ಮಂಗಳೂರು : ಅಮೆರಿಕಾದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ದಿನಾಂಕ 30 ಆಗಸ್ಟ್ 2024, 31 ಆಗಸ್ಟ್ 2024 ಮತ್ತು 1 ಸೆಪ್ಟೆಂಬರ್ 2024ರಂದು 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ. ರಿಚ್ಮಂಡ್ ಕನ್ನಡ ಸಂಘ ಮತ್ತು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮ್ಮೇಳನದಲ್ಲಿ ‘ಥಟ್ ಅಂತ ಹೇಳಿ!’ ರಸಪ್ರಶ್ನೆ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಲಿದೆ. ದೂರದರ್ಶನ ಚಂದನ ವಾಹಿನಿಯಲ್ಲಿ ನಿರಂತರ ಪ್ರಸಾರವಾಗುತ್ತ ದಾಖಲೆ ನಿರ್ಮಿಸಿರುವ ಅತ್ಯಂತ ಜನಪ್ರಿಯ ಕಾರ್ಯಕ್ರಮದ ನಿರ್ವಾಹಕ ಡಾ. ನಾ. ಸೋಮೇಶ್ವರ ಅವರನ್ನು ಅಕ್ಕ ಸಮ್ಮೇಳನದ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಾ. ನಾ. ಸೋಮೇಶ್ವರ ಇವರಿಂದ ಆಶಯ ಭಾಷಣ ಇರಲಿದೆ. ಸಮ್ಮೇಳನಾರ್ಥಿಗಳಿಗಾಗಿ ‘ಥಟ್ ಅಂತ ಹೇಳಿ !’ ಕ್ವಿಜ್‌ನ ಪ್ರವೇಶದ ಸುತ್ತು ಸಮ್ಮೇಳನ ನಡೆಯುವ ಸ್ಥಳದಲ್ಲೇ ಲಿಖಿತ ಪರೀಕ್ಷೆಯ ಮೂಲಕ ನಡೆಯುತ್ತದೆ. ಅದರಲ್ಲಿ ಆಯ್ಕೆಯಾಗಿ ಬರುವ ಎಂಟು ಮಂದಿಯನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ, ಟಿವಿಯಲ್ಲಿ ನಡೆಯುವಂತೆಯೇ ಕ್ವಿಜ್ ಕಾರ್ಯಕ್ರಮದ ಮೂಲಕ ಮೌಖಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಹೆಚ್ಚು ಅಂಕ ಗಳಿಸುವ ತಲಾ ಇಬ್ಬರು ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ. ಒಟ್ಟು ನಾಲ್ಕು ಸ್ಪರ್ಧಿಗಳ ಅಂತಿಮ ಸುತ್ತನ್ನು ಸಮ್ಮೇಳನ ಸಭಾಂಗಣದ ವೇದಿಕೆಯಲ್ಲೇ ನಡೆಸುವ ಸಾಧ್ಯತೆಯಿದೆ.