03 ಮಾರ್ಚ್ 2023, ಉಡುಪಿ: 3ನೇ ದಿನದ ಸುಮನಸ ರಂಗ ಹಬ್ಬ(ಫೆಬ್ರವರಿ 28, ಮಂಗಳವಾರ)ದಲ್ಲಿ ಪ್ರದರ್ಶನಗೊಂಡ ದ್ಯಾಟ್ಸ್ ಆಲ್ ಯುವರ್ ಆನರ್ ಕನ್ನಡ ನಾಟಕ – ಪೂರ್ಣಿಮಾ ಜನಾರ್ದನ ಕೊಡವೂರು ಕಂಡಂತೆ
ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ
ತಂಡ: ರಂಗ ಸಂಗಾತಿ, ಮಂಗಳೂರು ರಚನೆ-ನಿರ್ದೇಶನ: ಶಶಿರಾಜ್ ರಾವ್ ಕಾವೂರು
ರಂಗಾಸಕ್ತರು ಪ್ರತಿ ವರುಷ ಕಾಯುವ ರಂಗ ಹಬ್ಬದಲ್ಲಿ ಇವತ್ತಿನ ರಂಗ ಮಂಟಪವನ್ನು ರಂಗಾಗಿಸಿದ್ದು ರಂಗ ಸಂಗಾತಿ ಪ್ರತಿಷ್ಠಾನ ರಿ. ಮಂಗಳೂರು ಪ್ರಸ್ತುತಪಡಿಸಿದ ಶಶಿರಾಜ್ ಕಾವೂರು ಸ್ವತಃ ರಚಿಸಿ ನಿರ್ದೇಶಿಸಿದ ದಾಟ್ಸ್ ಆಲ್ ಯುವರ್ ಆನರ್ ಎಂಬ ರಂಗ ಪ್ರದರ್ಶನ .
ಕೋರ್ಟ್ ಕಲಾಪಗಳ ವಿಷಯಾಧಾರಿತವಾಗಿ ಆರಂಭದಿಂದ ಕೊನೆಯ ದೃಶ್ಯದವರೆಗೂ ಪ್ರೇಕ್ಷಕರನ್ನು ಹದವಾಗಿ ಹಿಡಿದಿಟ್ಟುಕೊಂಡು , ಒಂದಷ್ಟು ಯೋಚನೆಗೆ ಸಿಲುಕಿಸಿ ಅಲ್ಲಲ್ಲಿ ನಗೆ ಹನಿಯ ಉಕ್ಕಿಸುವ ನವಿರಾದ ಹಾಸ್ಯ ಭರಿತ ಸಾಲುಗಳೊಂದಿಗೆ ಆಗಾಗ ಗಾಂಭೀರ ಹೊತ್ತ ಅರ್ಥಪೂರ್ಣ ಪದಪುಂಜಗಳ ಜೋಡಣೆ. ಮನದಲ್ಲಿ ಮೆಲುಕು ಹಾಕುವಂತಹ ಕನ್ನಡ ಭಾಷಾ ಕಸ್ತೂರಿಯ ಸೊಬಗಿನೊಂದಿಗೆ ಅಡುಗೆಯ ರುಚಿ ಹೆಚ್ಚಿಸುವ ಒಗ್ಗರಣೆಯ ರೀತಿಯಲಿ ನಾಟಕದ ಮಧ್ಯಮಧ್ಯ ಸಂಸ್ಕೃತ ಶ್ಲೋಕಗಳ ಉಲ್ಲೇಖ. ಒಂದು ಅರ್ಥಪೂರ್ಣ ಸುಂದರ ಅನುಭಾವದ ನಾಟಕವನ್ನು ಇವತ್ತು ಅನುಭವಿಸಲು ಕಾರಣರಾದವರು ನಾಟಕದ ರಚನೆಯೊಂದಿಗೆ ನಿರ್ದೇಶನವನ್ನು ಮಾಡಿದ ಯುವ ಸಾಹಿತಿ ಶಶಿರಾಜ್ ಕಾವೂರು ಅಭಿನಂದನಾರ್ಹರು.
