೆ ಪರಿಷತ್ತಿನ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು ಈ ಬಾರಿಯ ಆಯ್ಕೆ ಸಮಿತಿಯು 2022ನೆಯ ಸಾಲಿನ ಪ್ರಶಸ್ತಿ ಗಾಗಿ ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಅವರನ್ನು ಅಯ್ಕೆ ಮಾಡಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಗುಂಜಿಗನೂರಿನವರಾದ ಇವರು ಸದ್ಯ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ನಾಟಕ ಮೊದಲಾದ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿರುತ್ತಾರೆ. 2023ನೆಯ ಸಾಲಿನ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಶ್ರೀಮತಿ ಚಂಪಾವತಿ ಶಿವಣ್ಣ ಇವರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಕಥಾ ಸಂಕಲನಗಳು, ಕವನ ಸಂಕಲನಗಳು, ಹನಿಗವನ ಸಂಕಲನಗಳು, ವಚನ ಸಂಕಲನ ಹಾಗೂ ಅಭಿನಂದನಾ ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿದಾನಿಗಳ ಪರವಾಗಿ ಶ್ರೀಮತಿ ಅರುಂಧತಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿʼಗೆ ಶ್ರೀಮತಿಯರಾದ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಹಾಗೂ ಶ್ರೀಮತಿ ಚಂಪಾವತಿ ಶಿವಣ್ಣ ಆಯ್ಕೆ
Next Article ಕಾಸರಗೋಡು ಕನ್ನಡ ಹಬ್ಬದ ಪ್ರಯುಕ್ತ ಭರತನಾಟ್ಯ | ಜೂನ್ 27ರಂದು