ಒಂದು ನಾಟಕ ರಚನೆ ಆದ ಬಳಿಕ ನಾಟಕಕಾರನ ಕನಸಿನಂತೆ, ಮನಸ್ಸಿನಂತೆ ನಾಟಕ ಪ್ರದರ್ಶನ ಆಗಬೇಕಾದಲ್ಲಿ ಅದರ ನಿರ್ದೇಶನವನ್ನು ಕೂಡ ನಾಟಕಕಾರನೇ ಮಾಡಿದರೆ ಅದರ ಫಲಿತಾಂಶ ಒಂದಷ್ಟು ಅರ್ಥಪೂರ್ಣ. ತನ್ನ ಮನದ ಭಾವನೆಗಳಿಗೆ ನೀಡಿದ ಅಕ್ಷರ ರೂಪವು ನಿರ್ದೇಶನದಲ್ಲಿ ಪ್ರತಿಫಲಿಸಿದಾಗ ಒಂದು ಉತ್ತಮ ನಾಟಕ ಪ್ರಸ್ತುತಿ ಸುಲಭ ಸಾಧ್ಯ. ಅದಕ್ಕೊಂದು ಉಪಮೆ ದಾಟ್ಸ್ ಆಲ್ ಯುವರ್ ಆನರ್ ನಾಟಕ.
ಯಾವುದೇ ನಾಟಕದ ಯಶಸ್ವಿಗೆ ನಾಟಕ ರಚನೆ ಹಾಗೂ ನಿರ್ದೇಶನ ಒಂದು ಮಾನ ದಂಡವಾದರೂ ಆ ನಾಟಕಕ್ಕೆ ಜೀವ ತುಂಬುವುದು ಅದರಲ್ಲಿ ಅಭಿನಯಿಸುವ ಕಲಾವಿದರು. ಒಂದು ಯಶಸ್ವಿ ನಾಟಕದ ಸೂತ್ರಧಾರಿಗಳು ಕಲಾವಿದರು ಎಂದರೆ ತಪ್ಪಾಗಲಿಕ್ಕಿಲ್ಲ .ತನ್ನ ಘನ ಗಾಂಭೀರ ವ್ಯಕ್ತಿತ್ವ, ಎಲ್ಲಿಯೂ ತಡವರಿಸದ ಸ್ಪಷ್ಟ ಮಾತುಗಳಿಂದ ಇಡೀ ನಾಟಕದ ಜೀವಾಳವಾಗಿ ಅಭಿನಯಿಸಿದ ಮದನಮೋಹನ ರಾವ್ ಎಂ ಎಂ ಆರ್ (ಗೋಪಿನಾಥ್ ಭಟ್ ),ತನ್ನ ತೂಕದ ಮಾತುಗಳಿಂದ,ನಾಟಕದ ಪಾತ್ರದ ವಯಸ್ಸಿಗೆ ತಕ್ಕಂತೆ ಅಭಿನಯಿಸಿ ತನ್ನ ಪಾತ್ರಕ್ಕೆ ಜೀವ ತುಂಬಿ ನಟಿಸಿ ಮನೆಗೆದ್ದ ನ್ಯಾಯಾಧೀಶ (ಲಕ್ಷ್ಮಣ ಮಲ್ಲೂರ್ ),ನಾಟಕ ದುದ್ದಕ್ಕೂ ತನ್ನ ವಿಶಿಷ್ಟ ಆಂಗಿಕ ಅಭಿನಯ, ಮಧ್ಯೆ ಮಧ್ಯೆ ತಮಾಷೆಯ ಮಾತುಗಳಿಂದ ಶೋತ್ರಗಳನ್ನು ನಗೆಗಡಲಲ್ಲಿ ತೇಲಿಸಿ ಒಲಿಸಿಕೊಂಡ ಜನಪ್ರಿಯ ಶಿಂಧೆ (ಮೈಮ್ ರಾಮದಾಸ್ ),ಪಂಚರ್ ಹಾಕುವವನ ಪಾತ್ರದಲ್ಲಿ ಅಮಾಯಕನಂತೆ ನಟಿಸಿ ಸೈ ಅನಿಸಿಕೊಂಡ ಜಯರಾಮ್ (ಮುರಳೀಧರ ಕಾಮತ್), ಅಂತೆಯೇ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ ದತ್ತಾತ್ರೇಯ (ಸಂತೋಷ್ ಶೆಟ್ಟಿ) ವಕೀಲ (ರಂಜನ್ ಬೋಳೂರ್ ) ಮೆಲು ವ್ಯಕ್ತಿತ್ವದ ಮೃದು ಮಾತಿನ ಗಣಪಯ್ಯ, ವೇದಿಕೆ ಪ್ರವೇಶಿಸಿ ಅಭಿನಯಿಸಿದ ಐದೇ ನಿಮಿಷಗಳಲ್ಲಿ ಪ್ರೇಕ್ಷಕರ ಮೊಗದಲ್ಲಿ ನಗೆ ತಂದ ಚಿನ್ನಸ್ವಾಮಿ ಪಳನಿ ಸ್ವಾಮಿ ( ಸುಧೀರ್ ರಾಜ್ ಉರ್ವ) , ಹೀಗೆ ಅಭಿನಯಿಸಿದ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದವರು .ಅಲ್ಲದೆ ಕಿವಿಗಳಿಗೆ ಇಂಪಾದ ಮನಕೆ ತಂಪು ನೀಡಿದ ಹಿತವಾದ ಸಂಗೀತ ,ನಾಟಕ ದುದ್ದಕ್ಕೂ ಅರ್ಥಪೂರ್ಣವಾದ ಸಾಹಿತ್ಯ, ಪ್ರತಿಯೊಂದು ದೃಶ್ಯಕ್ಕೆ ಒಪ್ಪುವ ಅಪೂರ್ವ ರಂಗ ಸಜ್ಜಿಗೆ ಹೀಗೆ ಒಂದು ಯಶಸ್ವಿ ನಾಟಕ ಪ್ರದರ್ಶನಕ್ಕೆ ಅಗತ್ಯವಾದ ಎಲ್ಲಾ ವಿಷಯಗಳನ್ನು ಒಳಗೊಂಡ ದಾಟ್ಸ್ ಆಲ್ ಯುವರ್ ಆನರ್ ನಿಜವಾಗಿಯೂ ಪ್ರೇಕ್ಷಕರ ಮನದಲ್ಲಿ ಬಹುಕಾಲ ಉಳಿಯುವಂತಹ, ಮನಕ್ಕೆ ಮುದ ನೀಡಿದಂತಹ ನಾಟಕ ಎಂದರೆ ಸುಳ್ಳಲ್ಲ. ಈ ನಾಟಕದ ಎಲ್ಲಾ ಕಲಾವಿದರಿಗೆ ,ನಾಟಕದ ರಚನೆ ಹಾಗೂ ನಿರ್ದೇಶನ ಮಾಡಿದ ಖ್ಯಾತ ಸಾಹಿತಿ ಶಶಿರಾಜ್ ಕಾವೂರು ಹಾಗು ಈ ನಾಟಕ ರಂಗಹಬ್ಬದಲ್ಲಿ ಪ್ರಸ್ತುತ ಪಡಿಸಲು ಕಾರಣವಾದ ಸುಮನಸಾ ಸಂಸ್ಥೆ ಕೊಡವೂರು ಇವರೆಲ್ಲರಿಗೂ ಅಭಿನಂದನೆಗಳು, ಅಭಿವಾದನೆಗಳು.
- ಪೂರ್ಣಿಮಾ ಜನಾರ್ದನ ಕೊಡವೂರು